ಸರ್ಕಾರದ ಕೆಲಸ ಕಸಾಪದಿಂದ ಸಾಧ್ಯವಾಗಿದ್ದು ಹೆಮ್ಮೆಯ ಸಂಗತಿ: ಬಿ.ಎನ್. ವಾಸರೆ

KannadaprabhaNewsNetwork |  
Published : Jun 24, 2024, 01:32 AM IST
ಕಾರ್ಯಕ್ರಮದಲ್ಲಿ ೨೦೨೩- ೨೪ನೇ ಸಾಲಿನಲ್ಲಿ ಕನ್ನಡದಲ್ಲಿ ಶೇ. ೧೦೦ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮುಂಡಗೋಡ ಹೊರವಲಯ ಮೊರಾರ್ಜಿ ದೇಸಾಯಿ ವಸತಿ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ೨೦೨೩- ೨೪ನೇ ಸಾಲಿನಲ್ಲಿ ಕನ್ನಡದಲ್ಲಿ ಶೇ. ೧೦೦ ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಶೇ. ೧೦೦ರಷ್ಟು ಫಲಿತಾಂಶ ನೀಡಿದ ಶಿಕ್ಷಕರ ಸನ್ಮಾನ ಕಾರ್ಯಕ್ರಮ ನಡೆಯಿತು.

ಮುಂಡಗೋಡ: ಸಾಧನೆ ಎಂಬುದು ಯಾರ ಸ್ವತ್ತೂ ಅಲ್ಲ. ಪ್ರತಿಭೆ ಪ್ರತಿಯೊಬ್ಬರಲ್ಲಿ ಇರುತ್ತದೆ. ಅದನ್ನು ಹೊರಹಾಕಲು ಹಿಂದೇಟು ಹಾಕುತ್ತಾರೆ. ಕೊಂಕಣಿ, ಮರಾಠಿ, ತೆಲುಗು ಸೇರಿದಂತೆ ಅನೇಕ ಮಾತೃಭಾಷಿಕರು ಕನ್ನಡದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದರು.

ಪಟ್ಟಣದ ಹೊರವಲಯ ಮೊರಾರ್ಜಿ ದೇಸಾಯಿ ವಸತಿ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ೨೦೨೩- ೨೪ನೇ ಸಾಲಿನಲ್ಲಿ ಕನ್ನಡದಲ್ಲಿ ಶೇ. ೧೦೦ ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಶೇ. ೧೦೦ರಷ್ಟು ಫಲಿತಾಂಶ ನೀಡಿದ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರ ಮಾಡಬೇಕಾದ ಕನ್ನಡ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವುದು ಹೆಮ್ಮೆ ಇದೆ. ಕನ್ನಡಕ್ಕೆ ಗೌರವ ಸಲ್ಲಿಸುವ ಕಾರ್ಯಕ್ರಮ ಇದಾಗಿದ್ದು, ಮುಂದೆಯೂ ಹೆಚ್ಚೆಚ್ಚು ಅಂಕ ಗಳಿಸಿ ಉನ್ನತ ಸ್ಥಾನ ಪಡೆದುಕೊಂಡರೆ ಈ ಕಾರ್ಯಕ್ರಮಕ್ಕೆ ಗೌರವ ನೀಡಿದಂತಾಗುತ್ತದೆ ಎಂದರು.

ಎಸ್ಎಸ್ಎಲ್‌ಸಿಯಿಂದ ಹಿಡಿದು ಪದವಿವರೆಗಿನ ಶಿಕ್ಷಣದಲ್ಲಿ ಒಳ್ಳೆಯ ಸ್ನೇಹಿತರನ್ನು ಹೊಂದಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ತಂದೆ- ತಾಯಂದಿರು ಮಕ್ಕಳ ಬಗ್ಗೆ ಕಂಡ ಕನಸು ನನಸಾಗಬೇಕಾದರೆ ಸನ್ನಡತೆಯಿಂದ ನಡೆದರೆ ಮಾತ್ರ ಸಾಧ್ಯವಾಗುತ್ತದೆ ಎಂದರು.

ಬಸವರಾಜ ಓಶಿಮಠ ಉದ್ಘಾಟಿಸಿ ಮಾತನಾಡಿ, ಕನ್ನಡ ಮತ್ತು ಸಾಹಿತ್ಯಕ್ಕೆ ನಿಕಟವಾದ ಸಂಬಂಧವಿದೆ. ಕನ್ನಡ ವ್ಯಾಕರಣದ ಬಗ್ಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅಂಕಲ್, ಆಂಟಿ, ಪಪ್ಪಾ, ಮಮ್ಮಿ ಎಂಬುದನ್ನು ಬಿಟ್ಟು ಅಪ್ಪ, ಅಮ್ಮ ಎಂಬ ಪದಗಳನ್ನು ಬಳಸಬೇಕಲ್ಲದೇ ಹಿರಿಯರಿಗೆ ಗೌರವಿಸುವ ಮನೋಭಾವ ಬೆಳೆಸಿಕೊಳ್ಳುವುದರಿಂದ ಸಂಸ್ಕೃತಿ, ಸಂಸ್ಕಾರ ಮತ್ತು ನಮ್ಮ ಭಾಷೆ ನೆಲ ಜಲದ ಬಗ್ಗೆ ಅರಿವು ಹೆಚ್ಚುತ್ತದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ, ಗೌರವ ಕಾರ್ಯದರ್ಶಿ ವಿನಾಯಕ ಶೇಟ್, ಎಸ್.ಡಿ. ಮುಡೆಣ್ಣವರ, ಮೊರಾರ್ಜಿ ದೇಸಾಯಿ ಶಾಲೆ ಪ್ರಭಾರಿ ಪ್ರಾಂಶುಪಾಲ ಅರುಣಕುಮಾರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ ಅಂಬಿಗೇರ, ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತಜಾ ಹುಸೇನ ಆನೆಹೊಸೂರ, ಪಿ.ಪಿ. ಛಬ್ಬಿ, ಸಂಗಪ್ಪ ಕೋಳೂರ, ಗೌರಮ್ಮ ಕೊಳ್ಳಾನವರ, ಶಾರದಾ ರಾಥೋಡ ಮುಂತಾದವರು ಉಪಸ್ಥಿತರಿದ್ದರು. ನಾಗರಾಜ ಅರ್ಕಸಾಲಿ ಸ್ವಾಗತಿಸಿದರು. ಬಾಲಚಂದ್ರ ಹೆಗಡೆ ಹಾಗೂ ಪ್ರತಿಭಾ ಹೆಗಡೆ ನಿರೂಪಿಸಿದರು. ಮಂಜುನಾಥ ಕಲಾಲ ವಂದಿಸಿದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