ಕಂದಾಯ ಕಟ್ಟದೆ ಮಾಜಿ ಸಚಿವನಿಂದ ವಂಚನೆ: ಕಾಂಗ್ರೆಸ್‌ನ ಎಂ.ಆರ್.ರವಿಶಂಕರ್

KannadaprabhaNewsNetwork |  
Published : Oct 22, 2025, 01:03 AM IST
ನರಸಿಂಹರಾಜಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಸದಸ್ಯ ಎಂ.ಆರ್.ರವಿಶಂಕರ್ ದಾಖಲೆ ಬಿಡುಗಡೆ ಮಾಡಿ ಮಾತನಾಡಿದರು. | Kannada Prabha

ಸಾರಾಂಶ

ಶೃಂಗೇರಿ ಕ್ಷೇತ್ರದ ಮಾಜಿ ಸಚಿವರು ಮೆಣಸೂರು ಗ್ರಾಮದ ಸ.ನಂ.121 ರಲ್ಲಿ ವ್ಯಯಸಾಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ 6 ಎಕರೆ ವಸತಿ ಬಡಾವಣೆಗೆ ಕಳೆದ 13 ವರ್ಷದಿಂದ ಕಂದಾಯ ಕಟ್ಟದೆ ಸರ್ಕಾರಕ್ಕೆ ಲಕ್ಷಾಂತರ ರುಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎಂ.ಆರ್.ರವಿಶಂಕರ್ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಶೃಂಗೇರಿ ಕ್ಷೇತ್ರದ ಮಾಜಿ ಸಚಿವರು ಮೆಣಸೂರು ಗ್ರಾಮದ ಸ.ನಂ.121 ರಲ್ಲಿ ವ್ಯಯಸಾಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ 6 ಎಕರೆ ವಸತಿ ಬಡಾವಣೆಗೆ ಕಳೆದ 13 ವರ್ಷದಿಂದ ಕಂದಾಯ ಕಟ್ಟದೆ ಸರ್ಕಾರಕ್ಕೆ ಲಕ್ಷಾಂತರ ರುಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎಂ.ಆರ್.ರವಿಶಂಕರ್ ಆರೋಪಿಸಿದರು.

ತಾಲೂಕಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ದಾಖಲೆ ಬಿಡುಗಡೆ ಮಾಡಿ ಮಾತನಾಡಿದರು. ಕೃಷಿ ಜಮೀನು ವ್ಯವಸಾಯೇತರ ಜಮೀನಾಗಿ ಪರಿವರ್ತನೆಯಾದರೆ 1 ಚದರಡಿ ಲೆಕ್ಕದಲ್ಲಿ ಕಂದಾಯ ಕಟ್ಟಬೇಕಾಗುತ್ತದೆ. ಅಲ್ಲದೆ ಇದೇ ಜಾಗದಲ್ಲಿದ್ದ ನಕಾಶೆ ಕಂಡ ಕೆರೆ ಕಟ್ಟೆಯನ್ನು ಸಹ ಒತ್ತುವರಿ ಮಾಡಿ ಕೆರೆ ಮುಚ್ಚಿ ಕಾಂಕ್ರೀಟ್ ರಸ್ತೆ ಮಾಡಿದ್ದಾರೆ. ಸರ್ಕಾರಿ ಜಾಗದಲ್ಲಿ ಎರಡು ಮನೆಗಳನ್ನು ಸಹ ಕಟ್ಟಿದ್ದಾರೆ ಎಂದು ಆರೋಪಿಸಿದರು. ಕಂದಾಯ ಬಾಕಿ ಇಟ್ಟುಕೊಂಡರೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಸಾದ್ಯವಾಗುವುದಿಲ್ಲ.ಚುನಾವಣಾ ಆಯೋಗಕ್ಕೆ ಪ್ರಮಾಣಪತ್ರ ಸಲ್ಲಿಸಬೇಕಾಗಿದೆ ಎಂದರು.

