ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಟೈಮ್ಸ್ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಕಾನೂನು ಅರಿವು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ೨೦೨೬ನೇ ಸಾಲಿನ ಟೈಮ್ಸ್ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಮಾದಕ ಪದಾರ್ಥಗಳ ಸೇವನೆಯಿಂದ ಮಾನಸಿಕವಾಗಿ ಸ್ಥಿಮಿತ ಕಳೆದುಕೊಳ್ಳಬೇಕಾಗುತ್ತದೆ. ಅದರ ವಿರುದ್ಧ ಎಚ್ಚರದಿಂದಿರುವಂತೆ ಯುವಕರಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ಮಾದಕ ವಸ್ತು ಸೇವನೆ, ಸಮಾಜದಲ್ಲಿ ಶಾಂತಿ ಕದಡಿ ಆಶಾಂತಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಯುವಕರು ಮಾದಕ ವಸ್ತುಗಳಿಂದ ದೂರವಿರಬೇಕು. ಈ ಮಾದಕ ದುಶ್ಚಟಕ್ಕೆ ಬಲಿಯಾದವರನ್ನು ಸರಿ ದಾರಿಗೆ ತರುವ ಕೆಲಸದಲ್ಲಿ ತೊಡಗ ಬೇಕೆಂದು ಹೇಳಿದರು.
ಹದಿಹರೆಯದ ವಯಸ್ಸಿನವರಲ್ಲಿ ಡ್ರಗ್ಸ್ ಸೇವನೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಅನೇಕ ಬದಲಾವಣೆ ಆಗುತ್ತವೆ. ಅವು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಪಾಲಕರು ಕಷ್ಟ, ಕಾರ್ಪಣ್ಯಗಳ ನಡುವೆಯೂ ಮಕ್ಕಳ ಉತ್ತಮ ಭವಿಷ್ಯಕ್ಕೆ ಹಂಬಲಿಸುತ್ತಾರೆ. ಆದ್ದರಿಂದ ವ್ಯಸನ ಮುಕ್ತ ರಾಗಿ ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಭವಿಷ್ಯದ ಜೊತೆಗೆ ಪಾಲಕರ ಕನಸನ್ನು ಮಕ್ಕಳು ನನಸಾಗಿಸಬೇಕೆಂದು ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ ಮಾತನಾಡಿ, ಶಿಕ್ಷಣ ವ್ಯಕ್ತಿಯ ಭವಿಷ್ಯ ರೂಪಿಸುವುದರಿಂದ ಪ್ರಾಮುಖ್ಯತೆ ಕೊಡಬೇಕು. ಕಷ್ಟದ ಬದುಕಿನ ನಡುವೆಯೂ ಶಿಕ್ಷಣ ಪಡೆದು ಅಪ್ರತಿಮ ಸಾಧನೆಗೈದು, ದೇಶದ ಭವಿಷ್ಯ ರೂಪಿಸಿದ ಗಣ್ಯರನ್ನು ಮಾದರಿಯಾಗಿಟ್ಟುಕೊಂಡು ಮಕ್ಕಳು ಶೈಕ್ಷಣಿಕವಾಗಿ ಸಾಧನೆ ಮಾಡಿ, ಗುರುವಿಗೆ ಹಾಗೂ ಪಾಲಕರಿಗೆ ಹೆಸರು ತರಬೇಕೆಂದು ಸಲಹೆ ನೀಡಿದರು.
ಟೈಮ್ಸ್ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಗಂಗಾಧರ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಮೊಬೈಲ್ ಎಲ್ಲವೂ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೊ ಹಾಕದಿದ್ದರೆ ನಿದ್ರೆ ಬಾರದ ಸ್ಥಿತಿ ಇದೆ. ಸಣ್ಣ ಸಣ್ಣ ಆಸೆ, ಆಮಿಷಗಳಿಗೆ ಬಲಿಯಾಗುವುದನ್ನು ಬಿಡಬೇಕು. ಓದುವ ಸಮಯದಲ್ಲಿ ಕಷ್ಟಪಟ್ಟು ಓದಿ, ಓದು ಮುಗಿದ ಮೇಲೆ ನಿಮ್ಮೊಂದಿಗೆ ನಿಮ್ಮ ಸಾಧನೆಗೆಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಿ, ಸಮಾಜದ ಆಸ್ತಿಗಳಾಗಿ ಎಂದರು.
ನಿವೃತ್ತ ಮುಖ್ಯಶಿಕ್ಷಕ ಈ.ಈಶ್ವರನ್, ಅನಾಥ ಶವಗಳಿಗೆ ಮುಕ್ತಿ ದೊರಕಿಸುವ ಸಮಾಜ ಸೇವಕ ಸಿ.ಎಲ್. ದಿನೇಶ್, ಪ್ರಸೂತಿ ತಜ್ಞೆ ಡಾ.ಕೆ.ಆರ್. ಶೋಭಾರಾಣಿ, ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಅಥ್ಲಿಟ್ ಪ್ರಕಾಶ್ ಬರಾಳು ಅವರಿಗೆ ಟೈಮ್ಸ್ ಪುರಸ್ಕಾರ ನೀಡಿ ಗೌರವಿಸಲಾಯಿತು.