ಕನ್ನಡಪ್ರಭ ವಾರ್ತೆ ಉಡುಪಿ
ಕಾಶ್ಮೀರದಲ್ಲಿ ಭಯೋತ್ಪಾದಕರು ಹಿಂದೂ ಪ್ರವಾಸಿಗರನ್ನು ಕೊಲ್ಲುವಾಗ ಪಕ್ಷ, ಜಾತಿ, ಭಾಷೆಯನ್ನು ಪ್ರಶ್ನಿಸಿಲ್ಲ. ಧರ್ಮ ಮತ್ತು ಹೆಸರು ಕೇಳಿ ಹಿಂದುಗಳು ಎಂದು ಖಾತರಿಪಡಿಸಿಯೇ ಕೊಂದು ಹಾಕಿದ್ದಾರೆ. ಭಯೋತ್ಪಾದಕರಿಗೆ ಧರ್ಮ ಇಲ್ಲ ಎಂಬುದು ಅಪ್ಪಟ ಸುಳ್ಳು, ಈ ಸತ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖರಾದ ಪೂರ್ಣಿಮಾ ಸುರೇಶ್ ಹೇಳಿದ್ದಾರೆ.ಅವರು ಗುರುವಾರ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದು ಜಾಗರಣ ವೇದಿಕೆ ವತಿಯಿಂದ ಕಾಶ್ಮೀರದ ಪಹಲ್ಗಾಮ್ ನರಮೇಧ ಖಂಡಿಸಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.ಕಾಶ್ಮೀರದ ಶೇ.90ರಷ್ಟು ಆದಾಯ ಪ್ರವಾಸೋದ್ಯಮದಿಂದ ಬರುತ್ತಿದೆ. ಕಾಶ್ಮೀರಿಗಳು ಈಗ ಹೊಟ್ಟೆಪಾಡಿಗಾಗಿ ಹಿಂದೂಗಳ ನರಮೇಧವನ್ನು ಖಂಡಿಸುವ ನಾಟಕವಾಡುತ್ತಿದ್ದಾರೆ. ಸ್ಥಳಿಯ ಕಾಶ್ಮೀರಿಗಳ ಬೆಂಬಲವಿಲ್ಲದೆ ಇಷ್ಟು ದೊಡ್ಡ ಮಟ್ಟದಲ್ಲಿ ಅದೂ ಹಿಂದೂ ಪ್ರವಾಸಿಗಳ ಮೇಲಷ್ಟೇ ದಾಳಿ ನಡೆಸುವುದು ಅಸಾಧ್ಯ ಎಂದವರು ವಿಶ್ಲೇಷಿಸಿದರು.ಅಂದು ಕಾಂಗ್ರೆಸ್ ದೇಶ ವಿಭಜನೆ ಮಾಡಿದ್ದರಿಂದಲೇ ಇಂದು ನಮಗೆ ಪಾಕ್ ಮತ್ತು ಭಯೋತ್ಪಾದನೆ ಉಡುಗೊರೆಯಾಗಿ ಸಿಕ್ಕಿದೆ. 370 ವಿಧಿ ರದ್ದತಿ ಬಳಿಕ ಕಡಿಮೆಯಾಗಿದ್ದ ಭಯೋತ್ಪಾದನಾ ಚಟುವಟಿಕೆ ಮತ್ತೆ ಗರಿಗೆದರಿದೆ, ಇದರ ಹಿಂದೆ ಯಾರಿದ್ದಾರೆ ಎಂದು ಸರ್ಕಾರ ಪತ್ತೆ ಮಾಡಬೇಕು ಎಂದವರು ಹೇಳಿದರು.ಸಭೆಯಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಪ್ರಮುಖರಾದ ಶ್ಯಾಮಲಾ ಕುಂದರ್, ಸುಮಿತ್ರಾ ನಾಯಕ್, ದಿನೇಶ್ ಮೆಂಡನ್, ಮಹೇಶ್ ಬೈಲೂರು, ಕಿದಿಯೂರು ಉದಯ ಕುಮಾರ್ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಶಶಾಂಕ್ ಶಿವತ್ತಾಯ, ಮಾಜಿ ಶಾಸಕ ರಘುಪತಿ ಭಟ್ ಮುಂತಾದವರು ಉಪಸ್ಥಿತರಿದ್ದರು.ಸಭೆಗೆ ಮೊದಲು ಜೋಡುಕಟ್ಟೆಯಿಂದ ಸರ್ವಿಸ್ ಬಸ್ ನಿಲ್ದಾಣವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಬೆಳಗಾವಿಯ ನಿಪ್ಪಾಣಿ ಶ್ರೀ ಮಹಾಕಾಳಿ ಸಂಸ್ಥಾನದ ಅರುಣಾನಂದ ಶ್ರೀ ಚಾಲನೆ ನೀಡಿದರು.