ಶಿವಮೊಗ್ಗ: ಸ್ವಾತಂತ್ರ್ಯ ನಂತರ ದೇಶದಲ್ಲಿ ಈವರೆಗೆ ಒಟ್ಟು 36000 ಪೊಲೀಸ್ ಸಿಬ್ಬಂದಿ, ಸೇನೆಯ ಹೋರಾಟದಲ್ಲಿ 23000 ಸೈನಿಕರು ಪ್ರಾಣತ್ಯಾಗ ಮಾಡಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ತಿಳಿಸಿದರು.
ದೇಶದ ಗಡಿಕಾಯುವ ಸೈನಿಕರ ಸ್ಮರಣೀಯ ಸೇವೆಯನ್ನು ಮೀರಿ, ಅತೀ ಒತ್ತಡದಲ್ಲಿ, ಯಾವುದೇ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಸೇವೆ ಅತ್ಯಂತ ಮೌಲಿಕವಾದುದು ಮತ್ತು ಸ್ಮರಣೀಯವಾದುದು ಎಂದರು.
ಯಾವುದೇ ಸಂದರ್ಭದಲ್ಲಿ ಸದಾ ಸನ್ನದ್ಧರಾಗಿದ್ದು ಕಾರ್ಯನಿರ್ವಹಿಸುವ ಪೊಲೀಸರ ಸೇವೆ ಅಭಿನಂದನೀಯವಾದುದ್ದು ಹಾಗೂ ಸೈನಿಕರ ಸೇವೆಗಿಂತ ಮಹತ್ವದ್ದಾಗಿದೆ. ಪೊಲೀಸ್ ಸಿಬ್ಬಂದಿಗೆ ದೊರೆಯುವ ಗೌರವ ಅವರ ಕುಟುಂಬದ ಎಲ್ಲಾ ಸದಸ್ಯರಿಗೂ ದೊರೆಯುವಂತಾಗಬೇಕು. ಕೇವಲ ವೇತನ-ಭತ್ಯೆಗಳಿಂದ ಅವರನ್ನು ಸಮಾಧಾನಿಸುವುದು ಸಾಧ್ಯವಾಗದು. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಶಿವಮೊಗ್ಗ ಅತಿಸೂಕ್ಷ್ಮ ಪ್ರದೇಶ. ಆದಾಗ್ಯೂ ಶಿವಮೊಗ್ಗ ಜಿಲ್ಲೆಯ ಶಾಂತಿಯುತ ವಾತಾವರಣಕ್ಕೆ ಪೊಲೀಸ್ ಇಲಾಖೆಯ ಸೇವೆ ಅನುಪಮವಾದುದು ಎಂದು ಹೇಳಿದರು.ಕಾಯಕನಿಷ್ಠೆ ಮೆರೆಯುವ, ಕೇವಲ ಆರೋಪಗಳಿಂದಷ್ಟೇ ಗುರುತಿಸಲಾಗುವ ಪೊಲೀಸರು ಪ್ರಶಂಸೆ -ಪುರಸ್ಕಾರಗಳನ್ನು ನಿರೀಕ್ಷಿಸದೇ ಎದುರಾಗಬಹುದಾದ ಎಲ್ಲಾ ಸಂದರ್ಭ-ಸವಾಲುಗಳಿಗೆ ಒಗ್ಗಿಕೊಳ್ಳುವ ಅನಿವಾರ್ಯವಿದೆ. ಅದಕ್ಕಾಗಿ ಚಿಂತಿಸುವ, ಚರ್ಚಿಸುವ ದೃತಿಗೆಡುವ ಅಗತ್ಯವಿಲ್ಲ. ನೀಡುವ ಸೇವೆಯನ್ನು ಪ್ರಾಮಾಣಿಕವಾಗಿ, ಆತ್ಮಸಂತೃಪ್ತಿಗಾಗಿ ಮಾಡಬೇಕು. ಅದು ಮನಸಿಗೆ ಹೆಚ್ಚಿನ ಸಮಾಧಾನ ನೀಡಲಿದೆ ಎಂದರು.
ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿ, ಪೊಲೀಸರು ತಮ್ಮ ದಿನನಿತ್ಯದ ಕರ್ತವ್ಯದ ಜೊತೆಗೆ ವೈಯಕ್ತಿಕ ಬದುಕಿನ ಉನ್ನತಿಗೂ ಚಿಂತಿಸಬೇಕಾದ ಅಗತ್ಯವಿದೆ. ಅಂಚೆ ಸೇರಿದಂತೆ ವಿವಿಧ ವಿಮಾ ಕಂಪನಿಗಳಲ್ಲಿ ಅಲ್ಪಪ್ರಮಾಣದಲ್ಲಿ ವಾರ್ಷಿಕ ಶುಲ್ಕ ಪಾವತಿಸಿ, ಹೆಚ್ಚಿನ ಲಾಭ ಪಡೆಯುವ ವಿಮಾ ಸೌಲಭ್ಯವನ್ನು ಹೊಂದುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಅವರು ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಕರ್ತವ್ಯನಿರತರಾದಾಗಲೇ ಮರಣಹೊಂದಿದ 191 ಮಂದಿ ಹುತಾತ್ಮ ಆರಕ್ಷಕರ ನಾಮವಾಚನ ಮಾಡಿದರು.