ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಕಾಡಾನೆಗಳು ನಾಡಿಗೆ ಬಾರದಂತೆ ಸರ್ಕಾರವು ಶಾಶ್ವತ ಪರಿಹಾರ ಮಾಡಬೇಕು ಎಂದು ಗದ್ದೇಮನೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗದ್ದೇಮನೆ ವಿಶ್ವನಾಥ ಮನವಿ ಮಾಡಿದರು.ತಾಲೂಕಿನಲ್ಲಿ ಮಂಗಳವಾರ ಸೀತೂರು ಗ್ರಾಮದ ಕೆರೆಗದ್ದೆಯಲ್ಲಿ ಆನೆ ದಾಳಿಯಿಂದ ಮೃತಪಟ್ಟಿದ್ದ ಉಮೇಶ್ ಅವರ ಮನೆಗೆ ತೆರಳಿ ಅವರ ಪತ್ನಿ ಪ್ರೇಮ ಅವರಿಗೆ 1 ಲಕ್ಷ ರುಪಾಯಿ ಚೆಕ್ ವಿತರಿಸಿ ಮಾತನಾಡಿದರು. ಕಾಡಾನೆಗಳು ನಾಡಿಗೆ ಬಾರದಂತೆ ರೈಲ್ವೆ ಬ್ಯಾರಿಕೇಡ್ ಮಾಡುವುದು ಸೂಕ್ತವಾಗಿದೆ. ಈ ಬಗ್ಗೆ ಸರ್ಕಾರವು ಹೆಚ್ಚು ಗಮನ ನೀಡಬೇಕು. ಕಾಡಿನಲ್ಲಿ ಆನೆಗಳಿಗೆ ಸೂಕ್ತ ನೀರು ಇಲ್ಲದಿರುವುದು. ಆಹಾರಕ್ಕಾಗಿ ಹಣ್ಣಿನ ಗಿಡ ಇಲ್ಲದೆ ಇರುವುದರಿಂದ ಕಾಡಾನೆಗಳು ಆಹಾರ ಹುಡುಕಿ ನಾಡಿಗೆ ಬರುತ್ತಿದೆ. ಈಗಾಗಲೇ ತಾಲೂಕಿನಲ್ಲಿ ಕಾಡಾನೆಗಳ ದಾಳಿಯಿಂದ 4 ಜನ ಮೃತಪಟ್ಟಿದ್ದು ಮುಂದೆ ಈ ರೀತಿ ಆಗಬಾರದು. ಸರ್ಕಾರವು ಆನೆ ದಾಳಿಯಿಂದ ಮೃತಪಟ್ಟ ಕುಟುಂಭದವರಿಗೆ ತಲಾ 50 ಲಕ್ಷ ರು. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮಲೆನಾಡು ರೈತ ಹಿತ ರಕ್ಷಣಾ ಸಮಿತಿಯ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ದಾನಿ ವಿಶ್ವನಾಥ್ ಅವರು ಈಗಾಗಲೇ ಶೃಂಗೇರಿ ಕ್ಷೇತ್ರದಾದ್ಯಂತ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ನೀಡುತ್ತಿದ್ದಾರೆ. ಆನೆ ದಾಳಿಯಿಂದ ಮೃತಪಟ್ಟ ನಾಲ್ಕು ಕುಟುಂಬದವರ ಮನೆಗೆ ತೆರಳಿ ತಲಾ 1 ಲಕ್ಷ ರು. ನೀಡುತ್ತಿರುವುದಕ್ಕೆ ಮಲೆನಾಡು ರೈತ ಹಿತ ರಕ್ಷಣಾ ಸಮಿತಿಯಿಂದ ಅಭಿನಂದಿಸುತ್ತೇವೆ. ಕುಟುಂಬದಲ್ಲಿ ದುಡಿಯುವುವವರೇ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಮುಂದೆ ಹೀಗಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದರು.ನಂತರ ಎಕ್ಕಡಬೈಲು, ಬನ್ನೂರು ಗ್ರಾಮದ ಅಂದುವಾನಿಗೆ ತೆರಳಿ ಕಾಡಾನೆ ದಾಳಿಯಿಂದ ಮತಪಟ್ಟವರಿಗೆ 1 ಲಕ್ಷ ರು. ಚೆಕ್ ವಿತರಿಸಿದರು. ನಂತರ ಖಾಂಡ್ಯ ಗ್ರಾಮಕ್ಕೆ ತೆರಳಿ ಕಾಡು ಕೋಣ ದಾಳಿಯಿಂದ ಮೃತಪಟ್ಟ ಕುಟುಂಭದವರಿಗೆ ತಲಾ 1 ಲಕ್ಷ ರುಪಾಯಿ ಚೆಕ್ ವಿತರಿಸಿದರು.
ಸೀತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಉಪೇಂದ್ರ, ಎಚ್.ಇ.ದಿವಾಕರ, ಮುಖಂಡರಾದ ಮೂಡ್ಲಿ ಶ್ರೀಧರ್, ಎನ್.ಪಿ.ರವಿ, ಚರಣ ಹೆಬ್ಬಾರ,ಕೆರೆಗದ್ದೆ ಚೇತನ್, ರೈತ ಹಿತ ರಕ್ಷಣಾ ಸಮಿತಿಯ ಮುಖಂಡರಾದ ಗದ್ದೇಮನೆ ಸತೀಶ್, ಹೊಸಹಳ್ಳಿ ಅಭಿಷೇಕ್, ಪುರುಶೋತ್ತಮ್, ಗದ್ದೇಮನೆ ಗಿರೀಶ್, ಹಂಚಿನಮನೆ ರಾಘವೇಂದ್ರ, ಸಚಿನ್ ಕುಡ್ನಳ್ಳಿ, ನಿಲುವಾನಿ ಪ್ರದೀಪ್, ಅಶೋಕ್ ಮತ್ತಿತರರು ಇದ್ದರು.