ಕನ್ನಡಪ್ರಭ ವಾರ್ತೆ ಮಳವಳ್ಳಿ
ಗ್ರಾಮದ ಸರ್ವೇ ನಂ.375ರ ಸರ್ಕಾರಿ ಭೂಮಿಯಲ್ಲಿ ವಾಸವಾಗಿರುವ 42 ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು, ಪ್ರಾಂತ ರೈತ ಸಂಘದ ಸದಸ್ಯರು, ಸಿಪಿಐ(ಎಂ)ನ ಮುಖಂಡರು ಮಂಗಳವಾರದಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ಆರಂಭಿಸಿದ್ದರು.
ತಹಸೀಲ್ದಾರ್ ಲೋಕೇಶ್ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರೂ ಕೂಡ ಇದಕ್ಕೊಪ್ಪದೇ ಪ್ರತಿಭಟನೆ ಮುಂದುವರಿಸಿ ರಾತ್ರಿ ಕಂದಾಯ ಇಲಾಖೆ ಆವರಣದಲ್ಲಿಯೇ ಅಡುಗೆ ಮಾಡಿ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿಸಿದ್ದರು.ಪ್ರಾಂತ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಮಾತನಾಡಿ, ಸಿದ್ಧವಿರುವ ಹಕ್ಕುಪತ್ರ ವಿತರಣೆಗೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಎಲ್ಲರ ಭರವಸೆ ಮೇರೆಗೆ ಧರಣಿ ವಾಪಸ್ ಪಡೆಯುತ್ತಿದ್ದು, ಒಂದು ತಿಂಗಳೊಳಗೆ ಹಕ್ಕುಪತ್ರ ನೀಡದಿದ್ದರೆ ನಮ್ಮ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಕಾರ್ಯದರ್ಶಿ ದೇವಿ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಸಿಐಟಿಯು ಮುಖಂಡ ಜಿ.ರಾಮಕೃಷ್ಣ, ಮುಖಂಡರಾದ ಎನ್.ಲಿಂಗರಾಜಮೂರ್ತಿ, ಹನುಮೇಗೌಡ, ಮೂರ್ತಿ, ವಿಷಕಂಠ, ರಾಜು, ಮಹದೇವು, ಶಿವಕುಮಾರ್, ನಂಜುಂಡಸ್ವಾಮಿ, ಗುರುಸ್ವಾಮಿ, ಸುನಿಲ್, ಪ್ರಮೋದ್, ಸುಶೀಲಾ, ಮಹದೇವಮ್ಮ, ವಿಮಲಾ, ಮೀನಾಕ್ಷ್ಮಿ, ನಾಗಮ್ಮ ಸೇರಿದಂತೆ ಇತರರು ಇದ್ದರು.