ಕರಿ ಇಷಾಡಕ್ಕೆ ಜಿಐ ಟ್ಯಾಗ್‌ ದೊರೆತಿರುವುದು ಹೆಮ್ಮೆಯ ಸಂಗತಿ: ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು

KannadaprabhaNewsNetwork | Published : May 25, 2025 2:23 AM
ರಾಮಾಯಣ, ಮಹಾಭಾರತ ಕಾಲದಲ್ಲಿ ಮಾವಿನಹಣ್ಣಿನ ಕುರಿತು ಉಲ್ಲೇಖಿಸಲಾಗಿದೆ.
Follow Us

ಅಂಕೋಲಾ: ರಾಮಾಯಣ, ಮಹಾಭಾರತ ಕಾಲದಲ್ಲಿ ಮಾವಿನಹಣ್ಣಿನ ಕುರಿತು ಉಲ್ಲೇಖಿಸಲಾಗಿದೆ. ಪ್ರೀತಿಯ ಸಂಕೇತವಾಗಿರುವ ಮಾವು ಸಮೃದ್ಧ ಪೋಷಕಾಂಶವನ್ನು ಒಳಗೊಂಡಿದೆ. ಅದರಲ್ಲೂ ವಿಶೇಷವಾಗಿ ರಾಜ್ಯದೆಲ್ಲೆಡೆ ಪ್ರಸಿದ್ಧಿ ಹೊಂದಿರುವ ಅಂಕೋಲೆಯ ಕರಿ ಇಷಾಡ ಮಾವಿನಹಣ್ಣಿಗೆ ಜಿಐ ಟ್ಯಾಗ ದೊರೆತಿದ್ದು ಜಗತ್ತಿನಾದ್ಯಂತ ಮಾನ್ಯತೆ ಪಡೆದುಕೊಂಡಿರುವುದು ಹೆಮ್ಮೆ ತಂದಿದೆ ಎಂದು ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅಭಿಪ್ರಾಯ ವ್ಯಕ್ತ ಪಡಿಸಿದರು.

ಕರಿ ಇಷಾಡ ಮಾವಿನ ಹಣ್ಣಿನೊಂದಿಗೆ ಖ್ಯಾತಿ ಹೊಂದಿರುವ ಅಂಕೋಲೆ ಹತ್ತು ಹಲವು ವೈಶಿಷ್ಟ್ಯಗಳೊಂದಿಗೆ ಗುರುತಿಸಿಕೊಂಡಿದ್ದು ಎಲ್ಲರನ್ನು ಮನಸೂರೆಗೊಳಿಸಿದೆ.

ಅವರು ಪಟ್ಟಣದ ಜೈಹಿಂದ್ ಹೈಸ್ಕೂಲ್ ಆವರಣದಲ್ಲಿ ಬೆಳೆಗಾರರ ಸಮಿತಿ ಆಯೋಜಿಸಿದ ಮೂರನೇ ವರ್ಷದ ಮಾವು ಮೇಳವನ್ನು ಉದ್ಘಾಟಿಸಿ ಮಾತನಾಡಿ, ನ್ಯಾಯವಾದಿ ನಾಗರಾಜ ನಾಯಕರ ನೇತೃತ್ವದಲ್ಲಿ ನಡೆಯುತ್ತಿರುವ ಮಾವು ಮೇಳ ಬೇಸಾಯಗಾರರಿಗೆ ಅತ್ಯುತ್ತಮ ಮಾಹಿತಿಯನ್ನು ನೀಡುವುದರೊಂದಿಗೆ ಇತರರಿಗೂ ಮಾದರಿಯಾಗಿದೆ ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತ, ನಾಟಿ ವೈದ್ಯ ಹನುಮಂತ ಬಿ.ಗೌಡ ಮಾತನಾಡಿ, ಕರಿ ಇಷಾಡ ಮಾವಿನ ಬೇಸಾಯಗಾರರಿಗೆ ಪ್ರೋತ್ಸಾಹಿಸುವುದರೊಂದಿಗೆ ಚಾಲ್ತಿ ಮಾವಿನ ಮರಗಳನ್ನು ಉಳಿಸಿ ಬೆಳೆಸಿಕೊಳ್ಳುವ ಕಾರ್ಯವಾಗಬೇಕು. ಈ ದಿಶೆಯಲ್ಲಿ ಬೆಳೆಗಾರರ ಸಮಿತಿಯವರು ಆಯೋಜಿಸುತ್ತಿರುವ ಮಾವು ಮೇಳ ಪರಿಣಾಮಕಾರಿ ಪಾತ್ರ ನಿರ್ವಹಿಸಿದ್ದು ಮಾವಿನ ಹಣ್ಣಿನ ಮೌಲ್ಯವರ್ಧನೆಯಾಗಬೇಕಿದೆ ಎಂದರು.

