ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯುವ ಸಂಸತ್ತು ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ, ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರುಕ್ರಾಂತಿ ಹರಿಕಾರ ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಪ್ರತಿ ಹಂತದಲ್ಲಿಯೂ, ಪ್ರತಿಯೊಬ್ಬರಿಗೂ ದೊರಕಿಸಿಕೊಡುವಂತೆ ಯುವ ಸಮುದಾಯ ಮುಂದಾಗಬೇಕು ಮಾಡಬೇಕಿದೆ ಎಂದರು.
ಭಾರತದ ಪ್ರಜಾಪ್ರಭುತ್ವದ ನಾಲ್ಕು ಅಂಗಗಳಾದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಇವುಗಳ ಪ್ರಮುಖ ಗುರಿ ದೇಶದ ಸಮಗ್ರ ಅಭಿವೃದ್ದಿಯೇ ಆಗಿದೆ. ಹಾಗಾಗಿ ಯುವ ಜನಾಂಗ ಸಮಾಜದಲ್ಲಿರುವ ಬಡವರು, ನಿಗರ್ತಿಕರ ಧ್ವನಿಯಾಗಿ ಕೆಲಸ ಮಾಡುವ ಅಗತ್ಯವಿದೆ. ಯುವ ಮನಸ್ಸುಗಳಲ್ಲಿ ಭಯವಿಲ್ಲ ಎಂಬುದನ್ನು ಇಂದಿನ ಸಭೆ ನಿರೂಪಿಸಿದೆ. ಇದೇ ಆತ್ಮವಿಶ್ವಾಸವನ್ನು ಉಳಿಸಿಕೊಂಡು ಮುನ್ನೆಡೆದಲ್ಲಿ ನಿಗದಿತ ಗುರಿ ತಲುಪುವುದರಲ್ಲಿ ಸಂಶಯವೇ ಇಲ್ಲ ಎಂದು ಯುವ ಮನಸ್ಸುಗಳ ಬೆನ್ನು ತಟ್ಟಿದರು.ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಹಾಗೂ ಇತರೆ ಜನಪ್ರತಿನಿಧಿಗಳ ಸಹಕಾರದಿಂದ ಹಲವಾರು ಸಾಧನೆಗಳನ್ನು ಮಾಡಲಾಗಿದೆ. ಮೂರು ಬಾರಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರಕಾರದ ವಿವಿಧ ಯೋಜನೆಗಳಡಿ ಸುಮಾರು ೩೫೦೦ಕೋಟಿ ರು. ಸಾಧನ-ಸಲಕರಣೆಗಳ ವಿತರಣೆ, ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಅಲ್ಲದೆ 1993 ರಿಂದ ಈಡೇರದೆ ಇದ್ದ ದಾಖಲಾತಿ ಇಲ್ಲದ ಗ್ರಾಮಗಳಿಗೆ ಕಂದಾಯ ಇಲಾಖೆಯ ಮೂಲಕ ದಾಖಲೆಗಳನ್ನು ನೀಡಿ, ಆ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಒಂದೇ ಬಾರಿಗೆ 29 ಸಾವಿರ ಕುಟುಂಬಗಳಿಗೆ ದಾಖಲೆ ಒದಗಿಸುವ ಮೂಲಕ ಗಿನ್ನಿಸ್ ಬುಕ್ ಅಫ್ ರೆಕಾರ್ಡ್ನಲ್ಲಿ ದಾಖಲಾಗಿದೆ ಎಂದು ತಿಳಿಸಿದರು.
ಇಂದಿನ ಜಿಲ್ಲಾ ಮಟ್ಟದ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಉತ್ತಮ ಭಾಷಣದ ಮೂಲಕ ಆಯ್ಕೆಯಾದವರು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಯುವ ಸಂಸತ್ತು ಕಾರ್ಯಕ್ರಮದ ಅಂತಿಮ ಸುತ್ತಿಗೆ ಆಯ್ಕೆಯಾಗಲಿದ್ದಾರೆ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಚಂದ್ರಕುಮಾರ್, ಯುವಜನರಿಗೆ ಸಂಸತ್ತಿನ ಕಾರ್ಯ ವೈಖರಿ, ನಾಯಕತ್ವದ ಗುಣ, ಮಾತನಾಡುವ ಶೈಲಿ ಮತ್ತು ವಿಷಯಗಳ ಮೇಲಿನ ಹಿಡಿತ, ಮತ್ತಿತರರ ವಿಚಾರಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಯುವ ಸಂಸತ್ತು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲೆಯ 10 ತಾಲೂಕುಗಳಲ್ಲಿ ನಡೆದ ತಾಲ್ಲೂಕು ಮಟ್ಟದ ಯುವ ಸಂಸತ್ ಕಾರ್ಯಕ್ರಮದಲ್ಲಿ ಆಯ್ಕೆಯಾದವರು ಇಂದಿನ ಜಿಲ್ಲಾ ಮಟ್ಟದ ಯುವ ಸಂಸತ್ತಿನಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.
ಯುವ ಸಂಸತ್ತಿನಲ್ಲಿ ಕೃಷಿ, ಸಮಾಜ ಕಲ್ಯಾಣ, ಕುಡಿಯುವ ನೀರು, ಉನ್ನತ ಶಿಕ್ಷಣ, ಗ್ರಂಥಾಲಯ ಹೀಗೆ ಹಲವು ವಿಚಾರಗಳ ಕುರಿತು ಆಡಳಿತ ಮತ್ತು ವಿರೋಧ ಪಕ್ಷದ ಮುಖಂಡರು ಚರ್ಚೆ ನಡೆಸಿದರು. ಸಭಾಧ್ಯಕ್ಷೆಯ ನಡಾವಳಿಕೆಗೆ ಅಧಿಕಾರಿಗಳಿಂದಲೂ ಮೆಚ್ಚುಗೆ ವ್ಯಕ್ತವಾಯಿತು.