ಸಹಕಾರ ತತ್ವದಲ್ಲಿ ಲಾಭಕ್ಕಿಂತ ಸೇವೆ ಮುಖ್ಯ

KannadaprabhaNewsNetwork |  
Published : Oct 23, 2024, 12:53 AM IST
21ಡಿಡಬ್ಲೂಡಿ6ಕರ್ನಾಟಕ ವಿದ್ಯಾವರ್ಧಕ ಸಂಘವು ವಿರೂಪಾಕ್ಷ ಶಿವಯೋಗೆಪ್ಪ ಬಸವನಾಳ ದತ್ತಿ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಇಂದು ನೀರಾವರಿ ಕ್ಷೇತ್ರ ವಿಸ್ತೃತವಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರು ನೀರನ್ನು ಅವೈಜ್ಞಾನಿಕವಾಗಿ ಉಪಯೋಗಿಸುತ್ತಿದ್ದಾರೆ. ಇದರಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಂಡು ಸವಳು ಮತ್ತು ಜವುಳು ಆಗಿ ಪರಿವರ್ತನೆಯಾಗುತ್ತಿದೆ

ಧಾರವಾಡ:

ಸ್ವ-ಸಹಾಯವೇ ಸಹಕಾರ ತತ್ವದ ಬುನಾದಿ. ಸಹಕಾರ ಕ್ಷೇತ್ರದಲ್ಲಿ ಲಾಭಕ್ಕಿಂತ ಸೇವೆಯೇ ಮುಖ್ಯ ಎಂದು ಸಮಾಜ ಚಿಂತಕ ಡಾ. ಎಂ.ಆರ್. ರಂಗನಾಥ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ವಿರೂಪಾಕ್ಷ ಶಿವಯೋಗೆಪ್ಪ ಬಸವನಾಳ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸದಲ್ಲಿ ನೀರಾವರಿ ಹಾಗೂ ಸಹಕಾರ ವಿಷಯ ಕುರಿತು ಮಾತನಾಡಿದರು.

ಸಮಾನತೆ ಮತ್ತು ಉಳಿತಾಯ ತತ್ವದಡಿ ಉದಯವಾದ ಸಹಕಾರ ಸಂಘಗಳು ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಯ ಸ್ವಯಂ ಪ್ರೇರಿತ ವಿಧಾನವಾಗಿದೆ. ಅವಿಭಜಿತ ಧಾರವಾಡ ಜಿಲ್ಲೆಯ ಗದಗ ತಾಲೂಕಿನ ಕಣಗಿನಹಾಳದಲ್ಲಿ ಭಾರತದಲ್ಲಿಯೇ ಪ್ರಪ್ರಥಮ ಸಹಕಾರ ಸಂಘವನ್ನು ಸಿದ್ಧನಗೌಡ ಪಾಟೀಲರು 1905ರಲ್ಲಿ ಗ್ರಾಮೀಣ ರೈತರಿಗಾಗಿ ಪ್ರಾರಂಭಿಸಿದರು. ಭಾರತದಲ್ಲಿ ಸಹಕಾರ ಸಂಘ ಸ್ಥಾಪನೆಗೆ ಮೊದಲ ಹೆಜ್ಜೆ ಇಟ್ಟ ರಾಜ್ಯವೇ ಕರ್ನಾಟಕ ಎಂಬುದು ಹೆಮ್ಮೆಯ ಸಂಗತಿ ಎಂದರು.

ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಇಂದು ನೀರಾವರಿ ಕ್ಷೇತ್ರ ವಿಸ್ತೃತವಾಗಿದ್ದು, ಅಚ್ಚುಕಟ್ಟು ಪ್ರದೇಶದ ರೈತರು ನೀರನ್ನು ಅವೈಜ್ಞಾನಿಕವಾಗಿ ಉಪಯೋಗಿಸುತ್ತಿದ್ದಾರೆ. ಇದರಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಂಡು ಸವಳು ಮತ್ತು ಜವುಳು ಆಗಿ ಪರಿವರ್ತನೆಯಾಗುತ್ತಿದೆ. ಈ ದೆಸೆಯಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು ನೀರಿನ ಸದ್ಬಳಕೆ ಮಾಡಿಕೊಳ್ಳಲು ನೀರು ಬಳಕೆದಾರರ ಸಹಕಾರ ಸಂಘ ಸ್ಥಾಪನೆ ಮಾಡಲಾಗಿದೆ. ಈಗಾಗಲೇ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಮೂಲಕ ನೀರು ದುಂದುವೆಚ್ಚವಾಗದಂತೆ ಯೋಜಿಸಲಾಗಿದೆ. ನೀರಿನ ಸದ್ಬಳಕೆಯಾಗದಿದ್ದಲ್ಲಿ ಭವಿಷ್ಯದಲ್ಲಿ ನೀರಿಗಾಗಿ ಜನರು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಸಹಕಾರ ಸಂಘಗಳ ಬೆಳವಣಿಗೆಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಬಹಳ ಮುಖ್ಯ. ಜನರ ವಿಶ್ವಾಸ ಪಡೆದಾಗ ಮಾತ್ರ ಸಂಘ-ಸಂಸ್ಥೆಗಳು ಬೆಳವಣಿಗೆಯಾಗಲು ಸಾಧ್ಯ ಎಂದರು.

ಕೆಸಿಸಿ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ಎಸ್.ಜಿ. ಪಾಟೀಲ, ರವೀಂದ್ರ ಬಸವನಾಳ ಇದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