ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದೇ ಮೇಲು: ರಂಭಾಪುರಿ ಶ್ರೀ

KannadaprabhaNewsNetwork |  
Published : Aug 15, 2025, 01:00 AM IST
೧೪ಬಿಹೆಚ್‌ಆರ್ ೪: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ  ಇಷ್ಟಲಿಂಗ ಮಹಾಪೂಜಾ ಸಂದರ್ಭದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಪೂಜಾ ವೃತಂ’ ಕೃತಿಯನ್ನು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದೇ ಮೇಲು. ಜೀವನದ ಅಮೂಲ್ಯ ಆಸ್ತಿ ಅನುಭವ. ಮನುಷ್ಯ ಬರೀ ಗಾತ್ರದಿಂದ ದೊಡ್ಡವರಾಗದೇ ಪಾತ್ರದಿಂದ ದೊಡ್ಡವರಾಗಬೇಕೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ರಂಭಾಪುರಿ ಪೀಠದಲ್ಲಿ ಗುರುವಾರ ನಡೆದ ಶ್ರಾವಣ ಪುರಾಣ ಪ್ರವಚನ ಧರ್ಮ ಸಮಾರಂಭ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದೇ ಮೇಲು. ಜೀವನದ ಅಮೂಲ್ಯ ಆಸ್ತಿ ಅನುಭವ. ಮನುಷ್ಯ ಬರೀ ಗಾತ್ರದಿಂದ ದೊಡ್ಡವರಾಗದೇ ಪಾತ್ರದಿಂದ ದೊಡ್ಡವರಾಗಬೇಕೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ಗುರುವಾರ ನಡೆದ ಶ್ರಾವಣ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಭಗವಂತನ ಕೈಯಲ್ಲಿ ಎಲ್ಲವೂ ಇರುತ್ತದೆ. ಆದರೂ ಸುಮ್ಮನಿರುತ್ತಾನೆ. ಮನುಷ್ಯನ ಕೈಯಲ್ಲಿ ಏನೂ ಇರುವುದಿಲ್ಲ. ಆದರೆ ಎಲ್ಲವೂ ಇದೆ ಅನ್ನುವ ಭ್ರಮೆಯಲ್ಲಿರುತ್ತಾನೆ. ಬರೆದ ಅಕ್ಷರ ತಪ್ಪಾದರೆ ತಿದ್ದಬಹುದು. ಆದರೆ ಬದುಕೇ ತಪ್ಪಾದರೆ ತಿದ್ದುವುದು ಕಷ್ಟ. ಮನುಷ್ಯನಿಗೆ ಮರಣ ಇರುತ್ತದೆ. ಆದರೆ ಒಳ್ಳೆಯತನಕ್ಕೆ ಮರಣ ಇರುವುದಿಲ್ಲ. ಇತರರಿಗಾಗಿ ಯಾರು ಮರಗುತ್ತಾರೋ ಅವರೇ ನಿಜವಾಗಿ ಬದುಕಿರುವವರು ಎಂದರು.

ಅಡವಿಗಳಲ್ಲಿ ಅಲೆದರೂ ಶ್ರೀರಾಮ ಕೆಡಲಿಲ್ಲ. ಅಂತಃಪುರದಲ್ಲಿ ರಾವಣ ಬೆಳೆದರೂ ಒಳ್ಳೆಯವನಾಗಲಿಲ್ಲ. ವ್ಯಕ್ತಿತ್ವ ಅನ್ನುವುದು ಆಸ್ತಿ, ಅಂತಸ್ಥಿನಲ್ಲಿ ಇರುವುದಿಲ್ಲ. ಅದು ಇರುವುದು ಆಲೋಚನೆ ಮತ್ತು ಆಚರಣೆಗಳಲ್ಲಿ ಎಂದು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಎಂದರು.ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ, ಹಣ ಕಳೆದರೆ ಗಳಿಸಬಹುದು. ಮಾತಿನಿಂದ ಕಳೆದುಕೊಂಡ ಸಂಬಂಧ ತಿರುಗಿ ಪಡೆಯಲಾಗದು. ಮನುಷ್ಯನ ಗಮನ ಗುರಿಯತ್ತ ಇರಬೇಕೇ ಹೊರತು ಅಡೆತಡೆಯ ಮೇಲಲ್ಲ. ಪೆಟ್ಟು ತಿಂದ ಕಲ್ಲು ಮೂರ್ತಿಯಾದರೆ ಪೆಟ್ಟು ಕೊಟ್ಟ ಸುತ್ತಿಗೆ ಸುತ್ತಿಗೆಯಾಗಿ ಉಳಿಯುವಂತೆ ನೋವು ಕೊಡುವವರು ಕೂಡಾ ಹಾಗೆ ಉಳಿಯುತ್ತಾರೆ. ನೋವು ಉಂಡವರು ಜ್ಞಾನಿಗಳು ಆಗುತ್ತಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಸುಖ ದುಃಖಗಳನ್ನು ಸಮಾನವಾಗಿ ಕಾಣಬೇಕೆಂದು ಎಚ್ಚರಿಸಿ ದ್ದಾರೆ. ಅರಿವಿನ ಕಣ್ಣು ಗುರು. ಗುರುವಿನಿಂದ ಗುರಿ ಹಿಡಿದು ನಡೆದಾಗ ಬಾಳು ಸಾರ್ಥಕಗೊಳ್ಳುತ್ತದೆ ಎಂದರು.

ಚಿಂಚಣಸೂರು ಕಲ್ಮಠದ ಸಿದ್ಧಮಲ್ಲ ಶಿವಾಚಾರ್ಯರು, ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು, ಮಿಣಜಗಿ ಚಿದಾನಂದ ದೇವರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಹಿರೇಮಠ, ವಿಠಲಾಪುರ ಹಿರೇಮಠ ಗಂಗಾಧರಸ್ವಾಮಿ, ಶಿಕ್ಷಕ ವೀರೇಶ ಕುಲಕರ್ಣಿ ಮತ್ತಿತರರು ಇದ್ದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರಾವಣ ಪವಿತ್ರ ಸಂದರ್ಭದಲ್ಲಿ ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ನಡೆಯಿತು. ಬೆಳಿಗ್ಗೆ ಲೋಕಕಲ್ಯಾಣಾರ್ಥವಾಗಿ ಶ್ರೀ ರಂಭಾಪುರಿ ಜಗದ್ಗುರು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಶುಭ ಹಾರೈಸಿದರು. ಬೆಳಗಿನ ಪೂಜಾ ಸಂದರ್ಭದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಪೂಜಾ ವೃತಂ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರು ಬಿಡುಗಡೆಗೊಳಿಸಿದರು. ಲಕ್ಷ್ಮೇಶ್ವರ, ಲಿಂಗನಮಟ್ಟಿ, ಕಲಬುರ್ಗಿ, ಸಾಗರ ಮುಂತಾದ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.೧೪ಬಿಹೆಚ್‌ಆರ್ ೪:

ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಇಷ್ಟಲಿಂಗ ಮಹಾಪೂಜಾ ಸಂದರ್ಭದಲ್ಲಿ ಶ್ರೀ ಜಗದ್ಗುರು ರೇಣುಕಾ ಚಾರ್ಯ ಪೂಜಾ ವೃತಂ ಕೃತಿಯನ್ನು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಬಿಡುಗಡೆ ಮಾಡಿದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್