ಹೊಸ ಪಡಿತರ ಚೀಟಿ ವಿತರಿಸಿ, ತಿದ್ದುಪಡಿಗೆ ಅವಕಾಶ ನೀಡಿ: ಗುಮ್ಮನೂರು ಬಸವರಾಜ

KannadaprabhaNewsNetwork |  
Published : Jun 25, 2024, 12:37 AM ISTUpdated : Jun 25, 2024, 01:16 PM IST
 24ಕೆಡಿವಿಜಿ1-ಹೊಸ ಪಡಿತರ ಚೀಟಿ ನೀಡಲು, ಹೆಸರು ತಿದ್ದುಪಡಿ, ಸೇರ್ಪಡೆಗೆ ಒತ್ತಾಯಿಸಿ ದಾವಣಗೆರೆ ತಾಲೂಕು ಕಚೇರಿ ಎದುರು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟಿಸಿತು. ..................24ಕೆಡಿವಿಜಿ2-ಹೊಸ ಪಡಿತರ ಚೀಟಿ ನೀಡಲು, ಹೆಸರು ತಿದ್ದುಪಡಿ, ಸೇರ್ಪಡೆಗೆ ಒತ್ತಾಯಿಸಿ ದಾವಣಗೆರೆ ತಾಲೂಕು ಕಚೇರಿ ಎದುರು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟಿಸಿತಹಸೀಲ್ದಾರ್ ಡಾ.ಅಶ್ವತ್ಥ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು. | Kannada Prabha

ಸಾರಾಂಶ

ಹೊಸದಾಗಿ ಪಡಿತರ ಚೀಟಿ ವಿತರಣೆ, ಹಳೆಯ ಪಡಿತರ ಚೀಟಿಗಳ ತಿದ್ದುಪಡಿ, ಹೊಸದಾಗಿ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ದಾವಣಗೆರೆ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

 ದಾವಣಗೆರೆ :  ಹೊಸದಾಗಿ ಪಡಿತರ ಚೀಟಿ ವಿತರಣೆ, ಹಳೆಯ ಪಡಿತರ ಚೀಟಿಗಳ ತಿದ್ದುಪಡಿ, ಹೊಸದಾಗಿ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

ನಗರದ ತಾಲೂಕು ಕಚೇರಿ ಎದುರು ಸಂಘದ ಜಿಲ್ಲಾ ಪದಾಧಿಕಾರಿ ನೇತೃತ್ವದಲ್ಲಿ ರೈತ ಸಂಘದ ಮುಖಂಡರು, ಕಾರ್ಯಕರ್ತರು, ರೈತ ಕುಟುಂಬಗಳು, ಗ್ರಾಮೀಣರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಡಾ.ಅಶ್ವತ್ಥ್ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಸಂಘದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ ಮಾತನಾಡಿ, ರಾಜ್ಯದಲ್ಲಿ ಹೊಸದಾಗಿ ಪಡಿತರ ಚೀಟಿಗಳನ್ನು ವಿತರಣೆ ಮಾಡಬೇಕು. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ಕಳೆದರೂ ಹೊಸ ಪಡಿತರ ಚೀಟಿ ನೀಡಲು ಅವಕಾಶ ಮಾಡಿಕೊಟ್ಟಿಲ್ಲ. ಪಡಿತರ ಚೀಟಿಗಳಲ್ಲಿ ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ ನೀಡಬೇಕು. ಆದರೆ, ಇದಕ್ಕೆ ಅವಕಾಶ ಇಲ್ಲದಿದ್ದರಿಂದ ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದರು.

ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿದ್ದರೂ ಪಡಿತರ ಚೀಟಿ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ತಕ್ಷಣ‍ವೇ ಹೊಸ ಪಡಿತರ ಚೀಟಿ ನೀಡಬೇಕು. ಹಳೆಯ ಪಡಿತರ ಚೀಟಿಗಳಿಗೆ ತಿದ್ದುಪಡಿ ಮತ್ತು ಹೆಸರು ಸೇರ್ಪಡೆ ಕಾರ್ಯಕ್ಕೆ ಅವಕಾಶ ಮಾಡಿಕೊಡಬೇಕು. ಒಂದೆರೆಡು ಸಲ ಸೇರ್ಪಡೆಗೆ ಅವಕಾಶ ಕಲ್ಪಿಸಿದಂತೆ ಸರ್ಕಾರ ಮಾಡಿದರೂ ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಹೊಸ ಪಡಿತರ ಚೀಟಿ ನೀಡಲು, ಹೆಸರು ಸೇರ್ಪಡೆ, ತಿದ್ದುಪಡಿಗೆ ಇನ್ನಾದರೂ ಅವಕಾಶ ಮಾಡಿಕೊಡಲಿ ಎಂದು ಆಗ್ರಹಿಸಿದರು.

ಆಶ್ರಯ ಯೋಜನೆಯಡಿ ಒಂದು ಕುಟುಂಬಕ್ಕೆ ಪಡಿತರ ಚೀಟಿಯನ್ನು ಸರ್ಕಾರ ನಿಗದಿಪಡಿಸಿದೆ. ಆದರೆ, ರಾಜ್ಯ ಸರ್ಕಾರ ಪಡಿತರ ಚೀಟಿಯನ್ನು ಗ್ರಾಮ ಒನ್‌ನಲ್ಲಿ ತಿದ್ದುಪಡಿಗೆ ಅವಕಾಶ ಕೊಟ್ಟಿದ್ದರೂ ಯಾವೊಬ್ಬ ವ್ಯಕ್ತಿಯ ಹೆಸರು ಸೇರ್ಪಡೆಯಾಗಿಲ್ಲ. ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ದಾವಣಗೆರೆ ತಾಲೂಕು ಕಚೇರಿಗೆ ಸುಮಾರು 800 ಅರ್ಜಿ ಬಂದಿದ್ದರೂ ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು, ಸಮಸ್ಯೆ ಪರಿಹರಿಸಲು ತಾಲೂಕು, ಜಿಲ್ಲಾಡಳಿತ ಮುಂದಾಗಬೇಕು ಎಂದರು.

ರಾಜ್ಯಾದ್ಯಂತ ರೈತರಿಗೆ, ಕೂಲಿ ಕಾರ್ಮಿಕರಿಗೆ ಹೊಸದಾಗಿ ಪಡಿತರ ಚೀಟಿ ಕೊಡಿಸಲು ವಿಳಂಬ ಮಾಡಿದರೆ, ಹೆಸರು ಸೇರ್ಪಡೆಗೆ, ತಿದ್ದುಪಡಿಗೆ ಅವಕಾಶ ಮಾಡಿಕೊಡದಿದ್ದರೆ ರಾಜ್ಯವ್ಯಾಪಿ ಹೋರಾಟದ ಜೊತೆಗೆ ಬೆಂಗಳೂರಿನಲ್ಲಿ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಶೀಘ್ರವೇ ಸಂಘಟನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಸೇರಿದಂತೆ ರಾಜ್ಯ ಪದಾಧಿಕಾರಿಗಳು, ಮುಖಂಡರ ಸಮೇತ ಸಾವಿರಾರು ರೈತರು ಮುತ್ತಿಗೆ ಹಾಕಬೇಕಾದೀತು ಎಂದು ಬಸವರಾಜ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ಕೆಂಚಮ್ಮನಹಳ್ಳಿ ಹನುಮಂತಪ್ಪ, ಚಿಕ್ಕಬೂದಿಹಾಳ್ ಭಗತ್ ಸಿಂಹ, ಭರಮಸಮುದ್ರ ಕುಮಾರ, ಕೋಲ್ಕುಂಟೆ ಉಚ್ಚೆಂಗಪ್ಪ, ಮಲ್ಲಿಕಾರ್ಜುನ, ರಮೇಶ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು, ರೈತರು, ಕೂಲಿ ಕಾರ್ಮಿಕರು, ಗ್ರಾಮೀಣ ಕುಟುಂಬಗಳು ಪಾಲ್ಗೊಂಡಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!