ಕನ್ನಡಪ್ರಭ ವಾರ್ತೆ ಅರಸೀಕೆರೆ
ವಿದ್ಯಾರ್ಥಿಗಳು ಹಾಗೂ ತಾಲೂಕಿನ ಜನತೆಯ ದಶಕಗಳ ಅಪೇಕ್ಷೆಯಾಗಿದ್ದ ಸರ್ಕಾರಿ ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳ ನಿರ್ಮಾಣ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಮೇ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.ನಗರದ ಹೊರ ವಲಯದ ಜಾಜೂರು ಸಮೀಪ ನಿರ್ಮಾಣಗೊಳ್ಳುತ್ತಿರುವ ಪಾಲಿಟೆಕ್ನಿಕ್ ಕಾಲೇಜು ಬಳಿಯಲ್ಲೇ ೪ ಕೋಟಿ ರು. ವೆಚ್ಚದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರ್ಮಿಸುತ್ತಿರುವ ಹಾಸ್ಟೆಲ್ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಎರಡು ಪ್ರತಿಷ್ಠಿತ ಕಾಲೇಜುಗಳ ಉದ್ಘಾಟನೆಗಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಏನೆಲ್ಲಾ ಅಡ್ಡಿ, ಅಡೆತಡೆ ಎದುರಾದರೂ ತಾಲೂಕಿನ ಜನತೆಯ ದಶಕಗಳ ಬೇಡಿಕೆ ಆಗಿದ್ದ ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಎರಡೂ ಕಾಲೇಜು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲಿವೆ ಎಂದು ಹೇಳಿದರು. ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗುತ್ತಿರುವ ಕಾಲೇಜುಗಳನ್ನು ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕರು ಕರೆ ನೀಡಿದರು. ಅದೇ ರೀತಿ ಬಡ ಹಾಗೂ ಮಧ್ಯಮ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳು ಒಂದೆಡೆ ಉಳಿದುಕೊಂಡು ವ್ಯಾಸಂಗ ಮಾಡಲು ಯಾವುದೇ ರೀತಿಯ ಅಡಚಣೆ ಆಗದಂತೆ ವಸತಿ ನಿಲಯಗಳನ್ನೂ ನಿರ್ಮಿಸಿಕೊಡಲಾಗುವುದು ಎಂದೂ ಭರವಸೆ ನೀಡಿದರು.ದೇಶಕ್ಕೆ ಸ್ವಾತಂತ್ರ್ಯ ಬಂದು ೭ ದಶಕ ಕಳೆದಿದ್ದರೂ, ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡಲು ತಾಲೂಕಿನ ವಿದ್ಯಾರ್ಥಿಗಳು ಹಾಸನ ಅಥವಾ ತಿಪಟೂರು ಇಲ್ಲವೇ ಬೇರೆಡೆಗಳಿಗೆ ತೆರಳಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ ಸಹಜವಾಗಿಯೇ ತಾಲೂಕಿನ ಜನತೆ ಈ ಎರಡೂ ಕಾಲೇಜುಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಕ್ಷೇತ್ರದ ಜನತೆಯ ಬೇಡಿಕೆ ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಹಿತದೃಷ್ಟಿಯಿಂದ ಉನ್ನತ ಶಿಕ್ಷಣ ಸಂಸ್ಥೆಗಳ ಕನಸು ನನಸಾಗುತ್ತಿದೆ ಎಂದರು.
ಈಗಾಗಲೇ ಹೋಬಳಿವಾರು ನಿರ್ಮಾಣವಾಗಿರುವ ಮೊರಾರ್ಜಿ ವಸತಿ ಶಾಲೆಗಳು ರಾಜ್ಯದಲ್ಲೇ ಮಾದರಿಯಾಗಿವೆ. ಇದೇ ರೀತಿ ಆದಷ್ಟು ಶೀಘ್ರವೇ ನರ್ಸಿಂಗ್ ಕಾಲೇಜನ್ನೂ ಮಂಜೂರು ಮಾಡಿಸಿಕೊಂಡು ಬರುವುದಾಗಿ ಘೋಷಣೆ ಮಾಡಿದರು.ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಗೊಲ್ಲರಹಳ್ಳಿ ಹನುಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಣಾವರ ಶ್ರೀನಿವಾಸ್, ಹರಪನಹಳ್ಳಿ ಜಯಣ್ಣ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್, ಉಪಾಧ್ಯಕ್ಷ ಜವನಪ್ಪ, ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಬಾಯಿ, ಜಾಜೂರು ಗ್ರಾಪಂ ಅಧ್ಯಕ್ಷೆ ಲೀಲಾಬಾಯಿ ಚಂದ್ರನಾಯಕ ಮೊದಲಾದವರಿದ್ದರು.