ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಿ

KannadaprabhaNewsNetwork |  
Published : Feb 05, 2025, 12:31 AM IST
ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್‌ನವರ ಕಿರುಕುಳಕ್ಕೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹಕ್ಕೂ  ಮೊದಲು ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. | Kannada Prabha

ಸಾರಾಂಶ

ಭದ್ರಾವತಿ: ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್‌ನವರ ಕಿರುಕುಳಕ್ಕೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಿರಿಯ ರೈತ ಮುಖಂಡ ಕೆ.ಟಿ.ಗಂಗಾಧರ್ ಆಗ್ರಹಿಸಿದರು.

ಭದ್ರಾವತಿ: ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್‌ನವರ ಕಿರುಕುಳಕ್ಕೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಿರಿಯ ರೈತ ಮುಖಂಡ ಕೆ.ಟಿ.ಗಂಗಾಧರ್ ಆಗ್ರಹಿಸಿದರು.

ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ೨೧ನೇ ಸಂಸ್ಮರಣೆ ಅಂಗವಾಗಿ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಅವರು ಮಾತನಾಡಿದರು. ತಾಲೂಕಿನಾದ್ಯಂತ ರೈತರು ಹಾಗೂ ಬಡವರು ಸುಮಾರು ೫೦ ವರ್ಷಗಳಿಂದಲೂ ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಸಾಗುವಳಿ ಭೂಮಿಯಿಂದ ಅವರ ಕುಟುಂಬಕ್ಕೆ ಆಹಾರ, ದುಡಿಯುವ ಕೈಗಳಿಗೆ ಕೆಲಸ ಮಾತ್ರವಲ್ಲದೇ ದೇಶದ ಆಹಾರ ಭದ್ರತೆಗೂ ಕೊಡುಗೆ ನೀಡಿರುತ್ತಾರೆ. ಈ ರೀತಿ ಸಾಗುವಳಿ ಮಾಡಿಕೊಂಡು ಬಂದ ಭೂಮಿಯ ಹಕ್ಕನ್ನು ರೈತರಿಗೆ ಮಾನ್ಯ ಮಾಡುವ ಸಲುವಾಗಿ ಸರ್ಕಾರಗಳು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ರೈತರು ಭೂಮಿಯ ಹಕ್ಕು ಮಂಜೂರು ಮಾಡುವಂತೆ ನಮೂನೆ ೫೦, ನಮೂನೆ ೫೩ ಹಾಗೂ ನಮೂನೆ ೫೭ರಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಪರಿಶೀಲಿಸಿ ಹಕ್ಕು ನೀಡಬೇಕಾದ ಸರ್ಕಾರಗಳು ಇಂದಿಗೂ ರೈತರಿಗೆ ಭೂಮಿಯ ಹಕ್ಕನ್ನು ನೀಡದೇ, ರೈತರನ್ನು ಹೈರಾಣಗೊಳಿಸಿವೆ ಎಂದು ಆಕ್ರೋಶ ವ್ಯಕ್ತಪಡಿದರು. ಭೂಮಿಯ ಹಕ್ಕು ಪಡೆಯಲು ರೈತರು ದಿನನಿತ್ಯವು ತಾಲೂಕು ಕಚೇರಿಗೆ ಅಲೆದಾಡುತ್ತಿದ್ದು, ಕಂದಾಯ ಇಲಾಖೆಯ ಸಿಬ್ಬಂದಿ ಕ್ರಮಬದ್ಧವಾಗಿ ಕೆಲಸ ಮಾಡದೇ ರೈತರನ್ನು ಅಲೆದಾಡಿಸುತ್ತಿದ್ದಾರೆ. ಸರ್ಕಾರದ ಕಂದಾಯ ಮಂತ್ರಿಗಳೇ ಹಲವು ಬಾರಿ ತಾಕೀತು ಮಾಡಿದರೂ ಕಂದಾಯ ಇಲಾಖೆಯ ಸಿಬ್ಬಂದಿ ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇದರ ದುರ್ಲಾಭ ಪಡೆದ ಅರಣ್ಯ ಇಲಾಖೆ ರೈತರು ಹಿಂದಿನಿಂದಲೂ ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿಯನ್ನು ಕಾನೂನು ಬಾಹಿರವಾಗಿ ಕಿತ್ತುಕೊಳ್ಳಲು ಯತ್ನಿಸುತ್ತಿದೆ. ಅರಣ್ಯ ಇಲಾಖೆಯು ಯಾವುದೇ ಜಂಟಿ ಸರ್ವೇ ಕಾರ್ಯ ಕೈಗೊಳ್ಳದೇ ತಹಸೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ರೈತರ ವಿರುದ್ಧ ದಾವೆಗಳನ್ನು ಹೂಡಿ ರೈತರಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದೆ ಎಂದು ದೂರಿದರು. ತಹಸೀಲ್ದಾರರ ನ್ಯಾಯಾಲಯ ಹಾಗೂ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಾವೆಗಳು ವಿಚಾರಣೆಯಲ್ಲಿರುವಾಗಲೇ ರೈತರ ಸಾಗುವಳಿ ಜಮೀನುಗಳಿಗೆ ಅಕ್ರಮವಾಗಿ ನುಗ್ಗಿ ರೈತರ ಬೆಳೆದ ಬೆಳೆಗಳನ್ನು ನಾಶಪಡಿಸುವ ಜೊತೆಗೆ ರೈತರನ್ನು ಸಾಗುವಳಿ ಭೂಮಿಯಿಂದ ಒಕ್ಕಲೆಬ್ಬಿಸುವಕಾರ್ಯ ಮಾಡುತ್ತಿದ್ದಾರೆ. ತಾಲೂಕು ಆಡಳಿತ ಇದನ್ನೆಲ್ಲ ನೋಡಿಕೊಂಡು ರೈತರ ಹಿತರಕ್ಷಣೆಗೆ ಬಾರದೇ ಕಣ್ಣು ಮುಚ್ಚಿಕೊಂಡು ಕುಳಿತಿದೆ. ತಾಲೂಕು ಆಡಳಿತದ ಈ ಬೇಜವಾಬ್ದಾರಿ ನಡೆ ಖಂಡನೀಯ ಎಂದ ಅವರು, ಕೂಡಲೇ ರೈತರಿಗೆ ಬಗರ್ ಹುಕುಂ ಭೂಮಿಯ ಹಕ್ಕನ್ನು ನೀಡುವಂತೆ ಆಗ್ರಹಿಸಿದರು. ರೈತರು, ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಗ್ರಾಮೀಣ ಪ್ರದೇಶವಾಸಿಗಳು ವ್ಯವಸಾಯ ಹಾಗೂ ವ್ಯವಸಾಯೇತರ ಕಾರಣಕ್ಕಾಗಿ ಖಾಸಗಿ ಫೈನಾನ್ಸ್‌ಗಳಿಂದ ಸಾಲ ಪಡೆದಿರುತ್ತಾರೆ. ಈ ಸಾಲದ ಕಂತುಗಳ ವಸೂಲಿಗಾಗಿ ಖಾಸಗಿ ಫೈನಾನ್ಸ್‌ಗಳು ಗ್ರಾಮೀಣ ಪ್ರದೇಶದ ಜನರಿಗೆ ಕಾನೂನು ಬಾಹಿರವಾಗಿ ಇನ್ನಿಲ್ಲದ ಕಿರುಕುಳ ನೀಡುತ್ತಿವೆ ಎಂದು ದೂರಿದರು.

ತಕ್ಷಣ ತಾಲೂಕು ಆಡಳಿತ ಸೂಕ್ತ ಕ್ರಮಗಳನ್ನು ಕೈಗೊಂಡು ಖಾಸಗಿ ಫೈನಾನ್ಸ್‌ಗಳು ಗ್ರಾಮೀಣ ಪ್ರದೇಶದ ಜನರಿಗೆ ನೀಡುತ್ತಿರುವ ಕಿರುಕುಳ ತಪ್ಪಿಸಬೇಕೆಂದು ಆಗ್ರಹಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹಾಲೇಶಪ್ಪಗೌಡ್ರು, ಜಿಲ್ಲಾ ಗೌರವಾಧ್ಯಕ್ಷ ಈರಪ್ಪ ಪ್ಯಾಟಿ, ಯಶವಂತರಾವ್ ಘೋರ್ಪಡೆ, ಹಿರಣಯ್ಯ, ಡಿ.ವಿ.ವೀರೇಶ್, ಎಚ್.ಎನ್.ಮಂಜುನಾಥೇಶ್ವರ, ಮೋಹನ್ ಕೂಡ್ಲಿಗೆರೆ, ಬಿ.ಎನ್ ರಾಜು ಮತ್ತಿತರರಿದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!