ಕೆಡಿಪಿ ಸಭೆಗೆ ಗೈರಾದವರಿಗೆ ನೋಟಿಸ್‌ ಜಾರಿಗೊಳಿಸಿ: ಸಚಿವ ಡಾ.ಶರಣಪ್ರಕಾಶ ಪಾಟೀಲ್

KannadaprabhaNewsNetwork | Published : Nov 5, 2024 12:36 AM

ಸಾರಾಂಶ

ರಾಯಚೂರಿನ ಜಿಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಸಭೆಗೆ ಗೈರಾದ ಇಬ್ಬರು ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳ ಡೈರಿಯನ್ನು ಕಾಲಕಾಲಕ್ಕೆ ಪರಿಶೀಲಿಸುವಂತೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರು ಜಿಲ್ಲಾಧಿಕಾರಿ ನಿತೀಶ್‌ ಕೆ. ಹಾಗೂ ಜಿಪಂ ಸಿಇಒ ಪಾಂಡ್ವೆ ರಾಹುಲ್‌ ತುಕಾರಾಂ ಅವರಿಗೆ ಸೋಮವಾರ ಸೂಚನೆ ನೀಡಿದರು.

ಸ್ಥಳೀಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಜಿಲ್ಲಾ ಮಟ್ಟದ ಅಧಿಕಾರಿಗಳು ಜವಾ ಬ್ದಾರಿಯುತವಾಗಿ ಕೆಲಸ-ಕಾರ್ಯಗಳನ್ನು ಮಾಡಬೇಕು, ಪ್ರತಿ ತಿಂಗಳು ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಸಭೆಗಳನ್ನು ನಡೆಸಬೇಕು, ಅಕ್ರಮ, ಭ್ರಷ್ಟಾಚಾರ ಕಂಡುಬಂದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ವರದಿಯನ್ನು ನೀಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಜೋಳ ಖರೀದಿ ಕೇಂದ್ರ ಸ್ಥಾಪಿಸಲು ತ್ವರಿತವಾಗಿ ನಿರ್ಧಾರ ಕೈಕೊಳ್ಳಬೇಕು. ಕಳೆದ ವರ್ಷ ಖರೀದಿ ಕೇಂದ್ರ ವಿಳಂಬವಾಗಿದ್ದರಿಂದ ರೈತರು ತೊಂದರೆ ಅನುಭವಿಸುವಂತಾಯಿತು. ಕೂಡಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಬೆಳೆ ಕಟಾವು ಹಂತದಲ್ಲೇ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಅಕ್ರಮ ಕುರಿತು ಯಾವುದಾದರೂ ಅರ್ಜಿಗಳು ಬಂದಲ್ಲಿ ಕೂಡಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಸತ್ಯವಿದ್ದರೆ ಕ್ರಮಕ್ಕೆ ಮುಂದಾಗಬೇಕು. ಅಧಿಕಾರಿಗಳು ರೈತರ ಸ್ಥಳಗಳಿಗೆ ಹೋಗಿ ವೀಕ್ಷಣೆ ಮಾಡಬೇಕು. ಅಲ್ಲದೆ ಜಿಲ್ಲೆಯ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರಲ್ಲಿ ಜಾಗೃತಿ ಮೂಡಿಸಬೇಕು. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಹನಿ ನೀರಾವರಿ ಯೋಜನೆ ಪಡೆದ ರೈತರು ಜೀವನ ಪರಿ ಸೌಲಭ್ಯ ಪಡೆಯು ವಂತಿಲ್ಲ. ವ್ಯವಸ್ಥೆಯನ್ನು ಬದಲಾವಣೆ ಮಾಡುವ ಸಲುವಾಗಿ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಭೇಟಿ ಅಲ್ಲಿಯ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ಕೊಳ್ಳಬೇಕು. 10 ಹಾಗೂ 12ನೇ ತರಗತಿಯ ಫಲಿತಾಂಶವನ್ನು ಉತ್ತಮಗೊಳಿಸಬೇಕೆಂದರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸಚಿವ ಎನ್‌.ಎಸ್‌.ಬೋಸರಾಜು, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಹಾಗೂ ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ್, ಮಾನ್ವಿ ಶಾಸಕ ಹಂಪಯ್ಯ ನಾಯಕ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ,ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಬಸನಗೌಡ ಬಾದರ್ಲಿ, ಡಾ.ಚಂದ್ರಶೇಖರ ಬಿ.ಪಾಟೀಲ್, ಶರಣಗೌಡ ಪಾಟೀಲ್ ಬಯ್ಯಾಪೂರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಬಿ.ರೇಜು, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕಾರಾಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಸೇರಿ ನಾಮ ನಿರ್ದೇಶನ ಸದಸ್ಯರು ಹಾಗೂ ನಾನಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.

ಅಮಾನತಿನ ಕ್ರಮ ವಹಿಸುವಂತೆ ಆದೇಶ

ಇಡೀ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆಯ ಮಾತುಗಳನ್ನಾಡುತ್ತಲೆಯೇ ಇದ್ದರು. ಸಭೆ ಆರಂಭದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಸಾಮಾಜಿಕ, ಪ್ರಾದೇಶಿಕ ಅರಣ್ಯ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಈ ವೇಳೆ ಕೆಎಸ್‌ಐಎಂಬಿ ಹಾಗೂ ಡಿಎಫ್‌ಒ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವುದನ್ನು ಗಮನಿಸಿ ತಕ್ಷಣ ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡಿ, ಅವರ ಪ್ರತಿಕ್ರಿಯೆ ಸಮರ್ಥವಾಗಿ ಕಾಣದಿದ್ದರೆ ಅವರ ವಿರುದ್ಧ ಅಮಾನತಿನ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಆದೇಶಿಸಿದರು.

Share this article