ಹೃದಯದ ಬಗ್ಗೆ ಕಾಳಜಿ ವಹಿಸುವುದು ಅತ್ಯವಶ್ಯಕ

KannadaprabhaNewsNetwork |  
Published : Sep 29, 2025, 01:03 AM IST
ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಭಾನುವಾರ ಬೆಳಗ್ಗೆ ಹಮ್ಮಿಕೊಂಡಿದ್ದ ವಾಕಥಾನ್ ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕೆ.ಎಸ್. ನಟರಾಜ್ ಚಾಲನೆ ನೀಡಿದರು. | Kannada Prabha

ಸಾರಾಂಶ

ವಿಶ್ವ ಹೃದಯ ದಿನದ ಅಂಗವಾಗಿ ಶಿವಮೊಗ್ಗ ನಗರದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಭಾನುವಾರ ಬೆಳಗ್ಗೆ ಹಮ್ಮಿಕೊಂಡಿದ್ದ ವಾಕಥಾನ್‌ಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಸಾವಿರಾರು ಜನರು ವಾಕಥಾನ್‌ನಲ್ಲಿ ಹೆಜ್ಜೆ ಹಾಕಿದರು.

ಶಿವಮೊಗ್ಗ: ವಿಶ್ವ ಹೃದಯ ದಿನದ ಅಂಗವಾಗಿ ಶಿವಮೊಗ್ಗ ನಗರದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಭಾನುವಾರ ಬೆಳಗ್ಗೆ ಹಮ್ಮಿಕೊಂಡಿದ್ದ ವಾಕಥಾನ್‌ಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಸಾವಿರಾರು ಜನರು ವಾಕಥಾನ್‌ನಲ್ಲಿ ಹೆಜ್ಜೆ ಹಾಕಿದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಎಸ್.ನಟರಾಜ್ ಮಾತನಾಡಿ, ಹೃದಯವು ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಸತತವಾಗಿ ಬಡೆದುಕೊಳ್ಳುತ್ತದೆ, ಸತತವಾಗಿ ಕಾರ್ಯನಿರ್ವಹಿಸುವ ಈ ಅಂಗಕ್ಕೆ ನಾವು ಕಾಳಜಿ ವಹಿಸುವುದು ಅತ್ಯವಶ್ಯಕ. ಇಂದಿನ ದಿನಮಾನಗಳಲ್ಲಿ ಸಣ್ಣ ವಯಸ್ಸಿನ ಯುವಕರೂ ಹೃದಯಘಾತಕ್ಕೆ ಬಲಿಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದರು.ಹೃದಯ ಎಷ್ಟು ಸರಿಯಾಗಿ ಕೆಲಸ ಮಾಡುತ್ತದೆಯೋ ಅಷ್ಟು ಜೀವನ ಆರೋಗ್ಯಕರವಾಗಿರುತ್ತದೆ. ಹೃದಯದ ಸಮಸ್ಯೆಗಳಿಗೆ ಒತ್ತಡಮಯ ಜೀವನವು ಒಂದು ಕಾರಣವಾಗಿದ್ದು, ಒತ್ತಡದಿಂದ ಹೊರಬನ್ನಿ, ಆರೋಗ್ಯಕರ ಜೀವನ ರೂಡಿಸಿಕೊಳ್ಳಿ, ನಿತ್ಯವೂ ವ್ಯಾಯಾಮ ಮಾಡಿ ಜೀವನಶೈಲಿ ಬದಲಾವಣೆ ಮಾಡಿಕೊಳ್ಳಿ ಇದೆಲ್ಲವೂ ಮಾಡುವುದರಿಂದ ಹೃದಯವು ಆರೋಗ್ಯವಾಗಿರುವಂತೆ ನೋಡಿಕೊಳ್ಳಲು ಸಾಧ್ಯ ಎಂದು ಹೇಳಿದರು.ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹೃದಯ ಶಸ್ತ್ರ ಚಿಕಿತ್ಸ ತಜ್ಞ ಡಾ.ಆರ್.ಬಾಲಸುಬ್ರಮಣಿ ಮಾತನಾಡಿ, ಹತ್ತು ವರ್ಷಗಳ ಹಿಂದೆ ಅರವತ್ತು ವಯಸ್ಸಿನ ಹಿರಿಯರು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದರು, ಕೋವಿಡ್ ನಂತರ 30 ವರ್ಷ ವಯಸ್ಸಿನವರಲ್ಲಿಯೂ ಸಹ ಬೈಪಾಸ್ ಚಿಕಿತ್ಸೆಗೆ ಆಗುತ್ತಿರುವುದನ್ನು ನೋಡುತ್ತಿದ್ದೇವೆ. ಕುಟುಂಬ ಹಾಗೂ ಸಮಾಜಕ್ಕೆ ಉಪಯೋಗಕಾರಿ ಯಾಗುವ ಸಮಯದಲ್ಲಿ ಯುವಕರು ಪಾರ್ಶ್ವ ವಾಯು, ಹೃದಯ ಸಂಬಂಧಿ ಸಮಸ್ಯೆಗಳಿಗೆ ಒಳಗಾಗುತ್ತಿರುವುದು ತುಂಬಾ ಕಳವಳಕಾರಿಯಾಗಿದೆ ಎಂದರು.

