ಮಕ್ಕಳಿಗೆ ಸಂಸ್ಕಾರ ಕಲಿಸುವುದು ಅಗತ್ಯ: ಗೌರ್‍ನರ್‌

KannadaprabhaNewsNetwork |  
Published : Oct 10, 2026, 03:45 AM IST
Book Release 2 | Kannada Prabha

ಸಾರಾಂಶ

ಎನ್.ಶ್ರೀದೇವಿ ಅವರ 2 ಕೃತಿಗಳನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಬಿಡುಗಡೆ ಮಾಡಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಾರಿಗೆ ಸಚಿವ ಬೈರತಿ ಸುರೇಶ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಇತರರಿದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್‌ ಬಳಸುತ್ತಿದ್ದಾರೆ. ಆಧುನಿಕ ಶಿಕ್ಷಣದ ಜೊತೆಗೆ ನಮ್ಮ ಸಾಂಪ್ರದಾಯಿಕ ಕ್ರೀಡೆ, ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಮಕ್ಕಳಿಗೆ ಕಲಿಸುವುದು ಅಗತ್ಯವಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಪ್ರತಿಪಾದಿಸಿದರು.

ಹೆಬ್ಬಾಳದ ಸುಮಂಗಲಿ ಸೇವಾಶ್ರಮದ ಆವರಣದಲ್ಲಿ ಎನ್.ಶ್ರೀದೇವಿಯವರ ‘ವಿಸ್ಪರ್ಸ್ ಆಫ್ ವಿಸ್ಡಮ್’ ಮತ್ತು ‘ದಿ ಲೀಗಸಿ ಆಫ್ ಟ್ರಡಿಷನಲ್ ಟಾಯ್ಸ್ ಅಂಡ್ ಗೇಮ್ಸ್’ ಕೃತಿಗಳ ಬಿಡುಗಡೆ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಾರತದ ಆಧ್ಯಾತ್ಮಿಕ ಪರಂಪರೆ, ಸಂತ ಸಂಪ್ರದಾಯ ಹಾಗೂ ಸಾಂಪ್ರದಾಯಿಕ ಆಟಗಳು ಮತ್ತು ಆಟಿಕೆಗಳು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಆಯಾಮಗಳಾಗಿವೆ. ಇವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಸಂರಕ್ಷಿಸುವ ಅಗತ್ಯವಿದೆ. ಸಂತ ಪರಂಪರೆಯು ಕೇವಲ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವುದಷ್ಟೇ ಅಲ್ಲದೆ, ಸಾಮಾಜಿಕ ಸಾಮರಸ್ಯ, ಮಾನವೀಯತೆ ಮತ್ತು ರಾಷ್ಟ್ರ ನಿರ್ಮಾಣದ ಮಾರ್ಗವನ್ನೂ ತೋರಿಸಿದೆ ಎಂದು ಅಭಿಪ್ರಾಯಪಟ್ಟರು.

ಸ್ವಾಮಿ ವಿವೇಕಾನಂದರು ಯುವಕರಿಗೆ ಆತ್ಮವಿಶ್ವಾಸ ಮತ್ತು ರಾಷ್ಟ್ರಸೇವೆಯ ಸಂದೇಶ ನೀಡಿದರೆ, ಮಹಾತ್ಮ ಗಾಂಧೀಜಿ ಸತ್ಯ ಮತ್ತು ಅಹಿಂಸೆಯನ್ನು ಜೀವನದ ಅಡಿಪಾಯವನ್ನಾಗಿ ಮಾಡಿಕೊಂಡರು. ರಾಮಕೃಷ್ಣ ಪರಮಹಂಸ, ಅರಬಿಂದೋ, ಸಂತ ಕಬೀರ, ಗುರುನಾನಕ್, ಕನಕದಾಸರು, ಬಸವಣ್ಣನವರು, ಅಕ್ಕ ಮಹಾದೇವಿ ಸೇರಿ ಅನೇಕ ಸಂತರು ಮಾನವೀಯತೆ, ಪ್ರೀತಿ, ಸಾಮರಸ್ಯ ಮತ್ತು ಆಧ್ಯಾತ್ಮಿಕ ಪ್ರಗತಿಯ ಮಾರ್ಗವನ್ನು ತೋರಿಸಿದ್ದಾರೆ ಎಂದು ಸ್ಮರಿಸಿದರು.

