ಸಿದ್ದಗಂಗಾ ಶ್ರೀಗಳ ಆಶ್ರಯದಲ್ಲಿ ಬೆಳೆದಿರುವುದು ಪುಣ್ಯ

KannadaprabhaNewsNetwork | Published : Apr 5, 2025 12:45 AM

ಸಾರಾಂಶ

ಕಂಬಾಳು ಮಠದಲ್ಲಿ ಆಯೋಜಿಸಿದ್ದ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಹಾಗೂ ಲಿಂ.ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಂಸ್ಮರಣೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಸಿದ್ದಗಂಗಾ ಮಠದ ಕೀರ್ತಿಯನ್ನು ಇಡೀ ಜಗತ್ತಿಗೆ ಪಸರಿಸಿದ ಕೀರ್ತಿ ಲಿಂ.ಶ್ರೀ ಶಿವಕುಮಾರ ಸ್ವಾಮಿಗಳಿಗೆ ಸಲ್ಲುತ್ತದೆ. ಅವರ ಆಶ್ರಯದಲ್ಲಿ ನಾವುಗಳು ಬೆಳೆದಿರುವುದು ಪುಣ್ಯವೇ ಸರಿ ಎಂದು ಬೆಂಗಳೂರಿನ ದೊಡ್ಡಮಠದ ಶ್ರೀ ಶಿವಬಸವ ಸ್ವಾಮೀಜಿ ತಿಳಿಸಿದರು.

ಸೋಂಪುರ ಹೋಬಳಿಯ ಕಂಬಾಳು ಮಠದಲ್ಲಿ ಆಯೋಜಿಸಿದ್ದ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಹಾಗೂ ಲಿಂ.ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಾಡಿನ ಮಠಗಳು ಸರ್ವಜನಾಂಗದ ಧಾರ್ಮಿಕ ಕೇಂದ್ರಗಳಾಗಿವೆ. ಕಂಬಾಳು ಸಂಸ್ಥಾನ ಮಠವು ಶಿವಗಂಗಾ ಕ್ಷೇತ್ರದ ಪುಣ್ಯಭೂಮಿಯ ತಪ್ಪಲಿನಲ್ಲಿರುವ ಒಂದು ಪುಣ್ಯ ಕ್ಷೇತ್ರವಾಗಿದ್ದು ಈ ಮಠಕ್ಕೆ ತನ್ನದೇ ಆದ ಪರಂಪರೆಯನ್ನು ಹೊಂದಿದ್ದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಈ ಮಠವು ಮಹತ್ವದ ಕೊಡುಗೆಯನ್ನು ನೀಡಿದೆ ಎಂದರು.ಕಂಬಾಳು ಸಂಸ್ಥಾನ ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಹಿಂದಿನ ಗುರುಗಳಾಗಿದ್ದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಆಸೆಯಂತೆ ಇಂದು ಶ್ರೀ ಮಠದಲ್ಲಿ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅನಾಥ ಮಕ್ಕಳಿಗೆ ಶಿಕ್ಷಣದ ಜೊತೆಗೆ ವಸತಿ, ದಾಸೋಹವನ್ನು ನೀಡಿ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದರು ಎಂದರು.ಕಾರ್ಯಕ್ರಮದಲ್ಲಿ ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕಂಚುಗಲ್ ಬಂಡೆಮಠದ ಶ್ರೀ ಮಹಾಲಿಂಗ ಸ್ವಾಮೀಜಿ, ಹೊನ್ನಾಳಿ ಮಠದ ಶ್ರೀಗಳು, ಗ್ರಾ..ಪಂ.ಮಾಜಿ ಅಧ್ಯಕ್ಷ ಉಮಾಶಂಕರ್, ಶಿವಶಕ್ತಿ ಗ್ಯಾಸ್ ಏಜೆನ್ಸಿಯ ಲಿಂಗಾರಾಧ್ಯ, ಪಾಲಾಕ್ಷ, ಹರಳೂರು ಪ್ರುಭುದೇವರು, ನಿರಂಜನ್ ಕಂಬಾಳು ಗ್ರಾಮಸ್ಥರು, ಶ್ರೀ ಮಠದ ಭಕ್ತಾದಿಗಳು ಉಪಸ್ಥಿತರಿದ್ದರು.ಪೋಟೋ 3 : ಕಂಬಾಳು ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಲಿ. ಶ್ರೀ ಶಿವಕುಮಾರ ಸ್ವಾಮೀಜಿ ಜನ್ಮದಿನ ಹಾಗೂ ಲಿಂ.ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಲಿಂ.ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಗದ್ದುಗೆಗೆ ಪೂಜಾ ಕಾರ್ಯಕ್ಕೆ ಭಕ್ತಾದಿಗಳು ಚಾಲನೆ ನೀಡಿದರು.

Share this article