- ಗೋಲ್ಡನ್ ಅವರ್‌ನಲ್ಲೇ ಹೃದ್ರೋಗಿಗಳಿಗೆ ತುರ್ತು ಚಿಕಿತ್ಸೆ: ಜಯದೇವ ಸಂಸ್ಥೆ ನಿರ್ದೇಶಕ ಡಾ. ದಿನೇಶ್
- ಹೃದ್ರೋಗಿಗಳಿಗೆ ಮೈಸೂರು ಅಥವಾ ಬೆಂಗಳೂರಿಗೆ ತೆರಳುವ ಅನಿವಾರ್ಯತೆ ತಪ್ಪಿಸಬಹುದು
- ಆಸ್ಪತ್ರೆಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ 5 ಎಕರೆ ಜಾಗದ ಅಗತ್ಯವಿದೆ- ಈ ಯೋಜನೆ ಅನುಷ್ಠಾನಕ್ಕೆ ಸ್ಥಳೀಯ ಶಾಸಕ ರವಿಕುಮಾರ್ ಸಹಕಾರ
ಜಿಲ್ಲೆಯ ಜನರಿಗೆ ಗುಣಮಟ್ಟದ ಹೃದ್ರೋಗ ಚಿಕಿತ್ಸಾ ಸೇವೆ ಸ್ಥಳೀಯವಾಗಿಯೇ ದೊರಕಿಸುವ ಉದ್ದೇಶದಿಂದ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಘಟಕವನ್ನು ಮಂಡ್ಯದಲ್ಲಿ ಸ್ಥಾಪಿಸಲು ಸರ್ಕಾರ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಜಯದೇವ ಸಂಸ್ಥೆಯ ಸಂಸ್ಥೆಯ ನಿರ್ದೇಶಕ ಡಾ.ದಿನೇಶ್ ಅವರು ಶುಕ್ರವಾರ ಮಂಡ್ಯಕ್ಕೆ ಭೇಟಿ ನೀಡಿ, ಆಸ್ಪತ್ರೆ ನಿರ್ಮಾಣಕ್ಕೆ ಉದ್ದೇಶಿಸಿರುವ ಸ್ಥಳವನ್ನು ಪರಿಶೀಲಿಸಿದರು.
ಮಂಡ್ಯ ಜಿಲ್ಲೆಯ ಪ್ರತಿಯೊಬ್ಬ ನಾಗರಿಕರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು ಎಂಬ ಸರ್ಕಾರದ ಆಶಯದಂತೆ ಜಯದೇವ ಸಂಸ್ಥೆಯ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಜಾಗವನ್ನು ಪರಿಶೀಲಿಸಿದ್ದು, ಆಸ್ಪತ್ರೆ ಸ್ಥಾಪನೆಗೆ ಸೂಕ್ತವಾಗಿದೆ. ಈ ಕುರಿತು ನೀಲನಕ್ಷೆಯನ್ನು ಮೂರು-ನಾಲ್ಕು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಆಸ್ಪತ್ರೆಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ 5 ಎಕರೆ ಜಾಗದ ಅಗತ್ಯವಿದೆ. ಅಗತ್ಯ ಜಾಗ ಲಭ್ಯವಾದಲ್ಲಿ 250 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸುವ ಉದ್ದೇಶವಿದೆ. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ (ಐಸಿಯು), ಹೃದ್ರೋಗ ತೀವ್ರ ನಿಗಾ ಘಟಕ (ಎಂಐಸಿಯು), ಕ್ಯಾತ್ ಲ್ಯಾಬ್ ಹಾಗೂ ಶಸ್ತ್ರಚಿಕಿತ್ಸಾ ಕೊಠಡಿಗಳ (ಒಟಿ) ಸಂಕೀರ್ಣ ಸೇರಿದಂತೆ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಇಒ ನಾಗರಾಜು ಪ್ರಭಾಕರ್, ಮೋಹನ್ ರಾಜ್ ಮಂಡ್ಯ ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.