ಸಂಸದರು ರೈತರ ಪರ ಧ್ವನಿ ಎತ್ತದಿರುವುದು ನಾಚಿಕೆಗೇಡು

KannadaprabhaNewsNetwork | Published : Dec 11, 2024 12:46 AM

ಸಾರಾಂಶ

ಸಂಸತ್ ಅಧಿವೇಶನದಲ್ಲಿ ರೈತರ ಪರವಾಗಿ ಸಂಸದರು ಧ್ವನಿ ಎತ್ತದಿರುವುದನ್ನು ಖಂಡಿಸಿ ನಗರದ ಎಂ. ಪಿ. ಕಚೇರಿ ಮುಂದೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಮಂಗಳವಾರ ಪ್ರತಿಭಟಿಸಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ಸಂಸತ್ ಅಧಿವೇಶನದಲ್ಲಿ ರೈತರ ಪರವಾಗಿ ಸಂಸದರು ಧ್ವನಿ ಎತ್ತದಿರುವುದನ್ನು ಖಂಡಿಸಿ ನಗರದ ಎಂ. ಪಿ. ಕಚೇರಿ ಮುಂದೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಮಂಗಳವಾರ ಪ್ರತಿಭಟಿಸಿ ನಡೆಸಲಾಯಿತು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಬೆಂಗಳೂರಿನ ಫ್ರೀಡ್ಂ ಪಾರ್ಕ್‌ನಲ್ಲಿ ನಮ್ಮ ಜಿಲ್ಲೆಯ ರೈತರು ಹಾಗೂ ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ಜಗಜಿತ್ ಸಿಂಗ್ ದಲೈವಾ ನ.೨೬ರಿಂದ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಅದರಂತೆ ಕರ್ನಾಟಕದಲ್ಲಿ ಜಿಲ್ಲಾವಾರು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ರೈತ ಮುಖಂಡರು ಉಪವಾಸ ಸತ್ಯಾಗ್ರಹದ ಮೂಲಕ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೂ ಸಂಸದರು ನಿರ್ಲಕ್ಷ್ಯವಹಿಸುವುದು ಖಂಡಿನೀಯ. ಕೊಬ್ಬರಿ, ಜೋಳ, ಭತ್ತದ ಬೆಂಬಲ ಬೆಲೆ ಬಗ್ಗೆ ಹಾಗೂ ರೈತರ ಒಕ್ಕಲಿಬ್ಬಿಸುತ್ತಿರುವ ೯೪ಸಿನಲ್ಲಿ ಇಲ್ಲಿವರೆಗೆ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಹಾಗೂ ಬಗರ್‌ ಹುಕುಂನಡಿಯಲ್ಲಿ ರೈತರಿಗೆ ಜಮೀನುಗಳ ಸಾಗುವಳಿ ಪತ್ರ ಕೊಡದೆ ಫಾರಂ ೫೩ ನಡೆಯಲ್ಲಿ ಮಂಜೂರು ಮಾಡದೆ ಸತಾಯಿಸುತ್ತಿರುವುದು, ರೈತರಿಗೆ ವಿದ್ಯುತ್ ಸಂಪರ್ಕಕ್ಕೆ ಲಕ್ಷಾಂತರ ಹಣ ವಸೂಲಿ ಮಾಡಲು ಸರ್ಕಾರ ಚಿಂತಿಸಿರುವ ಬಗ್ಗೆ ಹಾಗೂ ವಿದ್ಯುತ್ ಕಡಿತಗೊಳಿಸಿ ಮೂರರಿಂದ ನಾಲ್ಕು ಗಂಟೆ ವಿದ್ಯುತ್‌ ಒದಗಿಸಿಲ್ಲ ಎಂದರು.

ಮಳೆಹಾನಿ ಹಾಗೂ ಪರಿಹಾರವನ್ನು ಕೊಡಲು ಹಾಗೂ ನಿರಂತರವಾಗಿ ಜಿಲ್ಲೆಯ ಮೂರು ತಾಲೂಕುಗಳ ಆನೆ ಹಾವಳಿಯ ಕುರಿತು ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಸಂಸದ ಶ್ರೇಯಸ್ ಎಂ. ಪಟೇಲ್ ಸಂಸತ್ತಿನಲ್ಲಿ ರೈತರ ಪರ ಧ್ವನಿ ಎತ್ತಬೇಕು. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಖಾತರಿಯಾದ ಕಾನೂನು ಕೇಳುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಎರಡು ವರ್ಷಗಳ ಹಿಂದೆ ರೈತರಿಗೆ ಭರವಸೆ ನೀಡಿ ಹುಸಿಗೊಳಿಸಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಮಾತುಕತೆ ನಡೆಸಿ ರೈತರ ಬೇಡಿಕೆ ಈಡೇರಿಸಬೇಕು ಎಂದು ಹೇಳಿದರು.ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಹೆಚ್.ಬಿ. ಧರ್ಮರಾಜು, ಅತ್ತಿಹಳ್ಳಿ ದೇವರಾಜು, ದರ್ಶನ್, ಪವನ್, ಯೋಗನಾಂದ್, ಕೃಷ್ಣಮೂರ್ತಿ, ತೀರ್ಥಕುಮಾರ್, ಬರಡನಪುರ ನಾಗರಾಜು, ಸೂರಿ, ಧರಣಿ ಇದ್ದರು.

Share this article