ತಾಲೂಕಿನ ಬಗರ ಹುಕುಂ ಸಾಗುವಳಿದಾರರ ರೈತರ ಸಮಸ್ಯೆಗೆ ಪರಿಹಾರ ಮತ್ತು ಹಕ್ಕುಪತ್ರ ನೀಡಲು ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ರೈತರು ಮಂಗಳವಾರ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟಿಸಿ ತಹಸೀಲ್ದಾರ್ ಆರ್.ಎಚ್. ಭಾಗವಾನ ಅವರಿಗೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ತಾಲೂಕಿನ ಬಗರ ಹುಕುಂ ಸಾಗುವಳಿದಾರರ ರೈತರ ಸಮಸ್ಯೆಗೆ ಪರಿಹಾರ ಮತ್ತು ಹಕ್ಕುಪತ್ರ ನೀಡಲು ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ರೈತರು ಮಂಗಳವಾರ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟಿಸಿ ತಹಸೀಲ್ದಾರ್ ಆರ್.ಎಚ್. ಭಾಗವಾನ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಸರ್ಕಾರಿ ಜಾಗ ಮತ್ತು ಅರಣ್ಯ ಇಲಾಖೆ ಸಂಬಂಧಪಟ್ಟ ಜಾಗದಲ್ಲಿ ಸರಿಸುಮಾರು 30-40 ವರ್ಷಗಳ ಕಾಲ ಸಾಗುವಳಿ ಮಾಡಿದ ರೈತರಿಗೆ ಈಗ ಅರಣ್ಯ ಇಲಾಖೆ ಅಧಿಕಾರಿಗಳು ಕಷ್ಟಕೊಟ್ಟು ಅವರನ್ನು ಒಕ್ಕಲೆಬ್ಬಿಸುವ ಕಾರ್ಯ ಮಾಡುತ್ತಿದ್ದಾರೆ. ಇದರಿಂದ ಸಾಗುವಳಿ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಣ್ಣ ಹಿಡುವಳಿ ಮಾಡುವ ರೈತರಿಗೆ ತೊಂದರೆ ಕೊಡುವ ಅರಣ್ಯ ಇಲಾಖೆ ಸ್ಥಳೀಯ ಸಮಸ್ಯೆ ಬಗ್ಗೆ ಅರ್ಥಮಾಡಿಕೊಂಡು ಸರಿಯಾಗಿ ರೈತರಿಗೆ ಮನವರಿಕೆ ಮಾಡದೆ ಏಕಾಏಕಿ ಪಂಚಮಿ ಹಬ್ಬ ಇದ್ದರೂ ಆ.17ರಂದು ಬೆಳಗ್ಗೆ 8ರ ಸುಮಾರು ಐರಣಿ ಗ್ರಾಮದ ರೈತರು ಸಾಗುವಳಿ ಮಾಡಿದ ಭೂಮಿಯಲ್ಲಿ ಜೆಸಿಬಿ ಮೂಲಕ ಗುಂಡಿಗಳನ್ನು ತೋಡಿ ಗಿಡಗಳನ್ನು ನೆಡಲಿಕ್ಕೆ ಮುಂದಾಗಿದ್ದಾರೆ. ಆಗ ಅಲ್ಲಿದ್ದ ರೈತರು ಸ್ಥಳಕ್ಕೆ ಧಾವಿಸಿ ಸಾಗುವಳಿ ಮಾಡುವ ರೈತರು ನಾವು ತಲೆತಲಾಂತರದಿಂದ ಸಾಗುವಳಿ ಮಾಡುತ್ತ ಬಂದಿದ್ದೇವೆ. ದಯಮಾಡಿ ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಬೇಡಿ, ತಾವು