ಕೊಪ್ಪದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ಸಭೆಯಲ್ಲಿ ಮಿನಿ ವಿಧಾನಸೌಧ ಸೋರುತ್ತಿದೆ ಎಂದು ಹೇಳಿದ್ದಾರೆ. ಇದನ್ನು ಬಿಜೆಪಿ ಶಾಸಕರೇ ಕಟ್ಟಿಸಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರು ಬೈಲು ನಟರಾಜ ಮಾತನಾಡಿ, ಶಾಸಕ ಟಿ.ಡಿ.ರಾಜೇಗೌಡರ ಮೇಲೆ ಬಿಜೆಪಿ ಸುಳ್ಳು ಕೇಸು ದಾಖಲಿಸುತ್ತಿದೆ. ಬಿಜೆಪಿಯಿಂದ ಗೆದ್ದ ಸಂಸದರು, ವಿಧಾನ ಪರಿಷತ್ ಸದಸ್ಯರು ಇದ್ದಾರೆ. ಅವರನ್ನು ಬಳಸಿಕೊಂಡು ಅಭಿವೃದ್ದಿ ಕಾರ್ಯ ಮಾಡುವುದನ್ನು ಬಿಟ್ಟು ಶಾಸಕರ ಮೇಲೆ ಸುಳ್ಳು ಕೇಸು ದಾಖಲಿಸುತ್ತಿದ್ದಾರೆ. ಮುಂದೆ ಇದೇ ರೀತಿ ಮಾಜಿ ಸಚಿವರು, ಬಿಜೆಪಿ ಮುಖಂಡರು ಸುಳ್ಳು ಪ್ರಚಾರ ಮಾಡಿದರೆ ಕಾಂಗ್ರೆಸ್ ಉಗ್ರ ಹೋರಾಟಕ್ಕೆ ಇಳಿಯಲಿದೆ ಎಂದು ಎಚ್ಚರಿಸಿದರು.

ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ನಾನು ಕೊಪ್ಪದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡದೆ ಇರುವ ಪದಗಳನ್ನು ಬಳಸಿಕೊಂಡು ಬಿಜೆಪಿ ಪಕ್ಷದವರು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿ, ಪಟ್ಟಣ ಪಂಚಾಯಿತಿ ಅಧ್ಯಕ್ಷನಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ ಎಂದರು.

ಕಾಂಗ್ರೆಸ್ ಪಕ್ಷದ ಸಂಘಟನಾ ಕಾರ್ಯದರ್ಶಿ ಮನು ಮಾತನಾಡಿ, ಕೊಪ್ಪದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮಾಜಿ ಸಚಿವರು ಮಾತನಾಡುವಾಗ ಕೆಲವರನ್ನು ನಾಯಿಗೆ ಹೋಲಿಸಿದ್ದಾರೆ.ಇಂತಹ ಪದ ಬಳಕೆ ಮಾಜಿ ಸಚಿವರಿಗೆ ಶೋಭೆ ತರುವುದಿಲ್ಲ ಎಂದರು.

ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ, ರಾಜೇಗೌಡರ ಬಗ್ಗೆ ಬಿಜೆಪಿ ನಿರಂತರವಾಗಿ ಅಪಪ್ರಚಾರ ಮಾಡಿ ಅವರ ಮೇಲೆ ಸುಳ್ಳು ಕೇಸು ದಾಖಲಿಸಿದೆ. ಅದನ್ನು ವಿರೋದಿಸಿ ಕೊಪ್ಪದಲ್ಲಿ ಕಾಂಗ್ರೆಸ್ ಸಭೆ ನಡೆಸಿತ್ತು ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಇ.ಸಿ.ಜೋಯಿ, ಎಸ್.ಡಿ.ರಾಜೇಂದ್ರ, ಬೆನ್ನಿ, ಮಾಳೂರು ದಿಣ್ಣೆ ರಮೇಶ್, ರತನ್ ಗೌಡ, ಬಿ.ಎಸ್.ಸುಬ್ರಮಣ್ಯ, ಜುಬೇದ, ಮುನೋಹರ್ ಪಾಷ, ನಂದೀಶ್, ದೇವಂತಗೌಡ, ಮಹೇಶ್ ಮತ್ತಿತರರು ಇದ್ದರು.

PREV

Recommended Stories

ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