ಇದು ಧರ್ಮ-ಅಧರ್ಮದ ನಡುವಿನ ಯುದ್ಧ: ಸಚಿವ ಬಿ.ನಾಗೇಂದ್ರ

KannadaprabhaNewsNetwork | Published : Apr 9, 2024 12:53 AM

ಸಾರಾಂಶ

ಸಂಡೂರು ಶಾಸಕರಾಗಿರುವ ತುಕಾರಾಂ ಕೂಡ ನ್ಯಾಯದ ಪರ ಇದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷ ಬಡವರ ಪರವಾಗಿ ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದೆ.

ಹೊಸಪೇಟೆ: ಬಳ್ಳಾರಿ ಲೋಕಸಭಾ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವಿನ ಯುದ್ಧವಾಗಿದೆ. ಕೌರವ-ಪಾಂಡವರ ನಡುವಿನ ಸೆಣಸಾಟದಲ್ಲಿ ಅರ್ಜುನನಂತಿರುವ ಕಾಂಗ್ರೆಸ್‌ ಅಭ್ಯರ್ಥಿ ಈ.ತುಕಾರಾಂ ಜಯಭೇರಿ ಬಾರಿಸಲಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.

ನಗರದ ಸಾಯಿಲೀಲಾ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ವಿಜಯನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಯಾವತ್ತೂ ನ್ಯಾಯದ ಪರ ನಿಲ್ಲುತ್ತೇವೆ. ಸಂಡೂರು ಶಾಸಕರಾಗಿರುವ ತುಕಾರಾಂ ಕೂಡ ನ್ಯಾಯದ ಪರ ಇದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷ ಬಡವರ ಪರವಾಗಿ ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿದ್ದಾರೆ. ಆದರೆ, ಬಿಜೆಪಿ ಸುಳ್ಳಿನ ಸರಮಾಲೆಯ ಪಕ್ಷವಾಗಿದೆ ಎಂದರು.

ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಕೋಟಿ ಸುಳ್ಳಿನ ಸರ್ದಾರ ಆಗಿದ್ದಾರೆ. ಬಳ್ಳಾರಿ ಭಾಗದಲ್ಲಿ ಅವರಿಗೆ ನಾವು ಮತ ನೀಡುವುದಿಲ್ಲ. ವಿಜಯನಗರ ಭಾಗದಲ್ಲೂ ಸಿನಿಮಾ ಡೈಲಾಗ್‌ಗಳನ್ನು ಹೇಳುತ್ತಾ ಬರುತ್ತಾರೆ. ಮೋಸಕ್ಕೆ ಬೀಳಬೇಡಿ, ಜಾಣ್ಮೆಯಿಂದ ಅವರನ್ನು ಶಾಶ್ವತವಾಗಿ ಮನೆಗೆ ಕಳುಹಿಸಿ ಎಂದರು.

ಸಂಡೂರು ಶಾಸಕ ತುಕಾರಾಂ ಹೊಸಪೇಟೆ ತಾಲೂಕಿನ ಕಮಲಾಪುರದ ಅಳಿಯರಾಗಿದ್ದಾರೆ. ಬಳ್ಳಾರಿ ಶಾಸಕ ಭರತ್‌ ರೆಡ್ಡಿ ಕೂಡ ಹೊಸಪೇಟೆಯ ಅಳಿಯ. ಬಳ್ಳಾರಿ-ವಿಜಯನಗರ ಅಖಂಡವಾಗಿದೆ. ನಮಗೆ ಭೇದಭಾವ ಇಲ್ಲ. ಈ ಬಾರಿ ಕಾಂಗ್ರೆಸ್‌ನಿಂದ ತುಕಾರಾಂ ಗೆಲುವು ಸಾಧಿಸಲಿದ್ದಾರೆ. ಬಳ್ಳಾರಿಯಿಂದ ಗೆದ್ದರೆ ಸೋನಿಯಾ ಗಾಂಧಿಗೆ ಉಡುಗೊರೆ ನೀಡಿದಂತಾಗುತ್ತದೆ ಎಂದರು.

ಶ್ರೀರಾಮುಲು ಅವರನ್ನು ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ಈ ನಾಗೇಂದ್ರ ಸೋಲಿಸಿ ಕಳುಹಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಈ.ತುಕಾರಾಂ ಸೋಲಿಸುತ್ತಾರೆ. ಶ್ರೀರಾಮುಲು ಶಾಶ್ವತವಾಗಿ ಮನೆಗೆ ಹೋಗುತ್ತಾರೆ ಎಂದರು.

