ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕಿನ ನಂದಗುಡಿ ಹೋಬಳಿಯ ಕೊಂಡ್ರಹಳ್ಳಿಯ ಶ್ರೀಧರ್ಮೇಶ್ವರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2150ನೇ ಮದ್ಯವರ್ಜನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬ್ರಿಟಿಷರು ಪರಿಚಯಿಸಿದ ಮದ್ಯ ಹಾಗೂ ಮಾದಕ ವಸ್ತುಗಳನ್ನು ಭಾರತೀಯರು ಸೇವಿಸಲು ಪ್ರಾರಂಭಿಸಿದರು. ಭಾರತೀಯ ಸಂಸ್ಕೃತಿಯನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸಲು ಪ್ರಾರಂಭಿಸುತ್ತಿದ್ದಂತೆ ಹಬ್ಬಗಳಲ್ಲಿ ಸಿಹಿ ಅಡುಗೆ ಮಾಡಿ ಆಚರಿಸುತ್ತಿದ್ದ ಜನರು ಮದ್ಯ ಸೇವನೆಯ ಮೂಲಕ ಆಚರಿಸಲು ಪ್ರಾರಂಭಿಸಿ, ಮದ್ಯಸೇವನೆಯು ಒಂದು ಫ್ಯಾಶನ್ನಾಗಿ ಪರಿವರ್ತನೆಯಾಗಿದೆ. ಗ್ರಾಮೀಣ ಜನರು ಮದ್ಯ ಸೇವನೆಯ ದಾಸರಾಗಿ ಕೌಟುಂಬಿಕ ಕಲಹ, ಆರೋಗ್ಯ, ಆರ್ಥಿಕ, ನಿರುದ್ಯೋಗ ಸಮಸ್ಯೆಗಳು ಎದುರಾಗುತ್ತಿದ್ದು, ಈ ಸಮಸ್ಯೆಗಳಿಗೆ ಪರಿಹಾರವೆಂದರೆ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವುದಾಗಿದೆ. ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದ ಮುಖಾಂತರ ಅನುಷ್ಠಾನಗೊಳಿಸಲು ಮುಂದಾಗಿರುವುದು ಶ್ಲಾಘನೀಯವಾದದು ಎಂದರು.ಜನ ಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಮಾತನಾಡಿ, ಮನುಷ್ಯನಲ್ಲಿ ಮದ್ಯಪಾನ ಕೆಟ್ಟ ಅಭ್ಯಾಸಗಳಲ್ಲಿ ಒಂದಾಗಿದ್ದು, ಈ ಶಿಬಿರದಲ್ಲಿ ವೈಜ್ಞಾನಿಕವಾದ ಚಿಕಿತ್ಸೆ, ಆಧ್ಯಾತ್ಮಿಕತೆ, ನೈತಿಕತೆ, ಜೀವನ ಮೌಲ್ಯ, ನಾಯಕತ್ವ, ಸೌಹಾರ್ದತೆ ಹಾಗೂ ಸಾಮಾಜಿಕ ಸ್ಥಾನಮಾನದ ಕುರಿತಾದ ವಿಷಯಗಳ ತಜ್ಞರನ್ನು ಕರೆಸಿ ಮಾಹಿತಿ ನೀಡಲಾಗುತ್ತಿದೆ. ಮನೋದೈಹಿಕ ಚಿಕಿತ್ಸೆಯನ್ನು ನುರಿತ ವೈದ್ಯರಿಂದ ದೊರಕಿಸಿ ಕೇವಲ ೮ ದಿನಗಳಲ್ಲಿ ಸಂಪೂರ್ಣ ಪರಿವರ್ತನೆಗೊಳ್ಳಲು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್.ಎನ್. ಮಂಜುನಾಥ್, ಎಸ್‌ಎಫ್‌ಎಸ್‌ಸಿಎಸ್‌ನ ನಿರ್ದೇಶಕ ಎಚ್.ಎನ್. ಧರ್ಮೇಶ್, ಪಿಡಿಒ ಕೆಂಪಣ್ಣ, ಗ್ರಾಪಂನ ಮಾಜಿ ಅಧ್ಯಕ್ಷೆ ಮುನಿವೆಂಕಟಮ್ಮ ಬಚ್ಚಪ್ಪ, ನಿವೃತ್ತ ಮುಖ್ಯ ಶಿಕ್ಷಕ ಶ್ರೀಕಾಂತ್ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಹರೀಶ್‌ಕುಮಾರ್, ನಿರ್ದೇಶಕ ಪದ್ಮಯ್ಯ, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಕುರುಬರಹಳ್ಳಿ ಟಿ.ವೆಂಕಟೇಶ್, ಸದಸ್ಯರಾದ ಕೃಷ್ಣಪ್ಪ, ಮಮತ, ರಾಧ, ದೇವರಾಜ್, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತು ಸ್ವಸಹಾಯ ಸಂಘದ ಸದಸ್ಯರು ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.