ಮಂಗಳೂರು: ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವುದು ಸಹಜ. ಈ ವಿಚಾರ ಗೊತ್ತಿದ್ದೇ ರೈಲ್ವೆ ಇಲಾಖೆ ಪ್ರತಿ ಬಾರಿ ಬೆಂಗಳೂರು-ಮಂಗಳೂರು ನಡುವೆ ಇದುವರೆಗೆ ವಿಶೇಷ ರೈಲನ್ನು ಓಡಿಸುತ್ತಿತ್ತು. ಆದರೆ ಈ ಬಾರಿ ಮಾತ್ರ ರೈಲ್ವೆ ಇಲಾಖೆಗೆ ದಕ್ಷಿಣ ಕನ್ನಡದಲ್ಲಿ ಕೂಡ ಹಬ್ಬ ಆಚರಿಸುತ್ತಾರೆ ಎನ್ನುವುದು ಮರೆತೇ ಹೋಗಿದಂತೆ ವರ್ತಿಸಿದೆ. ಬೆಂಗಳೂರಿನಿಂದ ಮಂಗಳೂರನ್ನು ಮರೆತು ಕೇವಲ ಕಾರವಾರಕ್ಕೆ ಮಾತ್ರ ವಿಶೇಷ ರೈಲು ಸಂಚಾರ ಏರ್ಪಡಿಸಿ ಕೈತೊಳೆದುಕೊಂಡಿದೆ.
ಯಶವಂತಪುರ-ಮಡಗಾಂವ್ ವಿಶೇಷ ರೈಲು ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಟು ಶನಿವಾರ ಮಡಗಾಂವ್ ತಲುಪಿದೆ. ಸೋಮವಾರ ಮಡಗಾಂವ್‌ನಿಂದ ಹೊರಟು ಮಂಗಳವಾರ ನಸುಕಿನ ಜಾವ ಬೆಂಗಳೂರಿಗೆ ಮರಳುವ ಈ ರೈಲು ಮಂಗಳೂರು ನಗರ ಪ್ರವೇಶಿಸದೆ ಪಡೀಲ್ ಬೈಪಾಸ್ ಮೂಲಕ ಸಂಚರಿಸುತ್ತದೆ. ಹೀಗಾಗಿ ಹಬ್ಬಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ಬರಬೇಕಿದ್ದ ಸಾವಿರಾರು ಪ್ರಯಾಣಿಕರಿಗೆ ಈ ರೈಲಿನಿಂದ ಯಾವುದೇ ಪ್ರಯೋಜನ ಇಲ್ಲ.ಮಂಗಳೂರು ಮರೆವು?:
ಪ್ರಮುಖ ಹಬ್ಬಗಳ ಸಂದರ್ಭ ಬೆಂಗಳೂರಿನಿಂದ ಕರಾವಳಿಯತ್ತ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ವಿಶೇಷ ರೈಲುಗಳಿಲ್ಲದ ಕಾರಣ ಪ್ರಯಾಣಿಕರು ದುಬಾರಿ ಬಸ್ ಹಾಗೂ ಇತರ ಸಾರಿಗೆ ವ್ಯವಸ್ಥೆ ಅವಲಂಬಿಸಬೇಕಾಗುತ್ತದೆ. ಒಂದು ಕಡೆ ಮಂಗಳೂರು ವಿಭಾಗದಿಂದ ರೈಲ್ವೆಗೆ ಕೋಟ್ಯಂತರ ರುಪಾಯಿ ಆದಾಯ ಬರುತ್ತಿದೆ, ಮತ್ತೊಂದೆಡೆ ಹಬ್ಬದ ಸಂದರ್ಭದಲ್ಲಿ ಕನಿಷ್ಠ ವಿಶೇಷ ರೈಲು ನೀಡುವ ಬೇಡಿಕೆಯೂ ಈಡೇರುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.ಗಣೇಶ ಚತುರ್ಥಿ ಮುಗಿಯುತ್ತಾ ಬಂತು. ಆದರೆ ನವರಾತ್ರಿ ಮತ್ತು ದೀಪಾವಳಿ ಇನ್ನೂ ಮುಂದಿವೆ. ಕನಿಷ್ಠ ಮುಂದಿನ ಹಬ್ಬಗಳ ಸಂದರ್ಭದಲ್ಲಾದರೂ ಬೆಂಗಳೂರು-ಮಂಗಳೂರು ನಡುವೆ ಮಂಗಳೂರು ಜಂಕ್ಷನ್ ಅಥವಾ ಮಂಗಳೂರು ಸೆಂಟ್ರಲ್‌ಗೆ ನೇರವಾಗಿ ಬಂದು, ಅಲ್ಲಿಂದಲೇ ಹಿಂದಿರುಗುವ ವಿಶೇಷ ರೈಲುಗಳನ್ನು ಘೋಷಿಸಬೇಕು. ಇಲ್ಲವಾದರೆ ಕರಾವಳಿಯ ರೈಲು ಪ್ರಯಾಣಿಕರನ್ನು ನಿರಂತರವಾಗಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪಕ್ಕೆ ರೈಲ್ವೆ ಇಲಾಖೆ ತಾನೇ ಉತ್ತರಿಸಬೇಕಾಗುತ್ತದೆ.