ಬೆಳೆಯಲಿಕ್ಕೆ ಭೂಮಿಯನ್ನು ಅನುಕೂಲ ಮಾಡುವಂತೆ ವಿನಂತಿಸಿದ್ದಾರೆ. ಆದರೆ ಅರಣ್ಯ ಅಧಿಕಾರಿಗಳು ಇದಕ್ಕೆ ಕ್ಯಾರೆ ಎನ್ನದೆ ರೈತರ ಮೇಲೆ ದೌರ್ಜನ್ಯ ಮಾಡಿರುವುದು ಖಂಡನೀಯ ಮತ್ತು ಹೀಲದಹಳ್ಳಿ ಗ್ರಾಮದ ರೈತರು ಬಗರ ಹುಕುಂ ಕಾಯ್ದೆಯಡಿಯಲ್ಲಿ ಸಾಗುವಳಿ ಮಾಡಿ ತಮ್ಮ ಕಾನೂನಿನ ಚೌಕಟ್ಟಿನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದರೂ ಕೂಡ ಇಲ್ಲಿಯವರೆಗೂ ಪಟ್ಟ ಕೊಡದಿರುವುದು ಖಂಡನೀಯ. ಕಾರಣ ತಾಲೂಕಿನ ಬಗರ ಹುಕುಂ ಸಾಗುವಳಿದಾರರ ರೈತರನ್ನು ಕರೆಸಿ ತಾವು ತಾಲೂಕಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಗರ ಹುಕುಂ ಕಾಯ್ದೆಯಡಿಯಲ್ಲಿ ಸಾಗುವಳಿ ಮಾಡಿದ ರೈತರನ್ನು ಆ. 24ರ ಒಳಗಾಗಿ ಸಭೆಯನ್ನು ಕರೆದು ತಾಲೂಕಿನ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದರೆ ಆ. 25ರಿಂದ ತಾಲೂಕ ದಂಡಾಧಿಕಾರಿಗಳ ಕಚೇರಿಯ ಮುಂದೆ ನೊಂದ ರೈತರೊಂದಿಗೆ ಹಕ್ಕುಪತ್ರ ಮತ್ತು ರೈತರ ಸಮಸ್ಯೆ ಬಗೆಹರಿಸುವವರೆಗೂ ಅಹೋರಾತ್ರಿ ಧರಣಿ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್.ಎಚ್. ಭಾಗವಾನ ಅವರು ಆ. 21ರ ಒಳಗಾಗಿ ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ನಾರಾಯಣಪ್ಪ ಲಮಾಣಿ, ಸಂತೋಷ ಎಲ್., ಪ್ರಶಾಂತ ಬಣಕಾರ, ಪರಮೇಶ ಪೂಜಾರ, ದುರ್ಗಪ್ಪ ಬಾಲಬಸವರ, ಕೊಟ್ರೇಶ ಉಜ್ಜೇರ, ಅಣ್ಣೆಪ್ಪ ಸಣ್ಣಕೊಟ್ರಪ್ಪನವರ, ರಮೇಶ ಪೂಜಾರ, ಶಂಕ್ರಾಚಾರಿ ಬಡಿಗೇರ, ಬಾಬು ಲಗುಬಗಿ, ಬಸವರಾಜ ಲಗುಬಗಿ, ಭರಮಪ್ಪ ಬಣಕಾರ, ಚಂದ್ರಪ್ಪ ಲಮಾಣಿ, ಶೈಲಮ್ಮ ಹರನಗಿರಿ, ಲೀಲಮ್ಮ ಮೇಗಳಗೆರಿ, ಈರಣ್ಣ ಕೊಂಡಜ್ಜಿ, ಪ್ರವೀಣ ಕೆ.ಎಸ್., ಬಸವರಾಜ ಮೇಗಳಗೆರಿ, ನಾಗರಾಜ ಅಣ್ಣೇರ, ಹನುಮಂತಪ್ಪ ಬಾಲಬಸವರ, ಸುರೇಶ ಕೊಲಕುಂಟೆ, ಬಸಪ್ಪ ಬಾರ್ಕಿ, ಡಿಳ್ಳೆಪ್ಪ ಕಂಬಳಿ, ಹನುಮಂತಪ್ಪ ಹಿತ್ತಲಮನಿ ಮತ್ತಿತರರಿದ್ದರು.