ಕನ್ನಡಪ್ರಭ ವಾರ್ತೆ ಮಧುಗಿರಿ
ತಾಲೂಕಿನ ಐ.ಡಿ.ಹಳ್ಳಿ ಹೋಬಳಿ ಇತಿಹಾಸ ಪ್ರಸಿದ್ಧ ದೊಡ್ಡದಾಳವಟ್ಟ ಗ್ರಾಮದಲ್ಲಿ ನೆಲೆಸಿರುವ ಶ್ರೀಕ್ಷೇತ್ರ ಆಷಾಢ ಮಾಸದ ದ್ವಾದಶಿಯಲ್ಲಿ ನಡೆಯುವ ಶ್ರೀಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ಭಾನುವಾರ ಸಡಗರ -ಸಂಭ್ರಮದಿಂದ ಸಂಪನ್ನಗೊಂಡಿತು.ಕ್ಷೇತ್ರ ಶಾಸಕ ಕೆ.ಎನ್.ರಾಜಣ್ಣ ತಮ್ಮ ಕುಟುಂಬ ಸಮೇತರಾಗಿ ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ಈ ಜಾತ್ರೆಗೆ ಆಂಧ್ರಪ್ರದೇಶ ,ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸಿ ಹರಕೆಗಳನ್ನು ತೀರಿಸುವ ಮೂಲಕ ದೇವರನ್ನು ಕಂಡು ಪುನೀತರಾದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎನ್.ರಾಜಣ್ಣ, ಧಾರ್ಮಿಕ ಆಚರಣೆಗಳಿಂದ ಜನರಲ್ಲಿ ಮನಸ್ಸು ಶುದ್ಧಿಯಾಗಿ ಶಾಂತಿ, ನೆಮ್ಮದಿ, ಕ್ಷೇಮ ಉದಯಿಸಿ ಬಾಳು ಬೆಳಗಲಿ ಎಂದ ಅವರು, ಏಕಾದಶಿ ಗ್ರಾಮೀಣರ ಪಾಲಿಗೆ ವಿಶೇಷ ಸಡಗರ ಸಂಭ್ರಮದ ಹಬ್ಬ,ಭಕ್ತರು ಉಪವಾಸವಿದ್ದು, ದೇವರ ಆರಾಧನೆ,ಪುಜೆ ಪುನಸ್ಕಾರಗಳಲ್ಲಿ ತಮ್ಮ ಬಯಕೆಗಳು ಈಡೇರಲೆಂದು ಭಗವಂತನಲ್ಲಿ ಪ್ರಾರ್ಥಿಸುವರು. ಇಂದ ಧಾರ್ಮಿಕ ಆಚರಣೆಗಳು ಭಕ್ತರ ಎಡ ತಾಕುಗಳನ್ನು ಪರಿಹರಿಸಿ ವರುಣನ ಕೃಪೆಯಿಂದ ಸಮೃದ್ಧವಾದ ಮಳೆ ಬಿದ್ದು ಬೆಳೆ ಬೆಳೆದು ಎಲ್ಲರೊಂದಿಗೆ ಶಾಂತಿ ನೆಮ್ಮದಿಯಿಂದ ಬದುಕುವ ಅವಕಾಶ ಕಲ್ಪಿಸಲಿ ಎಂದು ಶಾಸಕ ಕೆ.ಎನ್.ರಾಜಣ್ಣ ದೇವರಲ್ಲಿ ಪ್ರಾರ್ಥಿಸಿದರು. ಜಿಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ ಹಾಗೂ ಅಪಾರ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದೇವರ ಕೃಫೆಗೆ ಪಾತ್ರರಾದರು.