28 ವರ್ಷಗಳ ಬಳಿಕ ಮಗ ಮರಳಿ ಬಂದ ಪವಾಡ!

KannadaprabhaNewsNetwork | Published : Dec 14, 2024 12:45 AM

ಸಾರಾಂಶ

ಯಾವುದೋ ಕಾರಣಕ್ಕೆ ಮುನಿದು ಮನೆ ಬಿಟ್ಟಿದ್ದ ಮಗನ ಬಗ್ಗೆ ಸುಂದರ ಪೂಜಾರಿ ಮತ್ತವರ ಪತ್ನಿ ಸುಶೀಲ ನಿತ್ಯವೂ ಮಗ ಇಂದು ಬರುತ್ತಾನೆ ನಾಳೆ ಬರುತ್ತಾನೆ ಎಂದು ಕಾಯುತ್ತಿದ್ದರು. ಇಲ್ಲದಾಗ ಕೊನೆಯ ಕಾಲದಲ್ಲಿಯಾದರೂ ಮಗನನ್ನು ಒಮ್ಮೆ ನೋಡಿ ಕಣ್ಣು ಮುಚ್ಚುತ್ತೇವೆ ಎಂದು ಕಳೆದ ವರ್ಷ ಬ್ರಹ್ಮಬೈದರ್ಕಳ ಕೋಲದ ಸಂದರ್ಭದಲ್ಲಿ ದೈವದಲ್ಲಿ ನಿವೇದಿಸಿಕೊಂಡಿದ್ದರು.

ಯಾವುದೋ ಕಾರಣಕ್ಕೆ ಹೆತ್ತವರನ್ನು, ಊರನ್ನು ತ್ಯಜಿಸಿದ್ದ ಮಗ

ರಾಮ್ ಅಜೆಕಾರ್

ಕನ್ನಡಪ್ರಭ ವಾರ್ತೆ ಕಾರ್ಕಳ

ಇದು ತುಳುನಾಡಿನ ದೈವಗಳ ಪವಾಡವೂ ಹೌದು, ಸಾಮಾಜಿಕ ಜಾಲತಾಣಗಳ ಮಹಿಮೆಯೂ ಹೌದು, 28 ವರ್ಷಗಳ ಹಿಂದೆ ಯಾವುದೋ ಕಾರಣಕ್ಕೆ ಹೆತ್ತವರನ್ನು, ಊರನ್ನು ತ್ಯಜಿಸಿದ್ದ ಮಗ ಮತ್ತೆ ಮನೆಗೆ ಮರಳಿ ಬಂದ ಕತೆ ಇದು. ಈ ಘಟನೆ ನಡೆದಿರುವುದು ಹೆಬ್ರಿ ತಾಲೂಕಿನ ವರಂಗ ಗ್ರಾಮದ ಹೊಸಬೆಟ್ಟು ಎಂಬಲ್ಲಿ. ಇಲ್ಲಿನ ಸುಮಾರು 6 ದಶಕಗಳಿಂದ ದೈವದ ಚಾಕರಿ ಮಾಡುತ್ತಿರುವ ಸುಂದರ ಪೂಜಾರಿ (80) ಅವರ ಮಗ ಭೋಜ 28 ವರ್ಷಗಳ ನಂತರ ಮರಳಿ ಮನೆಗೆ ಬಂದಿದ್ದಾರೆ.ಅಂದು ಯಾವುದೋ ಕಾರಣಕ್ಕೆ ಮುನಿದು ಮನೆ ಬಿಟ್ಟಿದ್ದ ಮಗನ ಬಗ್ಗೆ ಸುಂದರ ಪೂಜಾರಿ ಮತ್ತವರ ಪತ್ನಿ ಸುಶೀಲ ನಿತ್ಯವೂ ಮಗ ಇಂದು ಬರುತ್ತಾನೆ ನಾಳೆ ಬರುತ್ತಾನೆ ಎಂದು ಕಾಯುತ್ತಿದ್ದರು. ಆದರೆ ಮಗ ಎಲ್ಲಿದ್ದಾನೆ ಏನು ಮಾಡುತ್ತಿದ್ದಾನೆ ಎಂದು ಬರುತ್ತಾನೆ ಎಂಬ ಸುಳಿವೇ ಇಲ್ಲದಾಗ ಕೊನೆಯ ಕಾಲದಲ್ಲಿಯಾದರೂ ಮಗನನ್ನು ಒಮ್ಮೆ ನೋಡಿ ಕಣ್ಣು ಮುಚ್ಚುತ್ತೇವೆ ಎಂದು ಕಳೆದ ವರ್ಷ ಬ್ರಹ್ಮಬೈದರ್ಕಳ ಕೋಲದ ಸಂದರ್ಭದಲ್ಲಿ ದೈವದಲ್ಲಿ ನಿವೇದಿಸಿಕೊಂಡಿದ್ದರು. ದೈವವು ವರ್ಷದೊಳಗೆ ಮಗನ ಮುಖ ನೋಡುವಂತೆ ಮಾಡುತ್ತೇನೆ ಎಂದು ಅಭಯ ನೀಡಿತ್ತು.ಇದೇ ಸಂದರ್ಭದಲ್ಲಿ ಉಡುಪಿ ಕಂಡೀರಾ ಖ್ಯಾತಿಯ ಮಂಜುನಾಥ ಕಾಮತ್‌ ಅವರು, ಈ ಹೆತ್ತವರ ಇಳಿವಯಸ್ಸಿನ ನೋವನ್ನು ಫೇಸ್ಬುಕ್ - ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದರು.ವೃದ್ಧ ದಂಪತಿಗಳ ಕಣ್ಣೀರನ್ನು ನೋಡಿದ ಹುಬಳ್ಳಿಯಲ್ಲಿ ತನ್ನಪಾಡಿಗೆ ತಾನು ಹೊಟೇಲ್ ಕಾರ್ಮಿಕನಾಗಿದ್ದ ಭೋಜ ಅವರ ಮನ ಕರಗಿತು. ಹೊರಟು ಊರಿಗೆ ಬಂದರು, ಹೆತ್ತವರ ಕಾಲಿಗೆ ಬಿದ್ದರು. ಬಾಲ್ಯದಿಂದಲೇ ಮಗನ ಕೈಯ ಮೇಲಿದ್ದ ಗುಳ್ಳೆಯನ್ನು ನೋಡಿ ಆತನೇ ತಮ್ಮ ಮಗ ಎಂದು ಖಚಿತಪಟ್ಟುಕೊಂಡು ಸುಂದರ ಪೂಜಾರಿ ಮತ್ತವರ ಪತ್ನಿ ದೈವಕ್ಕೆ ಬಾರಿಬಾರಿ ಕೈ ಮುಗಿದರು. ಆ ದಿನ ಮನೆಯಲ್ಲಿ ಸಂತಸಕ್ಕೆ ಪಾರವೇ ಇರಲಿಲ್ಲ. ಇದಾಗಿ ನಾಲ್ದೈದು ದಿನಗಳ ಭೋಜ ಮತ್ತೆ ಹುಬ್ಬಳ್ಳಿಗೆ ತೆರಳಿದರು. ವಾರ ಕಳೆಯುವಷ್ಟರಲ್ಲಿ ಮಗನನ್ನು ಕೊನೆಯ ಬಾರಿ ನೋಡುವುದಕ್ಕಾಗಿಯೇ ಕಾಯುತ್ತಿದ್ದವರಂತೆ ತಾಯಿ ಸುಶೀಲ ಅನಾರೋಗ್ಯ ಹಾಸಿಗೆ ಹಿಡಿದು ಎರಡು ವಾರಗಳ ಹಿಂದೆ ಕೊನೆಯುಸಿರೆಳೆದಿದ್ದಾರೆ. ವಿಷಯ ತಿಳಿದು ಮತ್ತೆ ಓಡಿ ಬಂದ ಭೋಜ ತಾಯಿಯ ಅಂತ್ಯಸಂಸ್ಕಾರವನ್ನು ಮುಗಿಸಿದ್ದಾರೆ.

----------------

ದೈವದ ಪವಾಡ, ಫೇಸ್‌ಬುಕ್‌ ಮಹಿಮೆ

ಕನ್ನಡಪ್ರಭದೊಂದಿಗೆ ಮಾತನಾಡಿದ ತಂದೆ ಸುಂದರ ಪೂಜಾರಿ ತಾನು ಚಾಕರಿ ಮಾಡಿದ ದೈವವೇ ತಮ್ಮ ಮಗನನ್ನು ಊರಿಗೆ ಕರೆಸಿದೆ ಎಂದು ಧನ್ಯತೆಯಿಂದ ಹೇಳುತ್ತಿದ್ದರೆ, ಭೋಜ ಅವರು ಉಡುಪಿ ಕಂಡೀರಾ ಸಾಮಾಜಿಕ ಜಾಲತಾಣ ನನಗೆ ವರದಾನವಾಯಿತು ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

Share this article