ಅನುಪಯುಕ್ತ ಕಟ್ಟಡ ತೆರವುಗೊಳಿಸಲು ನಿಮಗೇನು ಕಷ್ಟ: ಬಸವರಾಜ ಛತ್ರದ

KannadaprabhaNewsNetwork | Published : Mar 1, 2024 2:25 AM

ಸಾರಾಂಶ

ಅಧಿಕಾರಿಗಳ ನಿರ್ಲಕ್ಷದಿಂದಲೇ ಮುಖ್ಯರಸ್ತೆ ಅಗಲೀಕರಣ ಹಿನ್ನೆಡೆ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಮುಖ್ಯರಸ್ತೆಯಲ್ಲಿನ ಅನುಪಯುಕ್ತ (ಸಾಮರ್ಥ್ಯ ಕಳೆದುಕೊಂಡ) ಕಟ್ಟಡ ತೆರವುಗೊಳಿಸಲು ನಿಮಗೇನು ಕಷ್ಟ. ಅಧಿಕಾರಿಗಳ ನಿರ್ಲಕ್ಷದಿಂದಲೇ ಮುಖ್ಯರಸ್ತೆ ಅಗಲೀಕರಣ ಹಿನ್ನೆಡೆ ಉಂಟಾಗಿದೆ ಎಂದು ಪುರಸಭೆ ಸದಸ್ಯ ಬಸವರಾಜ ಛತ್ರದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ-136 (ಮುಖ್ಯರಸ್ತೆ) ಅಗಲೀಕರಣ ವಿಳಂಬ ನೀತಿ ಖಂಡಿಸಿ ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಆಗಮಿಸಿದ್ದ ಉಪವಿಭಾಗಾಧಿಕಾರಿ ಮತ್ತು ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಮಾತನಾಡಿದರು.

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ನಿಮಗೇನು ತೊಂದರೆಯಾಗಿದೆ. ನಿತ್ಯವೂ ಲಕ್ಷಾಂತರ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ನೋಡಿಯೂ ಅಧಿಕಾರಿಗಳು ಮಾತ್ರ ಸುಮ್ಮನಿರುತ್ತೀರಿ ಎಂದರು.

ನ್ಯಾಯವಾದಿ ಎನ್.ಎಸ್. ಬಟ್ಟಲಕಟ್ಟಿ ಮಾತನಾಡಿ, ನಿಗದಿತ ಸಮಯಕ್ಕೆ ನೋಟಿಫಿಕೇಶನ್ ಮಾಡದೇ ನಿಮ್ಮಿಂದಾದ ತಪ್ಪಿಗೆ ಮತ್ತೆ ಹೆಚ್ಚುವರಿ ಸಮಯ ಪಡೆದುಕೊಳ್ಳಬೇಕಾಯಿತು. 60 ದಿನದಲ್ಲಿ ಮಾಡುವ ಕೆಲಸಕ್ಕೆ 1 ವರ್ಷ ಕಾಲಾವಕಾಶ ಕೇಳಿದ್ದೀರಿ ಫೈನಲ್ ನೋಟಿಫಿಕೇಶನ್ ಮಾಡಲು ವಿಳಂಬವೇಕೆ..? ಯಾವುದೇ ನ್ಯಾಯಾಲಯ ಅಗಲೀಕರಣ ಮಾಡಬೇಡ ಎಂದಿಲ್ಲ ಆದರೆ ಅಧಿಕಾರಿಗಳು ಮಾತ್ರ ಇಲ್ಲಸಲ್ಲದ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಚನ್ನಪ್ಪ ಅನಪಯುಕ್ತ ಕಟ್ಟಡ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶಿಸಿದ್ದಾರೆ. ಈ ಕುರಿತು ಎರಡ್ಮೂರು ಸಭೆಗಳನ್ನು ಮಾಡಿದ್ದೇವೆ. ಶೀಘ್ರದಲ್ಲೇ ಶಾಸಕರ ನೇತೃತ್ವದಲ್ಲಿ ವಿಶೇಷ ಸಭೆಯನ್ನು ಪುರಸಭೆಯಲ್ಲಿ ನಡೆಸಲಾಗುವುದು. ಸದರಿ ಸಭೆಯಲ್ಲಿ ಎಲ್ಲ ವಿಷಯಗಳನ್ನು ಕೂಲಂಕಷವಾಗಿ ಚರ್ಚಿಸಲಾಗುವುದು ಎಂದರು.

ಈ ವೇಳೆ ಪುರಸಭೆ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಫಕ್ಕೀರಮ್ಮ ಛಲವಾದಿ, ಕಲಾವತಿ ಬಡಿಗೇರ, ಸರೋಜಾ ಉಳ್ಳಾಗಡ್ಡಿ, ಮಲ್ಲಮ್ಮ ಪಾಟೀಲ, ಗಣೇಶ ಅಚಲಕರ, ಬಿಜೆಪಿ ತಾಲೂಕಾಧ್ಯಕ್ಷ ಹಾಲೇಶ ಜಾಧವ, ಪಿ.ಎಲ್.ಡಿ. ಬ್ಯಾಂಕ್‌ ಮಾಜಿ ಅಧ್ಯಕ್ಷ ಶಿವಯೋಗಿ ಶಿರೂರ, ಡಾ. ಪ್ರಕಾಶ ಭಸ್ಮೆ, ವಿಜಯ್ ವಾಲಿಶೆಟ್ಟರ, ಪ್ರಕಾಶ ಪಟ್ಟಣಶೆಟ್ಟಿ, ಪ್ರಕಾಶ ಅಂಕಲಕೋಟಿ, ಪಾಂಡುರಂಗ ಸುತಾರ, ಎಂ.ಎಲ್. ಕಿರಣ, ಮಂಜುನಾಥ ಜಾಧವ, ಪ್ರದೀಪ್ ಜಾಧವ, ಗುತ್ತೆಮ್ಮ ಮಾಳಗಿ, ಫರೀದಾಬಾನು ನದೀಮುಲ್ಲಾ, ಪೀರಾಂಬಿ ವರ್ಧಿ ಸೇರಿದಂತೆ ಹಲವರಿದ್ದರು.

Share this article