ಹಾನಗಲ್ಲಿನಲ್ಲಿ ಗ್ರಾಮದೇವಿ ಶಿಲಾ ಮಂದಿರ ಲೋಕಾರ್ಪಣೆ, ಗ್ರಾಮದೇವಿ ಪ್ರತಿಷ್ಠಾಪನೆ, ಕಳಸಾರೋಹಣದ ಅಂಗವಾಗಿ ೨ ಸಾವಿರಕ್ಕೂ ಅಧಿಕ ಸುಮಂಗಲೆಯರಿಂದ ಪೂರ್ಣಕುಂಭದ ಶೋಭಾಯಾತ್ರೆಯಲ್ಲಿ ಮಂದಿರದ ನೂತನ ಕಳಸದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಹಾನಗಲ್ಲ: ಹಾನಗಲ್ಲಿನಲ್ಲಿ ಗ್ರಾಮದೇವಿ ಶಿಲಾ ಮಂದಿರ ಲೋಕಾರ್ಪಣೆ, ಗ್ರಾಮದೇವಿ ಪ್ರತಿಷ್ಠಾಪನೆ, ಕಳಸಾರೋಹಣದ ಅಂಗವಾಗಿ ೨ ಸಾವಿರಕ್ಕೂ ಅಧಿಕ ಸುಮಂಗಲೆಯರಿಂದ ಪೂರ್ಣಕುಂಭದ ಶೋಭಾಯಾತ್ರೆಯಲ್ಲಿ ಮಂದಿರದ ನೂತನ ಕಳಸದ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಮಂಗಳವಾರ ಬೆಳಗ್ಗೆ ಹಾನಗಲ್ಲ ಪಟ್ಟಣವೂ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ೨ ಸಾವಿರಕ್ಕೂ ಅಧಿಕ ಸುಮಂಗಲೆಯರು ಪೂರ್ಣಕುಂಭದೊಂದಿಗೆ ಕಿತ್ತೂರು ಚೆನ್ನಮ್ಮ ರಸ್ತೆ ಮಾರ್ಗವಾಗಿ ಚಾವಡಿ ಕ್ರಾಸ್, ಸೋಮವಾರಪೇಟೆ, ಕಲ್ಲಭಾವಿ ಕ್ರಾಸ್, ಟಿಜಿ ರಸ್ತೆ ಮೂಲಕವಾಗಿ ಗ್ರಾಮ ದೇವಿ ಮಂದಿರದವರೆಗೆ ಶೋಭಾಯಾತ್ರೆ ನಡೆಯಿತು. ದ್ಯಾಮವ್ವ ನಿನ್ನಾಲ್ಕುಧೋ ಉಧೋ ಎಂದು ತಮ್ಮ ಭಕ್ತಿಯ ಘೋಷಣೆ ಹೇಳುತ್ತ ಭಕ್ತಿ ಸಮರ್ಪಿಸಿದರು. ಜಡಿಮಳೆಯಲ್ಲಿಯೂ ಸುಮಂಗಲೆಯರು ಕುಂಭ ಹೊತ್ತು ಸಾಗಿದ್ದು ವಿಶೇಷವಾಗಿತ್ತು.

ಇದೇ ದಿನ ಬೆಳಗ್ಗೆ ಗ್ರಾಮದೇವಿ ನೂತನ ಶಿಲಾಮಂದಿರದಲ್ಲಿ ಮಹಾಗಣಪತಿ ಪೂಜೆ, ಕಂಕಣಧಾರಣೆ ದೇವತಾ ಪ್ರತಿಷ್ಠಾಪನೆ ಪೂರ್ವಾಂಗ ದೇವಾಲಯ ಶುದ್ಧೀಕರಣ, ಸಪ್ತಶತಿ ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ ಸಮಿತಿ ಅಧ್ಯಕ್ಷ ಮಂಜುನಾಥ ನಾಗಜ್ಜನವರ ಧರ್ಮ ಧ್ವಜಾರೋಹಣ ನೆರವೇರಿಸಿದರು. ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳವರು ನೂತನ ಮಂದಿರ ಲೋಕಾರ್ಪಣೆ ಧಾರ್ಮಿಕ ವಿಧಿ ವಿಧಾನಗಳ ವ್ಯವಸ್ಥೆ, ಪ್ರಸಾದದ ವ್ಯವಸ್ಥೆಯನ್ನು ವೀಕ್ಷಿಸಿ ಭಕ್ತರನ್ನು ಹರಿಸಿದರು.