ಕೆಎಂಎಫ್‌ ಅಧ್ಯಕ್ಷ ಎಸ್. ಭೀಮಾ ನಾಯ್ಕ ಮಾತನಾಡಿ, ಚುನಾವಣೆ ಬಂದಾಗ ಬಿಜೆಪಿಯವರಿಗೆ ಶ್ರೀರಾಮ ನೆನಪಾಗುತ್ತಾರೆ. ಆದರೆ, ನಮ್ಮ ಎದೆ ಬಗೆದರೆ ಶ್ರೀರಾಮ ಕಾಣುತ್ತಾನೆ. ಚುನಾವಣೆ ಬಳಿಕ ಬಿಜೆಪಿಯವರ ಎದೆ ಬಗೆದರೆ ರಾವಣ ಕಾಣುತ್ತಾನೆ. ಸಿದ್ದರಾಮಯ್ಯ ತಮ್ಮ ಊರಿನಲ್ಲಿ ಶ್ರೀರಾಮ ದೇವರ ದೇವಸ್ಥಾನ ಕಟ್ಟಿಸಿದ್ದಾರೆ. ತುಕಾರಾಂ ಹೆಸರಿನಲ್ಲೇ ರಾಮ ಇದ್ದಾನೆ. ಬಿಜೆಪಿಯವರಂತೆ ನಾವು ಸುಳ್ಳು ಹೇಳುವುದಿಲ್ಲ. ಮಾಜಿ ಸಚಿವ ಆನಂದ ಸಿಂಗ್‌ ನಮ್ಮ ಅಭ್ಯರ್ಥಿ ಪರಿಚಯ ಇಲ್ಲ ಎಂದಿದ್ದಾರೆ. ನಾಲ್ಕು ಬಾರಿ ತುಕಾರಾಂ ಸಂಡೂರಿನಿಂದ ಗೆದ್ದಿದ್ದಾರೆ. ಆನಂದ ಸಿಂಗ್‌ಗೆ ಗಣಿ ಲೂಟಿಕೋರರು ಮಾತ್ರ ಕಾಣುತ್ತಾರೆ. ಸರಳ, ಸಜ್ಜನಿಕೆಯ ಅಭ್ಯರ್ಥಿ ಕಾಣುವುದಿಲ್ಲ ಎಂದರು.

ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಮಾತನಾಡಿ, ಈಗಿನ ಕೇಂದ್ರ ಸರ್ಕಾರವು ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಒಂದೇ ಸರ್ಕಾರಿ ಸಂಸ್ಥಯನ್ನು ಕಟ್ಟಿದ್ದಾರೆಯೇ? ಎಂದು ಪ್ರಶ್ನಿಸಿದರು.

ಶಾಸಕ ಎಚ್.ಆರ್. ಗವಿಯಪ್ಪ ಅಧ್ಯಕ್ಷತೆ ವಹಿಸಿದ್ದರು.

ಶಾಸಕ ಡಾ. ಎನ್.ಟಿ.‌ಶ್ರೀನಿವಾಸ್, ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಾಣಿ ಸಂಯುಕ್ತಾ ಸಿಂಗ್ ಮಾತನಾಡಿದರು. ಮುಖಂಡರಾದ ಕೆ.ಎಸ್.ಎಲ್. ಸ್ವಾಮಿ, ಬಿ.ವಿ. ಶಿವಯೋಗಿ, ವೆಂಕಟೇಶ್‌ ಪ್ರಸಾದ್‌, ಕುರಿ ಶಿವಮೂರ್ತಿ, ಸೈಯದ್‌ ಮೊಹಮ್ಮದ್, ಎಲ್‌.ಸಿದ್ದನಗೌಡ, ವಿನಾಯಕ ಶೆಟ್ಟರ್, ಖಾಜಾಹುಸೇನ್, ಬಣ್ಣದಮನೆ ಸೋಮಶೇಖರ್, ಕೆ.ಮಹೇಶ್, ಗುಜ್ಜಲ ನಿಂಗಪ್ಪ, ಡಿ. ವೆಂಕಟರಮಣ, ಕೆ. ರವಿಕುಮಾರ, ಎಚ್.ಜಿ. ಗುರುದತ್‌, ಎಲ್‌. ಸಂತೋಷ್‌ ಇದ್ದರು.

Share this article