ಉದ್ಯಮಶೀಲತೆ ಸಾಧಿಸುವತ್ತ ಇಸ್ರೋ ಗಮನ

KannadaprabhaNewsNetwork | Published : Oct 6, 2023 1:17 AM

ಸಾರಾಂಶ

ಬಾಹ್ಯಾಕಾಶ ಮತ್ತು ಉದ್ಯಮಶೀಲತೆ ಸಾಧಿಸುವತ್ತ ಇಸ್ರೋ ಗಮನ ಹರಿಸುತ್ತಿದೆ ಎಂದು ಇಸ್ರೋ ಮತ್ತು ಯು. ಆರ್. ರಾವ್ ಸೆಟಲೈಟ್ ಸೆಂಟರ್ ವಿಜ್ಞಾನಿ ವಿ. ರಮೇಶ್ ನಾಯ್ಡು ಹೇಳಿದರು.
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ಬಾಹ್ಯಾಕಾಶ ಮತ್ತು ಉದ್ಯಮಶೀಲತೆ ಸಾಧಿಸುವತ್ತ ಇಸ್ರೋ ಗಮನ ಹರಿಸುತ್ತಿದೆ ಎಂದು ಇಸ್ರೋ ಮತ್ತು ಯು. ಆರ್. ರಾವ್ ಸೆಟಲೈಟ್ ಸೆಂಟರ್ ವಿಜ್ಞಾನಿ ವಿ. ರಮೇಶ್ ನಾಯ್ಡು ಹೇಳಿದರು. ನಗರದ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಬೆಂಗಳೂರಿನ ಇಸ್ರೋ ಮತ್ತು ಯು.ಆರ್. ರಾವ್ ಸೆಟಲೈಟ್ ಸೆಂಟರ್ ವತಿಯಿಂದ ವಿಶ್ವ ಬಾಹ್ಯಾಕಾಶ ವಾರ ಆಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಬಾಹ್ಯಾಕಾಶವನ್ನು ಮನುಷ್ಯರು ಹೇಗೆ ಉಪಯೋಗಿಸುತ್ತಾರೆ ಎಂಬುದರ ಮೇಲೆ ಬಾಹ್ಯಾಕಾಶ ಸುಸ್ಥಿರತೆ ಅವಲಂಬಿತವಾಗಿದೆ. ಅದರಲ್ಲೂ ಭೂಮಿಯ ಸುತ್ತ ಇರುವ ಕಕ್ಷೆಯ ಪ್ರದೇಶವನ್ನು ಮನುಷ್ಯರು ಹೇಗೆ ಬಳಸುತ್ತಾರೆ ಎಂಬುದು ಮುಖ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಶಿವಕುಮಾರ ಬಿ. ಮಾತನಾಡಿ, ಇಸ್ರೋ ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಮಹತ್ವದ ಕೊಡುಗೆ ನೀಡಿದೆ. ಮುಂಬರುವ ವರ್ಷಗಳಲ್ಲಿ ಪ್ರಮುಖ ಪ್ರಗತಿ ಮುಂದುವರಿಸಲು ಇಸ್ರೋ ಉತ್ತಮ ಸ್ಥಾನದಲ್ಲಿದೆ ಎಂದರು. ಡಾ. ರಾಘವೇಂದ್ರ ಕುಲಕರ್ಣಿ, ಮಹಾವಿದ್ಯಾಲಯ ಆಡಳಿತ ಮಂಡಳಿ ಸದಸ್ಯ ಬಿ.ಎಸ್. ಸಣ್ಣಗೌಡರ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳ ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಡಾ. ಎಂ.ಈ. ಶಿವಕುಮಾರ ಹೊನ್ನಾಳಿ, ಡಾ. ಬಿ. ಮಹೇಶ್ವರಪ್ಪ, ಪ್ರೊ. ಭಾವನಾ ಪಾಟೀಲ ಉಪಸ್ಥಿತರಿದ್ದರು.

Share this article