ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ನಗರ ಹೊರಭಾಗದ ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್‌ನಲ್ಲಿ ಸೋಮವಾರ ನಡೆದ ಜೀತ ಕಾರ್ಮಿಕ ಕಾಯ್ದೆ-೧೯೭೬ ಹಾಗೂ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ-೧೯೮೬ ಮತ್ತು ತಿದ್ದುಪಡಿ ಕಾಯ್ದೆ-೨೦೧೬ ಕುರಿತ ಜಿಲ್ಲಾ ಮಟ್ಟದ ನಿಷೇಧಾಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಕೈಯಲ್ಲಿ ಪುಸ್ತಕಗಳಿರಬೇಕಾದಲ್ಲಿ ಇಟ್ಟಿಗೆಯಂತಹ ವಸ್ತುಗಳನ್ನು ನೀಡಿ ಕೆಲಸ ಮಾಡಿಸುವ ಮೂಲಕ ಅವರನ್ನು ಬಾಲಕಾರ್ಮಿಕರನ್ನಾಗಿಸುತ್ತಿರುವುದು ಕಳವಳಕಾರಿ ಸಂಗತಿ. ಮಕ್ಕಳಿಗೂ ಮೂಲಭೂತ ಹಕ್ಕುಗಳಿದ್ದು, ಅವುಗಳ ರಕ್ಷಣೆಗೆ ಅನೇಕ ಕಾನೂನುಗಳು ಜಾರಿಯಲ್ಲಿವೆ. ಈ ಕಾನೂನುಗಳ ಕುರಿತು ಜಾಗೃತಿ ಮೂಡಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಹಾಗೂ ಜೀತ ವಿಮುಕ್ತ ಪುನರ್ವಸತಿ ಯೋಜನೆಯ ನೋಡಲ್ ಅಧಿಕಾರಿ ವಿಜಯಕುಮಾರ ಹೊನಕೇರಿ ಮಾತನಾಡಿ, ಜೀತ ಪದ್ಧತಿ ಹಾಗೂ ಬಾಲಕಾರ್ಮಿಕ ನಿಯಂತ್ರಣಕ್ಕೆ ಸಂಬಂಧಿಸಿದ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಎಲ್ಲಾ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿದೆ. ಶಾಲೆಗಳಲ್ಲಿ ನಿರಂತರವಾಗಿ ಗೈರಾಗುವ ವಿದ್ಯಾರ್ಥಿಗಳ ಮೇಲೆ ನಿಗಾವಹಿಸುವುದು ಹಾಗೂ ಬಾಲ್ಯವಿವಾಹ ವಿರುದ್ಧ ಜಾಗೃತಿ ಕಾರ್ಯಕ್ರಮಗಳಿಗೆ ಎಲ್ಲ ಇಲಾಖೆಗಳು ಸಹಕಾರ ನೀಡಬೇಕು ಎಂದು ಹೇಳಿದರು.ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ ಪ್ರಾಸ್ತಾವಿಕವಾಗಿ ಮಾತನಾಡಿ, ಬಡತನ ಮತ್ತು ಅನಕ್ಷರಾಸಕ್ತಿಯಿಂದ ಸಮಾಜದಲ್ಲಿ ಬಾಲಕಾರ್ಮಿಕ ಮತ್ತು ಜೀತ ಪದ್ಧತಿ ಇನ್ನೂ ಜೀವಂತವಾಗಿವೆ. ಇವುಗಳ ನಿರ್ಮೂಲನೆಗೆ ಕಾನೂನುಗಳ ಜಾಗೃತಿ ಅಗತ್ಯವಿದೆ ಎಂದರು.
ವಕೀಲ ಸ್ಟ್ಯಾನಿ ಕ್ರಿಸ್ಟೋಫರ್ ಜೀತ ಕಾರ್ಮಿಕ ನಿಷೇಧ ಕಾಯ್ದೆ–೧೯೭೬ ಕುರಿತು ಹಾಗೂ ಸ್ಪಂದನ ಸ್ವಯಂ ಸೇವಾ ಸಂಸ್ಥೆಯ ನಿರ್ದೇಶಕ ವಿ.ಸುಶೀಲ ಮಾನವ ಕಳ್ಳಸಾಗಣೆ ಮತ್ತು ಬಾಲ್ಯವಿವಾಹ ನಿಷೇಧ ಕುರಿತು ಉಪನ್ಯಾಸ ನೀಡಿದರು. ಕಾರ್ಯಾಗಾರದಲ್ಲಿ ಪೊಲೀಸ್ ಆಯುಕ್ತ ಬೋರಸೆ ಗುಲಾಬರಾವ್ ಭೂಷಣ, ಪ್ರಶಿಕ್ಷಣಾರ್ಥಿ ಐಎಎಸ್ ಅಧಿಕಾರಿ ಅಭಿನವ ಜೈನ್, ಐಜಿಎಂ ವೇಣುಗೋಪಾಲ್, ಯೋಜನಾ ನಿರ್ದೇಶಕಿ ಜ್ಯೋತಿ ಕಾಂತೇ, ಕಾರ್ಮಿಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು. ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜ ಜೀತ ವಿಮುಕ್ತ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.---
ಮಕ್ಕಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಆಧುನಿಕ ಯುಗದಲ್ಲಿಯೂ ಬಾಲಕಾರ್ಮಿಕ ಮತ್ತು ಜೀತ ಪದ್ಧತಿಯಂತಹ ಅನಿಷ್ಠ ಪದ್ಧತಿಗಳನ್ನು ನಿರ್ಮೂಲನೆಗೊಳಿಸಲು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು ಅರಿತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು.