ಕಾಂಗ್ರೆಸ್‌ ಪಾಲಾಗಿರುವುದು ಸಂತಸ ತಂದಿದೆ

KannadaprabhaNewsNetwork | Published : Jan 30, 2025 12:33 AM

ಸಾರಾಂಶ

ಸ್ಥಳೀಯ ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡೂ ಕಾಂಗ್ರೆಸ್ ಪಕ್ಷದ ಪಾಲಾಗಿರುವುದು ಸಂತಸ ತಂದಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡೂ ಕಾಂಗ್ರೆಸ್ ಪಕ್ಷದ ಪಾಲಾಗಿರುವುದು ಸಂತಸ ತಂದಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಪಂ ಸಂಖ್ಯಾಬಲ ಸಮಬಲವಿರುವ ಕಾರಣದಿಂದ ಈ ಚುನಾವಣೆ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಆದರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದು ನನ್ನ ಹಾಗೂ ಅಭ್ಯರ್ಥಿಗಳ ಅದೃಷ್ಟವಾಗಿದೆ ಎಂದು ಹೇಳಿದರು.ಕಿತ್ತೂರು ಅಭಿವೃದ್ಧಿಗಾಗಿ ಈಗಾಗಲೇ ಶ್ರಮವಹಿಸುತ್ತಿದ್ದು, ಸರ್ಕಾರದಿಂದ ಅನುದಾನ ತರಲಾಗುತ್ತಿದೆ. ಈ ಸಂದರ್ಭದಲ್ಲಿ ಕಿತ್ತೂರು ಪಟ್ಟಣ ಪಂಚಾಯಿತಿಯ ಆಡಳಿತವೂ ಕಾಂಗ್ರೆಸ್‌ ಪಾಲಾಗಿದ್ದು ಈ ಅಭಿವೃದ್ಧಿ ಕಾರ್ಯಗಳಿಗೆ ಇನ್ನಷ್ಟು ವೇಗ ದೊರೆತಂತಾಗಿದೆ ಎಂದರು. ಕಿತ್ತೂರು ಅಭಿವೃದ್ಧಿಗೆ ಹಾಗೂ ಯಾವೊಂದು ವಾರ್ಡ್‌ಗಳಿಗೂ ಭೇಧ ಭಾವ ಮಾಡದೆ ಅವುಗಳ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. ಅಲ್ಲದೆ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುವಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಕಿವಿ ಮಾತನ್ನು ಹೇಳಲಾಗುವುದು ಎಂದರು.ಚುನಾವಣೆಯ ನಂತರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲರೂ ಕಿತ್ತೂರು ಅಭಿವೃದ್ಧಿಯ ಕನಸು ಕಂಡಿದ್ದಾರೆ. ಇದೀಗ ಕಿತ್ತೂರು ಅಭಿವೃದ್ಧಿಗೆ ಸಾರಥಿಗಳ ಆಯ್ಕೆಯೂ ನಡೆದಿದೆ. ಈ ಐತಿಹಾಸಿಕ ಕಿತ್ತೂರು ಅಭಿವೃದ್ಧಿಗೆ ರೂಪುರೇಷೆಗಳನ್ನು ರೂಪಿಸಿ ಅಭಿವೃದ್ಧಿಗೊಳಿಸಿ ಕನಸನ್ನು ನನಸು ಮಾಡಬೇಕು. ಕಾಂಗ್ರೆಸ್ ಪಕ್ಷದ ಅಧಿಕಾರ ರಾಜ್ಯದಲ್ಲಿದೆ. ಕ್ಷೇತ್ರದಲ್ಲಿಯೂ ಕಾಂಗ್ರೆಸ ಶಾಸಕರಿದ್ದಾರೆ. ಅಲ್ಲದೆ ಪಟ್ಟಣ ಪಂಚಾಯತಿಯೂ ಕಾಂಗ್ರೆಸ್‌ ಪಕ್ಷದ ಪಾಲಾಗಿದ್ದು, ಅಭಿವೃದ್ಧಿಗೆ ಯಾವುದೇ ಹಿನ್ನಡೆಯಾಗುವುದಿಲ್ಲ. ಅಲ್ಲದೆ ಕಿತ್ತೂರು ಅಭಿವೃದ್ಧಿಯ ಕುರಿತು ನಾನು ಶ್ರಮವಹಿಸಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.ಅಧ್ಯಕ್ಷ ಸ್ಥಾನ ಒಲಿದು ಬಂದಿರುವುದು ನನ್ನ ಅದೃಷ್ಟ. ಈ ಆಡಳಿತ ಅವಧಿಯಲ್ಲಿ ಪ್ರಾಮಾಣಿಕವಾಗಿ ಕಿತ್ತೂರು ಅಭಿವೃದ್ಧಿಗೆ ಬದ್ದನಾಗಿರುತ್ತೇನೆ, ಅಲ್ಲದೆ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣವನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತೇನೆ. ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಶ್ರಮಿಸಿದ ಎಲ್ಲರಿಗೂ ಧನ್ಯವಾದ. ರಾಜಕಾರಣದ ಇತಿಹಾಸದಲ್ಲಿಯೇ ಓರ್ವ ಬಿಜೆಪಿ ಸಂಸದರು ಕಾಂಗ್ರೆಸ್ ಸದಸ್ಯನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಜೀವನದಲ್ಲಿ ಈ ಆಯ್ಕೆಯೂ ಸದಾ ಅಳಿಯಲಾರದ ನೆನಪಾಗಿ ಉಳಿಯಲಿದೆ.

- ಜೈಸಿದ್ದರಾಮ ಮಾರಿಹಾಳ, ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರು.

Share this article