ಬೆಳೆಗಾರರ ಸಮಿತಿಯ ಅಧ್ಯಕ್ಷ ನಾಗರಾಜ ನಾಯಕ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಆಯೋಜಿಸುತ್ತಿರುವ ಮಾವು ಮೇಳಕ್ಕೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರೀತಿ-ಪ್ರೇಮ, ಸ್ನೇಹ-ಬಾಂಧವ್ಯವನ್ನು ಬೆಸೆಯುವ ಅದ್ಭುತ ಚಲನಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿರುವ ರಾಜೇಂದ್ರಸಿಂಗ್‌ಬಾಬು ಪ್ರಸಕ್ತ ವರ್ಷದ ಮಾವು ಮೇಳಕ್ಕೆ ಚಾಲನೆ ನೀಡಿರುವುದು ಬೆಳೆಗಾರರ ಸಮಿತಿಯವರಿಗೆ ಹುಮ್ಮಸ್ಸು ಹೆಚ್ಚಿಸಿದೆ ಎಂದರು.

ಜೈಹಿಂದ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಜಯ ಕಾಮತ ಅಧ್ಯಕ್ಷತೆ ವಹಿಸಿದ್ದರು.

ಬೆಳೆಗಾರರ ಸಮಿತಿ ಗೌರವಾಧ್ಯಕ್ಷರಾದ ಭಾಸ್ಕರ ನಾರ್ವೇಕರ, ದೇವರಾಯ ನಾಯಕ ಉಪಸ್ಥಿತರಿದ್ದರು.

ಬೆಳೆಗಾರರ ಸಮಿತಿ ಕಾರ್ಯದರ್ಶಿ ರಾಮಚಂದ್ರ ಹೆಗಡೆ ಕುಂಟಕಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನನ್ಯ ಹೆಗಡೆ ಪ್ರಾರ್ಥಿಸಿದರು. ಬೆಳೆಗಾರರ ಸಮಿತಿಯ ಸದಸ್ಯರಾದ ಮಹಾದೇವ ಗೌಡ ಬೆಳಂಬಾರ, ಶಂಕರ ಗೌಡ ಅಡ್ಲೂರು ಉಪಸ್ಥಿತರಿದ್ದರು‌.

ಬಾಲಚಂದ್ರ ಶೆಟ್ಟಿ ಕುಂಟಕಣಿ ವಂದಿಸಿದರು. ಜಗದೀಶ ನಾಯಕ ಹೊಸ್ಕೇರಿ ಕಾರ್ಯಕ್ರಮ ನಿರೂಪಿಸಿದರು. ಬಾಸಗೋಡದ ಆಗೇರ ಸಮಾಜದವರು ಪಂಚವಾದ್ಯದ ಮೂಲಕ ಗಮನ ಸೆಳೆದರು.

ಮಾವು ಮೇಳದಲ್ಲಿ ವಿವಿಧ ತರಹದ ಮಾವಿನಗಿಡಗಳು ಹಾಗೂ ಮಾವಿನ ಕಾಯಿಯ ಉಪ್ಪಿನಕಾಯಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮಾವು ಪ್ರಿಯರು ಕೊಳ್ಳುತ್ತಿರುವ ದೃಶ್ಯ ಕಂಡು ಬಂತು.