ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ವಾಲ್ಮೀಕಿ ಹಿತರಕ್ಷಣಾ ಸಮಿತಿಯ ಪದಾಧಿಕಾರಿ, ಮುಖಂಡರು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನಾಧರಣಿ ನಡೆಸಿ ಅಪರ ಜಿಲ್ಲಾಧಿಕಾರಿ ಜವರೇಗೌಡರಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನಾ ಮಾತನಾಡಿದ ಜಿಪಂ ಮಾಜಿ ಸದಸ್ಯ ಅರಕಲವಾಡಿ ಸೋಮನಾಯಕ, ಬೆಳಗಾವಿ ಡಿಸಿಸಿ ಬ್ಯಾಂಕಿನ ಚುನಾವಣಾ ಮತದಾನ ಸಂದರ್ಭದಲ್ಲಿ ಚಿಕ್ಕೋಡಿ ಮಾಜಿ ಸಂಸದ ರಮೇಶ್ ಕತ್ತಿ ತನ್ನ ಬೆಂಬಲಿಗರೊಂದಿಗೆ ಮಾತನಾಡುತ್ತಿದ್ದಾಗ ಬೇಡರ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು, ಸಾರ್ವಜನಿಕವಾಗಿ ವಾಲ್ಮೀಕಿ ಬೇಡನಾಯಕ ಜನಾಂಗವನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಕೂಡಲೇ ಬೆಳಗಾವಿ ಜಿಲ್ಲಾಡಳಿತ ರಮೇಶ್ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿ ಬಂಧಿಸಬೇಕು ಎಂದು ಒತ್ತಾಯಿಸಿದರು.ವಾಲ್ಮೀಕಿ ಸಮಾಜಕ್ಕೆ ಅವಮಾನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದ ರಾಜ್ಯಾದ್ಯಂತ 75 ಲಕ್ಷ ವಾಲ್ಮೀಕಿ ಸಮುದಾಯ ಜನರಿಗೆ ನೋವು ಉಂಟಾಗಿದೆ. ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದರು.
ವಾಲ್ಮೀಕಿ ಹಿತರಕ್ಷಣಾ ಸಮಿತಿಯಕೃಷ್ಣನಾಯಕ, ಜಿ.ಪಂ. ಮಾಜಿ ಸದಸ್ಯರಮೇಶ್, ಸಾಗಡೆ ನಂಜುಂಡನಾಯಕ, ಕೆಂಪನಪುರ ಗ್ರಾಪಂ ಮಾಜಿ ಅಧ್ಯಕ್ಷ ಆರ್.ಮಾದೇಶ್, ಅರಕಲವಾಡಿ ಸೋಮೇಶ್, ಕಂಡಕ್ಟರ್ ಚಾ.ಸಿ. ಸೋಮನಾಯಕ, ಕಿಲಗೆರೆಜಯರಾಜು, ಸಿದ್ದರಾಜು, ರವಿಕುಮಾರ್, ತಿರುಪತಿ ನಾಯಕ, ರಾಚನಾಯಕ, ಎಚ್.ಎಂ. ಶಿವಣ್ಣ, ಅಮಚವಾಡಿರಾಜು, ಎನ್. ನಾಗೇಶ್, ಬಂಗಾರು, ಸಿದ್ದನಾಯಕ, ರಾಚನಾಯಕ, ರವಿಕುಮಾರ್, ಹನುಮಂತನಾಯಕ ಇದ್ದರು.