ನಟ ದರ್ಶನ್‌ಗೆ ಐಟಿ ಗ್ರಿಲ್; ಸುದೀರ್ಘ ಏಳು ತಾಸು ವಿಚಾರಣೆ

KannadaprabhaNewsNetwork |  
Published : Sep 27, 2024, 01:21 AM IST
ಐಟಿ ವಿಚಾರಣೆ ಹಿನ್ನೆಲೆಯಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಹೈಸೆಕ್ಯೂರಿಟಿ ಸೆಲ್‌ನಿಂದ ಜೈಲು ಅಧಿಕಾರಿಗಳ ಕಚೇರಿಗೆ ಕಡೆ ಆಗಮಿಸಿದರು. | Kannada Prabha

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪವನ್ನು ಬೇರೊಬ್ಬರು ಒಪ್ಪಿಕೊಳ್ಳುವಂತೆ ಮಾಡಲು ₹80 ಲಕ್ಷ ನಗದು ನೀಡಿರುವ ಹಿನ್ನೆಲೆ

ಬಳ್ಳಾರಿ: ಕೊಲೆ ಪ್ರಕರಣದಲ್ಲಿ ನಗರದ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್‌ ಅವರನ್ನು ಆದಾಯ ತೆರಿಗೆ ಅಧಿಕಾರಿಗಳ (ಐಟಿ) ತಂಡ ಗುರುವಾರ ವಿಚಾರಣೆ ನಡೆಸಿತು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪವನ್ನು ಬೇರೊಬ್ಬರು ಒಪ್ಪಿಕೊಳ್ಳುವಂತೆ ಮಾಡಲು ₹80 ಲಕ್ಷ ನಗದು ನೀಡಿರುವ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ನಟ ದರ್ಶನ್‌ನನ್ನು ಕಾರಾಗೃಹದಲ್ಲಿ ವಿಚಾರಣೆ ನಡೆಸಲು ಆಗಮಿಸಿದ್ದರು. ಮಧ್ಯಾಹ್ನ 12 ಗಂಟೆಗೆ ಶುರುಗೊಂಡ ವಿಚಾರಣೆ ಕಾರ್ಯ ಸಂಜೆ 7 ಗಂಟೆವರೆಗೆ ನಡೆಯಿತು.

ಐಟಿ ವಿಚಾರಣೆ ಹಿನ್ನೆಲೆಯಲ್ಲಿ ನಟ ದರ್ಶನ್ ಪರ ಆಡಿಟರ್ ಎಂ.ಆರ್.ರಾವ್, ಮತ್ತವರ ಸಹಾಯಕ ವಕೀಲರೂ ಆಗಿರುವ ರಾಮಸಿಂದ್ ಅವರು ಸಹ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದರು. ವಿಚಾರಣೆ ವೇಳೆ ಏನಾದರೂ ಸ್ಪಷ್ಟನೆ ಅಗತ್ಯವಿದಲ್ಲಿ ಮಾತ್ರ ಐಟಿ ಅಧಿಕಾರಿಗಳು ಆಡಿಟರ್‌ಗಳನ್ನು ಕರೆಸಿಕೊಳ್ಳುತ್ತಿದ್ದರು.

ಬೆಳಿಗ್ಗೆ 11.30ರ ವೇಳೆಗೆ ಆದಾಯ ತೆರಿಗೆ ಇಲಾಖೆಯ ಐವರು ಅಧಿಕಾರಿಗಳ ತಂಡ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಆಗಮಿಸಿತು. ಲ್ಯಾಪ್‌ಟಾಪ್ ಹಾಗೂ ಕೆಲವೊಂದು ದಾಖಲೆಪತ್ರಗಳನ್ನು ಹಿಡಿದು ಐಟಿ ಅಧಿಕಾರಿಗಳು ಜೈಲು ಪ್ರವೇಶಿಸಿದರು.

ಕೆಲ ಹೊತ್ತಿನ ಬಳಿಕ ಜೈಲಿನ ಸಿಬ್ಬಂದಿ ನಟ ದರ್ಶನ್‌ರನ್ನು ಹೈಸೆಕ್ಯೂರಿಟಿ ಸೆಲ್‌ನಿಂದ ಕಾರಾಗೃಹದ ಅಧೀಕ್ಷಕರ ಕಚೇರಿಗೆ ಕರೆತಂದರು. ಹೈಸೆಕ್ಯೂರಿಟಿ ಸೆಲ್‌ನಿಂದ ನಗುಮೊಗದಿಂದಲೇ ಆಗಮಿಸಿದ ನಟ ದರ್ಶನ್, ವಿಚಾರಣೆ ಶುರುಗೊಳ್ಳುತ್ತಿದ್ದಂತೆಯೇ ದಿಗಲುಗೊಂಡಂತೆ ಕಂಡು ಬಂದರು ಎಂದು ಜೈಲು ಮೂಲಗಳು ತಿಳಿಸಿವೆ.

ಮಧ್ಯಾಹ್ನ 12 ಗಂಟೆಗೆ ವಿಚಾರಣೆ ಆರಂಭಿಸಿದ ಐಟಿ ಅಧಿಕಾರಿಗಳು ಕೊಲೆ ಪ್ರಕರಣದಲ್ಲಿ ಹಣ ಬಳಕೆಯ ಕುರಿತು ಅನೇಕ ಪ್ರಶ್ನೆಗಳನ್ನು ಕೇಳಿ, ದರ್ಶನ್ ಹೇಳಿಕೆ ದಾಖಲಿಸಿಕೊಂಡರು.

ದರ್ಶನ್‌ನ ಆಪ್ತ ವಲಯಕ್ಕೆ ಮಾಡಿರುವ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇನ್ಯಾರ ಜೊತೆ ಹಣದ ವ್ಯವಹಾರ ನಡೆದಿದೆ ಎಂಬಿತ್ಯಾದಿ ಮಾಹಿತಿಯನ್ನು ಕಲೆ ಹಾಕಿದರು.

ಐಟಿ ಅಧಿಕಾರಿಗಳ ವಿಚಾರಣೆ ವೇಳೆ ನಟ ದರ್ಶನ್ ಭೀತಿಯಲ್ಲಿದ್ದರು. ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲು ತಡಕಾಡುತ್ತಿದ್ದರು. ಹಣ ವರ್ಗಾವಣೆ ಹಾಗೂ ಕೊಲೆ ಪ್ರಕರಣದಲ್ಲಿ ಹಣ ಬಳಕೆಯ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡುವಾಗ ದರ್ಶನ್ ಹಿಂದೇಟು ಹಾಕುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಬಳ್ಳಾರಿ ಜೈಲಿನಲ್ಲಿ ನಿದ್ರೆ ಹಾಗೂ ಪುಸ್ತಕ ಓದುವ ಮೂಲಕ ಹೆಚ್ಚು ಹೊತ್ತು ವಿಶ್ರಾಂತಿಯಲ್ಲಿಯೇ ದಿನದೂಡುತ್ತಿದ್ದ ನಟ ದರ್ಶನ್‌ಗೆ ಸಂಜೆವರೆಗೆ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಐಟಿ ಗ್ರಿಲ್‌ನಿಂದ ತೊಳಲಾಟದಲ್ಲಿದ್ದಂತೆ ಕಂಡು ಬಂದ ದರ್ಶನ್, ಮಧ್ಯಾಹ್ನ ಊಟ ಮಾಡಲಿಲ್ಲ. ಮಧ್ಯಾಹ್ನ ಕೆಲಹೊತ್ತು ವಿಶ್ರಾಂತಿ ನೀಡಿದ ಐಟಿ ಅಧಿಕಾರಿಗಳು ಮತ್ತೆ ವಿಚಾರಣೆ ಮುಂದುವರಿಸಿದರು. ವಿಚಾರಣೆಗೆಂದು ನ್ಯಾಯಾಲಯದಿಂದ ಎರಡು ದಿನಗಳ ಸಮಯ ಪಡೆದು ಬಂದಿದ್ದ ಐಟಿ ಅಧಿಕಾರಿಗಳು ಒಂದೇ ದಿನದಲ್ಲಿ ವಿಚಾರಣೆ ಪೂರ್ಣಗೊಳಿಸಿದರು.

ಸಂಜೆ 7 ಗಂಟೆಗೆ ವಿಚಾರಣೆ ಮುಗಿಯುತ್ತಿದ್ದಂತೆಯೇ ಐಟಿ ಅಧಿಕಾರಿಗಳು ಬೆಂಗಳೂರಿಗೆ ತೆರಳಿದರು.

ವಿಚಾರಣೆ ಮುಗಿದ ಬಳಿಕ ನಟ ದರ್ಶನ್ ಅವರನ್ನು ಡೆವಿಲ್ ಸಿನಿಮಾ ನಿರ್ಮಾಪಕ ಜೆ.ವಿ. ಪ್ರಕಾಶ್, ಆಪ್ತರಾದ ಸುನಿಲ್‌ಕುಮಾರ್, ಶ್ರೀನಿವಾಸ್ ಭೇಟಿ ಮಾಡಿದರು. ಸುಮಾರು 20 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಗಿತ್ತು. ದರ್ಶನ್ ಆಪ್ತರು ತಂದಿದ್ದ ಸಿಹಿತಿನಿಸು, ಬಟ್ಟೆಗಳನ್ನು ದರ್ಶನ್‌ಗೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