ಹೊಗೆ ಸೊಪ್ಪು ಸೇವನೆ, ಮದ್ಯಪಾನ, ಮಧುಮೇಹ, ಕೆಟ್ಟ ಕೊಲೆಸ್ಟ್ರಾಲ್ ಗಳು ಹೃದಯ ಸಂಬಂಧಿ ಕಾಯಿಲೆ ಉಂಟು ಮಾಡುತ್ತವೆ, ಇದಲ್ಲದೆ ಇಂದಿನ ಒತ್ತಡದ ಜೀವನ ಶೈಲಿಯೂ ಸಹ ಹೃದಯ ಸಂಬಂಧಿ ಕಾಯಿಲೆಗಳಿಗೆ ಪ್ರಮುಖ ಕಾರಣ ಆದ್ದರಿಂದ ಧನಾತ್ಮಕವಾಗಿರುವ ಒತ್ತಡ ನಿರ್ವಹಣಾ ತಂತ್ರಗಳನ್ನು ಜನರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ದಿನವೂ ಕನಿಷ್ಠ 45 ನಿಮಿಷ ವ್ಯಾಯಾಮ ನಡಿಗೆ ಅಥವಾ ಜಿಮ್‌ನಲ್ಲಿ ಕಸರತ್ತು ಮಾಡುವುದು, ಒಳ್ಳೆಯ ಪುಸ್ತಕಗಳನ್ನು ಓದುವುದು, ಪೌಷ್ಟಿಕ ಆಹಾರ ಸೇವನೆ, ಒಳ್ಳೆಯ 6 ರಿಂದ 8 ತಾಸು ನಿದ್ದೆ, ಈ ರೀತಿಯ ಒಳ್ಳೆಯ ಆರೋಗ್ಯಕರ ಒತ್ತಡ ನಿರ್ವಹಣಾ ತಂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ಒತ್ತಡದಿಂದ ಹೊರಬರುವುದಲ್ಲದೆ ಹೃದಯ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದರು.

ಹಿರಿಯ ಹೃದ್ರೋಗ ತಜ್ಞ ಡಾ.ಎನ್‌.ಎಸ್.ಶ್ರೀವತ್ಸ ಮಾತನಾಡಿ, ಹೃದಯ ಸಂಬಂಧಿ ಲಕ್ಷಣಗಳನ್ನು ನಾವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಹೃದಯ ಕಾಯಿಲೆ ಜಗತ್ತಿನಾದ್ಯಂತ ಉಂಟಾಗುತ್ತಿರುವ ಸಾವಿನ ಕಾರಣದಲ್ಲಿ ಪ್ರಥಮ ಸ್ಥಾನದಲ್ಲಿದೆ. ಮೂರರಲ್ಲಿ ಒಂದು ಸಾವು ಹೃದಯ ಸಂಬಂಧಿ ಕಾಯಿಲೆಯಿಂದ ಉಂಟಾಗುತ್ತಿದೆ. ನಾಲ್ಕನೇ ಒಂದು ಭಾಗ ಹೃದಯಾಘಾತ 40 ವರ್ಷ ಒಳಗಿನವರಿಗೆ ಆಗುತ್ತಿದೆ ಎನ್ನಲಾಗುತ್ತದೆ. ಅರ್ಧದಷ್ಟು ಹೃದಯಾಘಾತ 50 ವರ್ಷ ವಯಸ್ಸಿನವರಿಗೆ ಆಗುತ್ತೆ ಎನ್ನಲಾಗುತ್ತದೆ ಇದು ತುಂಬಾ ಕಳವಳಕಾರಿ ಸಂಗತಿ ಎಂದರು.

ತಾಲೂಕ ಆರೋಗ್ಯ ಅಧಿಕಾರಿ ಡಾ.ಚಂದ್ರಶೇಖರ್‌ ಮಾತನಾಡಿದರು. ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ವರ್ಗೀಸ್‌ ಪಿ ಜಾನ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶ್ರೀ ಶೈಲೇಶ್‌ ಎಸ್‌. ಎನ್. ಶ್ರೀ ರಾಜಪ್ಪ ಅಸಿಸ್ಟಂಟ್‌ ಕಮಾಡೆಂಟ್‌ ಶಿವಮೊಗ್ಗ, ಡಾ.ಅಶ್ವಲ್‌ ಎ ಜೆ, ಡಾ. ವಿಕ್ರಂ ಎಂಜೆ, ಡಾ. ಅಜಿತ್‌ ಶೆಟ್ಟಿ, ವೈದ್ಯಕೀಯ ಅಧೀಕ್ಷಕರಾದ ಡಾ.ಚಕ್ರವರ್ತಿ ಸಂಡೂರ್‌, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಇದ್ದರು.

ವಾಕಾಥಾನ್‌ನಲ್ಲಿ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