ಜೀವನದ ಜಂಜಾಟದಲ್ಲಿ ಮುಳುಗಿರುವ ಮನುಷ್ಯನಿಗೆ ಸಂಗೀತ ಮನಸ್ಸಿಗೆ ಮುದ ನೀಡುತ್ತದೆ. ಅನೇಕ ರೋಗಗಳಿಗೆ ಸಂಗೀತ ಸಂಜೀವಿನಿಯಾಗಿದೆ. ಗಿಡ, ಮರಗಳೂ ಸಂಗೀತವನ್ನು ಆಸ್ವಾದಿಸುತ್ತವೆ ಎಂಬುದು ವೈಜ್ಞಾನಿಕ ಸತ್ಯವಾಗಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಜೀವನದ ಜಂಜಾಟದಲ್ಲಿ ಮುಳುಗಿರುವ ಮನುಷ್ಯನಿಗೆ ಸಂಗೀತ ಮನಸ್ಸಿಗೆ ಮುದ ನೀಡುತ್ತದೆ. ಅನೇಕ ರೋಗಗಳಿಗೆ ಸಂಗೀತ ಸಂಜೀವಿನಿಯಾಗಿದೆ. ಗಿಡ, ಮರಗಳೂ ಸಂಗೀತವನ್ನು ಆಸ್ವಾದಿಸುತ್ತವೆ ಎಂಬುದು ವೈಜ್ಞಾನಿಕ ಸತ್ಯವಾಗಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ನಡೆದ ಸಂಗೀತ-ಸೌರಭ ಹಾಗೂ ನಗೆ ಹಬ್ಬ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸಂಗೀತ ಆಸ್ವಾದಿಸುವುದರ ಜೊತೆಗೆ ಮನುಷ್ಯನಿಗೆ ಹಾಸ್ಯ ಪ್ರಜ್ಞೆಯೂ ಮುಖ್ಯವಾದುದು. ನಗುವುದರಿಂದ ಮನಸ್ಸು ಉಲ್ಲಸಿತಗೊಳ್ಳುತ್ತದೆ ಮೈ ನರ ನಾಡಿಗಳು ಸಡಿಲಗೊಳ್ಳುತ್ತವೆ. ಉತ್ತಮ ಹಾಸ್ಯದ ಮೂಲಕ ಜನರನ್ನು ನಗಿಸುವುದೂ ಒಂದು ಕಲೆಯಾಗಿದೆ ಎಂದರು. ಮಲೆಬೆನ್ನೂರಿನ ಜೆಡಿಎಸ್ ಮುಖಂಡ ಬಿ.ಚಿದಾನಂದಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ಮುಕ್ತಿಮಂದಿರ, ಸುಳ್ಳ, ನಿಲೊಗಲ್ಲ, ಕಲಾದಗಿ, ಕವಲೇದುರ್ಗ, ಬಿಳಕಿ, ಬೇರುಗಂಡಿ, ಹಾರನಹಳ್ಳಿ ಕೆಂಭಾವಿ, ಸಿಂದಗಿ, ಸಂಗೊಳ್ಳಿ, ಸಿದ್ಧರಬೆಟ್ಟ, ಜಕ್ಕಲಿ-ಹಾರನಹಳ್ಳಿ ಮಠಗಳ ಶ್ರೀಗಳು ಉಪಸ್ಥಿತರಿದ್ದರು. ಕಲಬುರ್ಗಿ ಚವದಾಪುರಿ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಇವರು ನಡೆಸಿಕೊಟ್ಟ ಸಂಗೀತ ಸೌರಭ ಜನಮನವನ್ನು ಸೂರೆಗೊಂಡಿತು. ಸಾಹಿತ್ಯ-ಸಂಸ್ಕೃತಿ ಸಂವರ್ಧಿಸಲಿ ಶಾಂತಿ ಸಮೃದ್ಧಿ ಸರ್ವರಿಗಾಗಲಿ ಎಂಬ ಸ್ವರಚಿತ ಕವನದೊಂದಿಗೆ ಸಂಗೀತ ಆರಂಭಿಸಿದ ಅವರು ಕಡಕೋಳ ಮಡಿವಾಳಪ್ಪನವರ ಯಾಕ ಮಾಡತೀದಿ ಒಣ ಚಿಂತಿ ಹಾಗೂ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳನ್ನು ಕುರಿತು ರಚಿಸಿದ ಅಗಣಿತ ಚರಿತ ಮಹಾಸನ್ನಿಧಿ ಗೀತೆಗಳನ್ನು ಹಾಡಿದರು. ಇವರ ಸಂಗೀತಕ್ಕೆ ಬಸಲಿಂಗಯ್ಯ ಹಿರೇಮಠ ತಬಲಾ, ಗುರುಲಿಂಗಸ್ವಾಮಿ ಹಿತ್ತಲ ಶಿರೂರ ಹರ‍್ಮೊನಿಯಂ ಸಾಥ್ ನೀಡಿದರು.ಟಿವಿ ಹಾಸ್ಯ ಕಲಾವಿದ ಶರಣು ಹಿರೇಮಠ ಹಲವಾರು ಸಂಗತಿಗಳನ್ನು ಹಾಸ್ಯ ಭರಿತವಾಗಿ ಹೇಳುವ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದರು. ಗದಗ ಜಾನಪದ ಸಂಜೀವಿನಿಯ ಗವಿಸಿದ್ಧಯ್ಯ ಹಳ್ಳಿಕೇರಿಮಠ ಜಾನಪದ ಹಾಡುಗಳ ಮೂಲಕ ಜನತೆಯನ್ನು ರಂಜಿಸಿದರು. ರೇಣುಕಾಚಾರ್ಯ ಗುರುಕುಲದ ಸಾಧಕರು ವೇದಘೋಷ ಮಾಡಿ, ಸಿಂಧನೂರು-ಕನ್ನೂರು ಮಠದ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ಸ್ವಾಗತಿಸಿದರು. ಮಳಲಿ ಸಂಸ್ಥಾನಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು.ಸಮಾರಂಭದ ನಂತರ ಹುಬ್ಬಳ್ಳಿಯ ಜೀವಿ ಚಿತ್ರಾಲಯದವರು ನಿರ್ಮಿಸಿರುವ ಗುರುಜೀವಿ ನಿರ್ದೇಶನದ ರೇಣುಕ ಬೋಧೆ ಚಲನಚಿತ್ರ ಪ್ರದರ್ಶನವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಉದ್ಘಾಟಿಸಿ ವೀಕ್ಷಿಸಿ ಶುಭ ಹಾರೈಸಿದರು. ರೇಣುಕ ಬೋಧೆ ಚಿತ್ರದಲ್ಲಿ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಶಿವನ ಸದ್ಯೋಜಾತ ಮುಖದಿಂದ ಉದ್ಭವಿಸಿದ ಕಾರಣವನ್ನು ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರು ಕುಲ್ಯಪಾಕ ಸೋಮೇಶ್ವರ ಲಿಂಗದಿಂದ ಆವಿರ್ಭವಿಸಿ ಮಹಾಮುನಿ ಅಗಸ್ತ್ಯರಿಗೆ ವೀರಶೈವ ಧರ್ಮವನ್ನು ಬೋಧಿಸಿದ್ದನ್ನು ವಿವರಣಾತ್ಮಕವಾಗಿ ಚಿತ್ರೀಕರಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.