ಯಶಸ್ಸನ್ನು ಸಮಾಜದ ಸೇವೆಗೆ ಬಳಸಿ

ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತವು ತನ್ನ ಪ್ರಾಚೀನ ಜ್ಞಾನ ಪರಂಪರೆ ಹಾಗೂ ಆಧುನಿಕ ವಿಕಾಸದ ಸಮ್ಮಿಲನದೊಂದಿಗೆ ಮುನ್ನಡೆಯುತ್ತಿದೆ. ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು, ಉನ್ನತ ಗುರಿಗಳನ್ನು ಇಟ್ಟುಕೊಂಡು ತಮ್ಮ ಯಶಸ್ಸನ್ನು ಸಮಾಜದ ಸೇವೆಗೆ ಬಳಸಿಕೊಳ್ಳಬೇಕು. ಸುಮಂಗಲಿ ಸೇವಾ ಆಶ್ರಮವು ಶಿಕ್ಷಣ, ಮಹಿಳಾ ಸಬಲೀಕರಣ, ಆಧ್ಯಾತ್ಮಿಕತೆ ಹಾಗೂ ಸಾಮಾಜಿಕ ಜವಾಬ್ದಾರಿಯ ಕ್ಷೇತ್ರದಲ್ಲಿ ಶ್ಲಾಘನೀಯ ಸೇವೆ ಸಲ್ಲಿಸುತ್ತಿದೆ ಎಂದು ಪ್ರಶಂಸಿಸಿದರು.

ಸಾರಿಗೆ ಸಚಿವ ಬೈರತಿ ಸುರೇಶ್ ಮಾತನಾಡಿ, ಲೋಕಭವನಕ್ಕೆ ತೆರಳುವ ಯಾವುದೇ ಪಕ್ಷದ ಮುಖಂಡರಾಗಲಿ ಬೇಧಭಾವ ಮಾಡದೆ ಎಲ್ಲರನ್ನೂ ಸಮಾನ ರೀತಿಯಲ್ಲಿ ಥಾವರ್‌ಚಂದ್ ಗೆಹಲೋತ್‌ ಕಾಣುತ್ತಾರೆ. ಕಳೆದ 5 ವರ್ಷದಿಂದ ರಾಜ್ಯದಲ್ಲಿ ರಾಜ್ಯಪಾಲರಾಗಿದ್ದು, ಇನ್ನೂ 10 ವರ್ಷ ನಮ್ಮ ರಾಜ್ಯದ ಸೇವೆ ಮಾಡಲಿ. ಇವರಂತಹ ಸ್ನೇಹಮಯಿ ರಾಜ್ಯಪಾಲರು ವಿರಳ ಎಂದು ಶ್ಲಾಘಿಸಿದರು.

ಲೇಖಕಿ ಎನ್. ಶ್ರೀದೇವಿ ಅವರು ನೀಡಿರುವ ಈ ಅತ್ಯಂತ ಸುಂದರವಾದ ಕೃತಿಗಳು ಕೇವಲ ಮನರಂಜನೆಯಷ್ಟೇ ಅಲ್ಲದೆ, ಮಕ್ಕಳು ಹಾಗೂ ಯುವಜನರಲ್ಲಿ ಕಲಿಯುವಿಕೆ, ಆಲೋಚನೆ, ಸಹಕಾರ ಮತ್ತು ಸಾಮಾಜಿಕ ಸಂಸ್ಕಾರಗಳನ್ನು ಬೆಳೆಸುವಂತಹ ಕೆಲಸ ಮಾಡುತ್ತವೆ. ಸುಮಂಗಲಿ ಸೇವಾ ಆಶ್ರಮವು ಬರಿ ಹೆಸರಿಗಷ್ಟೇ ಆಶ್ರಮವಲ್ಲ, ಇಡೀ ಹೆಬ್ಬಾಳ ಕ್ಷೇತ್ರಕ್ಕೆ ತಾಯಿ ಇದ್ದಂತೆ. ಅನಾಥರು, ಅಬಲೆಯರಿಗೆ ತಾಯಿಯಾಗಿ ಆಸರೆ ನೀಡುತ್ತಿರುವ ಸುಶೀಲಮ್ಮ ಅವರ ಸೇವೆ ಶ್ಲಾಘನೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ​ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವೆ ರಾಣಿ ಸತೀಶ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಸುಮಂಗಲಿ ಸೇವಾಶ್ರಮದ ಸಂಸ್ಥಾಪಕಿ ಡಾ.ಎಸ್.ಜಿ.ಸುಶೀಲಮ್ಮ, ಲೇಖಕಿ ಎನ್.ಶ್ರೀದೇವಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದ ಟ್ರಾಫಿಕಲ್ಲಿ ಕಳೆವ ಸಮಯ 1 ತಿಂಗಳ ದುಡಿಮೆಗೆ ಸಮ
ರೌಡಿಗಳ ಮನೆ ಮೇಲೆ ಸಿಸಿಬಿ ದಾಳಿ: ನಾಲ್ವರ ಸೆರೆ