ಕನ್ನಡಪ್ರಭ ವಾರ್ತೆ ಮಂಡ್ಯ
ಇಲ್ಲಿನ ಶಂಕರ ಮಠ ನಿವಾಸಿ ಅಬ್ದುಲ್ ಸತ್ತಾರ್ ಅವರ ಮಗ ಉಮ್ಮರ್ ಅಲಿಯಾಸ್ ಉಮರ್ (೩೦) ಎಂಬಾತನೇ ಧಾರ್ಮಿಕ ಘೋಷಣೆ ಕೂಗಿದ ಯುವಕ. ಶುಕ್ರವಾರ ಬೆಳಗ್ಗೆ ಸುಮಾರು ೮ ಗಂಟೆ ಸಮಯಕ್ಕೆ ಸ್ಕೂಟರ್‌ನಲ್ಲಿ ಮಹಾವೀರ ವೃತ್ತಕ್ಕೆ ಆಗಮಿಸಿದನು. ವೃತ್ತದಲ್ಲಿ ಸಂಚಾರ ದಟ್ಟಣೆಯಿಂದ ನಿಂತಿದ್ದ ಸಾರಿಗೆ ಸಂಸ್ಥೆ ಬಸ್ಸಿನ ಮುಂಭಾಗ ಸ್ಕೂಟರ್ ನಿಲ್ಲಿಸಿ ಅಲ್ಲೇ ನಿಂತು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದಾನೆ. ಯುವಕನ ಅನಿರೀಕ್ಷಿತ ವರ್ತನೆಯಿಂದ ಕೆಲ ಪ್ರಯಾಣಿಕರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು. ಸಾರಿಗೆ ಬಸ್‌ಗೆ ಅಡ್ಡಲಾಗಿ ಬೈಕ್ ನಿಲ್ಲಿಸಿ ಸಂಚಾರಕ್ಕೂ ಅಡಚಣೆ ಉಂಟುಮಾಡಿದ್ದಕ್ಕೆ ಜನರು ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆದರೂ, ಆತ ಘೋಷಣೆ ಕೂಗಿದ ಬಳಿಕ ಅಲ್ಲಿಂದ ಕಾಲ್ಕಿತ್ತನು.
ಮಾನಸಿಕ ಅಸ್ವಸ್ಥನೆಂದು ಹೇಳಲಾಗಿರುವ ಈತ ಕಳೆದ ಕೆಲ ದಿನಗಳಿಂದ ಗುತ್ತಲು ರಸ್ತೆ ಕಡೆಯಿಂದ ಬೆಳಗ್ಗೆ ಅಥವಾ ರಾತ್ರಿ ವೇಳೆ ಸ್ಕೂಟರ್‌ನಲ್ಲಿ ಮೊದಲು ಷುಗರ್ ಫ್ಯಾಕ್ಟರಿ ವೃತ್ತಕ್ಕೆ ಬಂದು ರಸ್ತೆಯಲ್ಲೇ ನಿಂತು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುವುದು. ನಂತರ ನಂದಾ ವೃತ್ತ, ಮಹಾವೀರ ವೃತ್ತ ನಂತರ ಜೆ.ಸಿ.ವೃತ್ತಕ್ಕೆ ತೆರಳಿ ಅಲ್ಲೂ ಸಹ ಇದೇ ರೀತಿಯ ಘೋಷಣೆ ಕೂಗಿ ಹೊರಟುಹೋಗುತ್ತಿದ್ದನು. ಈತನ ವರ್ತನೆಯನ್ನು ಕರ್ತವ್ಯದಲ್ಲಿರುವ ಪೊಲೀಸರೂ ಸಹ ನೋಡಿದ್ದಾರೆ. ಆದರೂ ಯಾವುದೇ ಕ್ರಮ ವಹಿಸದೆ ಮೌನವಾಗಿದ್ದಾರೆ ಎಂದು ಯುವಕನ ವರ್ತನೆಯನ್ನು ಕಂಡಿರುವ ಕೆಲವು ಸಾರ್ವಜನಿಕರು ತಿಳಿಸಿದ್ದಾರೆ.ಶುಕ್ರವಾರ ಬೆಳಗ್ಗೆ ೮ ಗಂಟೆ ಸುಮಾರಿಗೆ ಮಹಾವೀರ ವೃತ್ತಕ್ಕೆ ಬಂದು ರಸ್ತೆ ಮಧ್ಯದಲ್ಲೇ ಸ್ಕೂಟರ್ ನಿಲ್ಲಿಸಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದನ್ನು ಕೆಲವರು ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.