ಅನ್ನಸಂತರ್ಪಣೆ: ದೇವಸ್ಥಾನ ಸಮಿತಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುವ್ಯವಸ್ಥಿತವಾಗಿ ಅನ್ನ ಸಂತರ್ಪಣೆ ವ್ಯವಸ್ಥೆಗೊಳಿಸಿತ್ತು. ದೇವಿಯ ಭಕ್ತರು ಹಿರಿ ಕಿರಿಯರು ಇಡೀ ಪ್ರಸಾದ ವ್ಯವಸ್ಥೆಯ ನಿರ್ವಹಣೆಯಲ್ಲಿ ಸಹಕರಿಸುತ್ತಿದ್ದುದು ವಿಶೇಷವಾಗಿತ್ತು. ಮೂರು ದಿನಗಳ ಕಾಲ ಇಲ್ಲಿ ಅನ್ನಸಂತರ್ಪಣೆ ನೆರವೇರಲಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಗ್ರಾಮದೇವಿ ಜಾತ್ರಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ ನಾಗಜ್ಜನವರ ಹಾಗೂ ಕೋಶಾಧ್ಯಕ್ಷ ರಾಜು ಗೌಳಿ, ಹಾನಗಲ್ಲಿನ ಗ್ರಾಮದೇವಿ ಭಕ್ತರ ಬಹುದಿನಗಳ ಶಿಲಾ ಮಂದಿರ ನಿರ್ಮಾಣದ ಕನಸು ಭಕ್ತರ ತನು ಮನದ ಸೇವೆ ದಾನ ಧರ್ಮಗಳ ಮೂಲಕ ಯಶಸ್ವಿಯಾಗಿ ನಡೆದಿದೆ. ಇಂದಿನ ಶೋಭಾಯಾತ್ರೆಯಲ್ಲಿ ೫ ಸಾವಿರಕ್ಕೂ ಹೆಚ್ಚು ಸುಮಂಗಲೆಯರು ಹಾಗೂ ಭಕ್ತರು ಪಾಲ್ಗೊಂಡುದು ಸಂತಸದ ವಿಶೇಷವಾಗಿತ್ತು. ಹಾನಗಲ್ಲಿನ ಆರಾಧ್ಯ ದೈವವಾದ ಗ್ರಾಮದೇವಿ (ದ್ಯಾಮವ್ವ) ಭಕ್ತರ ಇಷ್ಟಾರ್ಥ ಈಡೇರಿಸುವ ಅಧಿದೇವತೆ ಎಂಬ ವಿಶ್ವಾಸ ಭಕ್ತರಲ್ಲಿ ಇದೆ. ಈ ಎಲ್ಲ ಸಂಭ್ರಮ ಭಕ್ತರ ಮನದಿಚ್ಛೆಯ ಆಧ್ಯಾತ್ಮಿಕ ಸಂಭ್ರಮವಾಗಿದ್ದು ಇದು ಹಾನಗಲ್ಲ ಗ್ರಾಮದೇವಿ ಇತಿಹಾಸಕ್ಕೆ ಹೊಸ ಸೇರ್ಪಡೆಯಾಗಿದೆ. ಗ್ರಾಮದೇವಿಯ ಭಕ್ತರಾಗಿರುವ ಹಿರಿಯರು ಯುವಕರು ಮಹಿಳೆಯರು ಇದಕ್ಕಾಗಿ ಒಮ್ಮನಸ್ಸಿನಿಂದ ಶ್ರಮಿಸಿದ್ದರ ಫಲ ಇದೆಲ್ಲದರ ಯಶಸ್ಸು ಎಂದರು.