ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಮಳಲಿ ಗ್ರಾಮದಲ್ಲಿರುವ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪುರಸಭಾ ಕಾರ್ಯಾಲಯ, ಜಿಲ್ಲಾಡಳಿತ ಹಾಸನ, ತಾಲೂಕು ಆಡಳಿತ ಸಕಲೇಶಪುರ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಸಕಲೇಶಪುರದಲ್ಲಿ ಜನಿಸಿರುವುದು ನಮ್ಮೆಲ್ಲರ ಪುಣ್ಯ. ಇತರೆ ತಾಲೂಕುಗಳಿಗೆ ಹೋಲಿಸಿದರೆ ಹಚ್ಚಹಸಿರಿನ ಪ್ರಕೃತಿ ಸೌಂದರ್ಯದ ನಡುವೆ ಬದುಕುವ ಅವಕಾಶ ನಮಗೆ ಸಿಕ್ಕಿದೆ. ಇದೇ ಕಾರಣಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಜನರು ಸಕಲೇಶಪುರದ ಪ್ರಕೃತಿಯನ್ನು ಸವಿಯಲು ಬರುತ್ತಾರೆ. ವಿಧಾನಸಭೆಯಲ್ಲಿ ಅನೇಕ ಶಾಸಕರು ‘ನೀವು ಸ್ವರ್ಗದಂತಹ ಪ್ರದೇಶದಲ್ಲಿ ಬದುಕುತ್ತಿದ್ದೀರಿ’ ಎಂದು ಹೇಳುತ್ತಾರೆ. ಅಷ್ಟರ ಮಟ್ಟಿಗೆ ಸಕಲೇಶಪುರ ಪ್ರಕೃತಿ ಸಂಪತ್ತಿನಿಂದ ಕೂಡಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿವಿಧ ಯೋಜನೆಗಳು ಹಾಗೂ ಅಭಿವೃದ್ಧಿ ಚಟುವಟಿಕೆಗಳಿಂದ ಕೆಲವೆಡೆ ಪ್ರಕೃತಿಗೆ ಧಕ್ಕೆ ಉಂಟಾಗುತ್ತಿರುವುದು ಕಾಣುತ್ತಿದೆ. ಇದನ್ನು ನಿರ್ಲಕ್ಷ್ಯ ಮಾಡಬಾರದು. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ನಾವು ಇನ್ನಷ್ಟು ಉತ್ತಮ ಪರಿಸರ ಕೊಟ್ಟು ಹೋಗುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಕಣ್ಣೆದುರಿನಲ್ಲಿರುವ ಪ್ರಕೃತಿಯನ್ನಾದರೂ ಉಳಿಸಿಕೊಂಡು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು. ಸಕಲೇಶಪುರ ತಾಲೂಕಿನಲ್ಲಿ 26 ಗ್ರಾಮ ಪಂಚಾಯಿತಿಗಳಲ್ಲಿ ತಲಾ 2 ಸಾವಿರ ಗಿಡಗಳನ್ನು ನೆಡುವ ಮೂಲಕ ಸುಮಾರು 52 ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಪರಿಸರ ದಿನಾಚರಣೆಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಪ್ರತಿಯೊಬ್ಬರೂ ಗಿಡ ನೆಟ್ಟು ಅದನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡಬೇಕು. ಜೊತೆಗೆ ಮುಂದಿನ ದಿನಗಳಲ್ಲಿ ಸಕಲೇಶಪುರದಲ್ಲಿ ಟ್ರೀ ಪಾರ್ಕ್ ನಿರ್ಮಿಸುವ ಆಶಯ ಹೊಂದಿದ್ದೇನೆ ಎಂದರು.
ಉಪವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ ಮಾತನಾಡಿ ಪ್ರಕೃತಿ ಉಳಿದರೆ ಮಾತ್ರ ಮುಂದಿನ ಪೀಳಿಗೆ ಉಳಿಯುತ್ತದೆ, ಅತಿಥಿಗಳಿಗೆ ಸ್ವಾಗತವಾಗಿ ನೀರಿನ ಬಾಟಲ್ ನೀಡುವ ಸಂಪ್ರದಾಯವಿದೆ. ಆದರೆ ಇದೇ ರೀತಿ ಪರಿಸರ ನಾಶ ಮುಂದುವರಿದರೆ ಮುಂದಿನ ದಿನಗಳಲ್ಲಿ ಆಮ್ಲಜನಕ ಸಿಲಿಂಡರ್ ಹಾಗೂ ಮಾಸ್ಕ್ ನೀಡಿ ಸ್ವಾಗತಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿದರು. ಅಭಿವೃದ್ಧಿಯ ಹೆಸರಿನಲ್ಲಿ ಅಣೆಕಟ್ಟು, ರಸ್ತೆ, ಹೆದ್ದಾರಿ ಹಾಗೂ ಭೂಸ್ವಾಧೀನದ ನೆಪದಲ್ಲಿ ಅತಿಯಾದ ಮರಕಡಿಯುವಿಕೆಯಿಂದ ಪ್ರಕೃತಿ ಸಮತೋಲನ ಹಾಳಾಗುತ್ತಿದೆ. ಮುಂದಿನ ಪೀಳಿಗೆಗೆ ಬದುಕಲು ಯೋಗ್ಯ ಪರಿಸರ ಉಳಿಸಬೇಕಾದರೆ ಮರಗಳನ್ನು ಹೆಚ್ಚಾಗಿ ಬೆಳೆಸುವ ಕೆಲಸವಾಗಬೇಕು ಎಂದರು. ಜಿಲ್ಲಾಧಿಕಾರಿಗಳ ಸೂಚನೆಯಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಐದು ಲಕ್ಷ ಗಿಡ ನೆಡುವ ಗುರಿ ನಿಗದಿಯಾಗಿದ್ದು, ಸಕಲೇಶಪುರ ತಾಲೂಕಿನಲ್ಲಿ ಇಒ, ತಹಸೀಲ್ದಾರ್ ಹಾಗೂ ಮುಖ್ಯಾಧಿಕಾರಿಗಳ ಸಹಯೋಗದೊಂದಿಗೆ ಸುಮಾರು 52 ಸಾವಿರ ಗಿಡಗಳನ್ನು ನೆಡುವ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಮಾನವ ತನ್ನ ಅಗತ್ಯಕ್ಕಿಂತ ದುರಾಸೆ ಹೆಚ್ಚಿಸಿಕೊಂಡು ಪ್ರಕೃತಿಯನ್ನು ವಿನಾಶದ ಅಂಚಿಗೆ ತಳ್ಳುತ್ತಿದ್ದಾನೆ. ಮರಗಳಿಗೂ ಜೀವವಿದ್ದು, ಪರಿಸರ ಸಮತೋಲನ ಕಾಪಾಡುವ ಶಕ್ತಿ ಅವುಗಳಲ್ಲಿದೆ. ಹೀಗಾಗಿ ಪ್ರತಿಯೊಬ್ಬರೂ ಪ್ರಕೃತಿ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.ತಹಸೀಲ್ದಾರ್ ಸುಪ್ರೀತಾ ಮಾತನಾಡಿ ತಾಲೂಕಿನ ಹಚ್ಚಹಸಿರು ಪರಿಸರವೇ ಮಲೆನಾಡಿನ ಜೀವನಾಡಿಯಾಗಿದ್ದು, ಕಾಡುಗಳಿರುವುದರಿಂದಲೇ ಮಳೆ, ನೀರು ಹಾಗೂ ಅನೇಕ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯ ಪೂರೈಕೆಯಾಗುತ್ತಿದೆ. ಎತ್ತಿನಹೊಳೆ ಯೋಜನೆ ಪರಿಸರಕ್ಕೆ ಕನಿಷ್ಠ ಹಾನಿಯಾಗುವ ರೀತಿಯಲ್ಲಿ ಅನುಷ್ಠಾನಗೊಂಡ ಯೋಜನೆಗಳಲ್ಲಿ ಒಂದಾಗಿದೆ ಎಂದರು. ಸಕಲೇಶಪುರ ಭಾಗದಲ್ಲಿ ಹೆದ್ದಾರಿ ಕಾಮಗಾರಿಗಳ ನಂತರ ಮಳೆಗಾಲದಲ್ಲಿ ಗುಡ್ಡ ಕುಸಿತದ ಭೀತಿ ಹೆಚ್ಚಾಗಿದೆ. ಯೋಜನೆಗಳ ಜಾರಿಗೆ ಮುನ್ನ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ಇಂತಹ ಸಮಸ್ಯೆಗಳನ್ನು ತಪ್ಪಿಸಬಹುದಿತ್ತು ಮಹಾತ್ಮ ಗಾಂಧೀಜಿಯವರ “ಭೂಮಿಯಲ್ಲಿ ಪ್ರತಿಯೊಬ್ಬರ ಅಗತ್ಯಕ್ಕೆ ಸಾಕಷ್ಟಿದೆ; ಆದರೆ ಪ್ರತಿಯೊಬ್ಬರ ದುರಾಸೆಗೆ ಸಾಲದು” ಎಂಬ ಮಾತು ಉಲ್ಲೇಖಿಸಿದ ಅವರು, ಪ್ರತಿಯೊಂದು ಸಂಪನ್ಮೂಲವನ್ನು ಅಗತ್ಯಕ್ಕೆ ತಕ್ಕಷ್ಟೇ ಬಳಸುವ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ, ಇ.ಒ ಗಂಗಾಧರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಧುಸೂಧನ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ಪುರಸಭಾ ಅಧಿಕಾರಿ ನಟರಾಜ್ ಸೇರಿದಂತೆ ಇತರರು ಹಾಜರಿದ್ದರು.