ಕನ್ನಡಪ್ರಭ ವಾರ್ತೆ ಮಂಡ್ಯ
ಸಾಹಿತಿಗಳೇ ಅಧ್ಯಕ್ಷರಾಗಬೇಕೆಂದು ಪರಿಷತ್ತಿನ ಬೈಲಾದಲ್ಲಿಲ್ಲ ಎನ್ನುವುದು ನಿಜ. ಆದರೆ, ಸಾಹಿತ್ಯ ಸಮ್ಮೇಳನಗಳಿಗೆ ಸಾಹಿತಿಗಳನ್ನೇ ಅಧ್ಯಕ್ಷರನ್ನಾಗಿ ಮಾಡಿಕೊಂಡು ಬರುತ್ತಿರುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ಪರಂಪರೆಯಾಗಿದೆ. ಆ ಪರಂಪರೆಯನ್ನು ಮಂಡ್ಯ ನೆಲದಲ್ಲಿ ಮೊಟಕುಗೊಳಿಸುವುದಕ್ಕೆ ನಾವೆಂದಿಗೂ ಅವಕಾಶ ನೀಡುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಜಿಲ್ಲೆಯ ಸಾಹಿತಿಗಳ ಕಡೆಗಣನೆ:ನಾವೇನು ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ವಿರೋಧಿಗಳೂ ಅಲ್ಲ, ಅವರನ್ನು ದ್ವೇಷಿಸುವುದೂ ಇಲ್ಲ. ತಾತ್ವಿಕವಾದ ವಿಚಾರಗಳ ಕುರಿತಂತೆ ಅವರ ನಿಲುವುಗಳನ್ನು ವಿರೋಧಿಸುತ್ತಿದ್ದೇವೆ. ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವಾಗ ಈ ಮಣ್ಣಿನ ಹಿರಿಯ ಸಾಹಿತಿಗಳಾದ ನರಹಳ್ಳಿ ಬಾಲಸುಬ್ರಹ್ಮಣ್ಯ, ನಾಗತೀಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವಾರು ಹಿರಿಯ ಸಾಹಿತಿಗಳ ಸಭೆ ಕರೆದು ಸಮಾಲೋಚನೆ ನಡೆಸಿ ಸಮ್ಮೇಳನ ಹೇಗೆ ನಡೆಸಬಹುದೆಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸುವ ಕನಿಷ್ಠ ಪ್ರಜ್ಞೆಯೂ ಅಧ್ಯಕ್ಷರಿಗಿಲ್ಲ ಎಂದರೆ ಇದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.
ಡಾ. ಮಹೇಶ್ ಜೋಶಿ ಪದೇ ಪದೇ ನಾನು ೬೮ ಸಾವಿರ ಮತಗಳ ಅಂತರದಿಂದ ಗೆದ್ದು ಬಂದಿದ್ದೇನೆ ಎಂದು ಹೇಳುತ್ತಿರುವುದು ಸರಿಯಲ್ಲ. ಈತನಿಗೆ ಮತ ಕೊಟ್ಟವರು ಮಾತ್ರ ಕನ್ನಡಿಗರು, ಉಳಿದವರು ಕನ್ನಡಿಗರಲ್ಲವೇ ಎಂದು ಖಾರವಾಗಿಯೇ ಪ್ರಶ್ನಿಸಿದರು.
ಜೋಶಿ ಹುಚ್ಚಾಟಗಳಿಗೆಲ್ಲಾ ಸರ್ಕಾರ ಕುಣಿತ:
ಸಮ್ಮೇಳನಗಳಿಗೆ ಲಕ್ಷ ಲಕ್ಷ ಜನರು ಬರುತ್ತಾರೆ ಎನ್ನುವ ಇವರು ಸಮ್ಮೇಳನಗಳಲ್ಲಿ ನಡೆಯುವ ಗೋಷ್ಠಿಗಳಲ್ಲಿ ಎಷ್ಟು ಸಾವಿರ ಜನರಿರುತ್ತಾರೆಂಬ ಬಗ್ಗೆ ದಾಖಲೆಗಳನ್ನು ಕೊಡಲಿ. ಕನಿಷ್ಠ ೩ ಸಾವಿರ ಜನರಿದ್ದರೆ ಅದೇ ಹೆಚ್ಚು. ಲಕ್ಷ ಲಕ್ಷ ಜನರನ್ನು ಸೇರಿಸುವುದು ಮುಖ್ಯವಲ್ಲ. ಸಮ್ಮೇಳನ ಸಾರ್ಥಕತೆ ಪಡೆಯುವುದು ಮುಖ್ಯ ಎಂದು ಕುಟುಕಿದರು.
ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರರನ್ನು ಅಧ್ಯಕ್ಷರನ್ನಾಗಿ ಮಾಡುವ ಕೂಗೆದ್ದಿದ್ದರೂ ಸಾಹಿತಿಗಳಾದವರು ತುಟಿಬಿಚ್ಚುತ್ತಿಲ್ಲ. ಅದರ ವಿರುದ್ಧ ಚಾಟಿಯನ್ನೂ ಬೀಸುತ್ತಿಲ್ಲ. ಸರ್ಕಾರಿ ಸಂಸ್ಥೆಗಳ ಅಧಿಕಾರ ದಾಹ, ಪ್ರಶಸ್ತಿಗಳ ವ್ಯಾಮೋಹಕ್ಕೆ ಒಳಗಾಗಿರುವ ಅವರು ಮೌನವಹಿಸಿರುವುದು ದುರಂತದ ವಿಚಾರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಮಂಡ್ಯ ಪ್ರತಿನಿಧಿಗಳು, ಸಾಹಿತಿಗಳು ನಗಣ್ಯ: ಪ್ರೊ.ಜಿ.ಟಿ.ವೀರಪ್ಪ
ವರ್ತಮಾನದ ತಲ್ಲಣಗಳನ್ನು ಸಾಹಿತಿಯ ಮೂಲಕ ಸರ್ಕಾರಕ್ಕೆ ತಲುಪಿಸುವುದು ಸಾಹಿತ್ಯ ಸಮ್ಮೇಳನದ ಮೂಲ ಉದ್ದೇಶವಾಗಿದೆ. ಅದನ್ನೇ ಮರೆತು ಮಹೇಶ್ ಜೋಶಿ ಏಕಪಕ್ಷೀಯವಾಗಿ ವರ್ತಿಸುತ್ತಿರುವುದು ಸರಿಯಲ್ಲ ಎಂದು ಸಾಹಿತಿ ಪ್ರೊ.ಜಿ.ಟಿ.ವೀರಪ್ಪ ಟೀಕಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ನಿಧನರಾಗಿರುವುದರಿಂದ ಆ ಜಾಗಕ್ಕೆ ಪ್ರಭಾರಿ ಅಧ್ಯಕ್ಷರ ಆಯ್ಕೆಯಾಗದೆ ಆ ಸ್ಥಾನದ ಅನುಪಸ್ಥಿತಿಯಲ್ಲಿ ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷರು ಸಮ್ಮೇಳನ ನಡೆಸುತ್ತಿದ್ದಾರೆ. ಸಮ್ಮೇಳನ ಸಂಪೂರ್ಣವಾಗಿ ಬೆಂಗಳೂರು ಕೇಂದ್ರಿತವಾಗಿದೆ. ಸಮ್ಮೇಳನ ನಡೆಸುವ ಜಾಗ, ಅಧ್ಯಕ್ಷತೆ ಸೇರಿದಂತೆ ಪ್ರತಿಯೊಂದರಲ್ಲೂ ಬೆಂಗಳೂರಿನ ಕೇಂದ್ರ ಸ್ಥಾನವೇ ಆಕ್ರಮಿಸಿಕೊಂಡಿದೆ. ಅತಿಥೇಯ ಮಂಡ್ಯ ಸಮರ್ಥ ಪ್ರತಿನಿಧಿಗಳಿಲ್ಲದೆ ನಗಣ್ಯವಾಗಿದೆ. ಸಮ್ಮೇಳನದ ಜವಾಬ್ದಾರಿಗಳು ಮತ್ತು ಅಧಿಕಾರಗಳು ವಿಕೇಂದ್ರೀಕರಣಗೊಳ್ಳುವಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸಮ್ಮೇಳನದ ಎಲ್ಲ ವ್ಯವಹಾರಗಳು ಅತ್ಯಂತ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಇರಬೇಕೆಂಬ ಕಾರಣದಿಂದ ಸಮ್ಮೇಳನದ ಸಮಸ್ತ ಖರ್ಚು ವೆಚ್ಚಗಳ ಸೋಷಿಯಲ್ ಆಡಿಟ್‌ನ್ನು ಕಡ್ಡಾಯವಾಗಿ ಮಾಡಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟರು.ಗೋಷ್ಠಿಯಲ್ಲಿ ಚಿಕ್ಕಮರಳಿ ಬೋರೇಗೌಡ, ಹುಲ್ಲುಕೆರೆ ಮಹದೇವು, ಬಿ.ಟಿ.ವಿಶ್ವನಾಥ್, ಗುರುಪ್ರಸಾದ್ ಕೆರಗೋಡು, ಸಿ.ಕುಮಾರಿ ಇದ್ದರು.