- ಎಆರ್‌ಜಿ ಕಲಾ- ವಾಣಿಜ್ಯ ಕಾಲೇಜಿನಲ್ಲಿ ಯುವ ಸೌರಭ-2026 ಕಾರ್ಯಕ್ರಮ ಉದ್ಘಾಟನೆ ।
ಕನ್ನಡಪ್ರಭ ವಾರ್ತೆ ದಾವಣಗೆರೆ ಭಾರತ, ಕರ್ನಾಟಕದ ಕಲೆಗಳಾದ ಭರತನಾಟ್ಯ, ಕಂಸಾಳೆ, ಡೊಳ್ಳು ಕುಣಿತದಂತಹ ನಮ್ಮ ನಾಡಿನ ಕಲೆಗಳನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಸಮರ್ಥ ಶಾಮನೂರು ಹೇಳಿದರು.
ನಗರದ ಎಆರ್‌ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ ಯುವ ಸೌರಭ-2026 (ಯುವ ಕಲಾವಿದರ ಸಾಂಸ್ಕೃತಿಕ ಸೌರಭ) ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ದೇಶ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಅದು ಬೆಳೆಯಬೇಕು. ಅದು ಬೆಳೆಯಲು ನಮ್ಮ ಕಲೆಗಳು ಉಳಿಯಬೇಕು. ದೇಶದ ಕಲೆ, ಸಂಸ್ಕೃತಿಗಳು ಅಳಿದರೆ ನಾಡಿನ ಇತಿಹಾಸ, ಹೆಮ್ಮೆ ಕಳೆದಂತೆ. ಉದಾಹರಣೆಗೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿನ ಚಿತ್ತಾರ ಕಲೆ ಬಹಳ ಹೆಸರುವಾಸಿ. ಅದೇ ರೀತಿಯಲ್ಲಿ ಸಾಕಷ್ಟು ವಿವಿಧ ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಕಲೆಗಳು ಇವೆ. ನಾವು ಸಮಯದ ಅಭಾವದಿಂದ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಭಾರತ, ಕರ್ನಾಟಕದ ಇತಿಹಾಸ, ಸಂಸ್ಕಾರ ಬೆಳೆಸುವ ಕಾರ್ಯವನ್ನು ನಮ್ಮ ರಾಜ್ಯ ಸರ್ಕಾರ ಇಂತಹ ಯುವ ಸೌರಭ ಕಾರ್ಯಕ್ರಮಗಳ ಮೂಲಕ ಬೆಳಕಿಗೆ ತರುವಲ್ಲಿ ಮುಂದಾಗಿದೆ. ನಮ್ಮ ನಾಡಿನ ಕಲೆ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಮಾತನಾಡಿ, ಕರ್ನಾಟಕ ಸರ್ಕಾರ ಹಲವಾರು ಕಾರ್ಯಕ್ರಮಗಳ ಜೊತೆಗೆ ಶಾಲಾ ಕಾಲೇಜು ಮಕ್ಕಳಿಗೆ ತಮ್ಮ ಪ್ರತಿಭೆ ಅನಾವರಣಕ್ಕೆ ಯುವ ಸೌರಭದ ಮೂಲಕ ಅವಕಾಶ ಕಲ್ಪಿಸಿದೆ. ಪ್ರತಿಭೆ ಹೊರತರಲು ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ರೂಪಿಸಿದೆ. ಸರ್ಕಾರದ ಜೊತೆಗೆ ಮಕ್ಕಳಿಗೆ ಎಸ್.ಎಸ್. ಜನಕಲ್ಯಾಣ ಟ್ರಸ್ಟ್ ಸೇರಿದಂತೆ ಅವರ ಸಮಾಜ, ಸಂಘ ಸಂಸ್ಥೆಗಳು ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿವೆ. ಅವುಗಳ ಸದುಪಯೋಗ ಅಗತ್ಯ ಎಂದರು.
- - -
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಇಂದಿನ ಬಹಳ ಯುವಕರ ಮುಖದಲ್ಲಿ ಚೈತನ್ಯ ಇಲ್ಲ. ಕಾರಣ ನಮ್ಮ ಬದುಕಿನ ವಿಧಾನ, ಆಹಾರ ಕ್ರಮ, ನಮ್ಮ ಚಿಂತನಾ ವಿಧಾನ. ಇವೆಲ್ಲ ನಮ್ಮನ್ನು ಹಿನ್ನೆಡೆಗೆ ಕರೆದೊಯ್ಯುತ್ತಿವೆ. ಯುವ ಸೌರಭ ಎಂದರೆ ನಮ್ಮ ಸಾಂಸ್ಕೃತಿಕ ಸತ್ವ ಎನ್ನುವುದನ್ನು ತಿಳಿದುಕೊಳ್ಳುವುದು. ನಮಗೆಲ್ಲಾ ಅಜ್ಜಿ ಕಥೆ ಹೇಳಿ ಬೆಳೆಸಿದ್ದರು. ಈಗ ಕಥೆಗಳೇ ಇಲ್ಲ. ನಾವು ಗೆಳೆಯರ ಜೊತೆಗೆ ಆಟ ಆಡುತ್ತಿದ್ದೆವು. ಈಗ ಬರೀ ಫೋನ್‌ನಲ್ಲಿ ಆಟವಾಡುತ್ತಿದ್ದೇವೆ. ಸಿನಿಮಾ ನಟರು ನಮ್ಮ ನಾಯಕರಲ್ಲ. ನಿಜವಾದ ನಾಯಕರು ಮಹಾತ್ಮಾ ಗಾಂಧಿ, ನೆಹರು, ಅಂಬೇಡ್ಕರ್, ಲೋಹಿಯಾ. ಇಂತಹ ವ್ಯಕ್ತಿಗಳ ಚಿಂತನೆಗಳನ್ನು ಓದಬೇಕಾಗಿದೆ. ಓದಿದರೆ ನಾಯಕತ್ವ ಗೊತ್ತಾಗುತ್ತದೆ ಎಂದರು.
(ಟಾಪ್ ಕೋಟ್) ಯುವಜನರಿಗಾಗಿ ಸರ್ಕಾರ ಯುವ ಸೌರಭ ಕಾರ್ಯಕ್ರಮ ಆಯೋಜನೆ ಮಾಡಿದೆ. ಕೋ ಎಜುಕೇಷನ್ ಕಾಲೇಜಿನಲ್ಲಿ ಹುಡುಗರ ಸಂಖ್ಯೆ ಕಡಿಮೆಯಾಗಿದೆ. ಏಕೆ ಹುಡುಗರು ಕಡಿಮೆ ಇದ್ದಾರೆ ಎಂದರೆ ಅವರು ಶಿಕ್ಷಣ ವ್ಯವಸ್ಥೆಯಿಂದ ವಂಚಿತರಾಗಿ ಸೋಷಿಯಲ್ ಮಿಡಿಯಾ ಚೆಲ್ಲುವ ಕಸವನ್ನು ಅದೇ ನಿಜವಾದ ಸತ್ಯ ಎಂದು ಕಳೆದುಹೋಗುತ್ತಿದ್ದಾರೆ. ನಮ್ಮ ಕಾಲದಲ್ಲಿ ಬಾಲ್ಯಾವಸ್ಥೆ, ಪ್ರೌಢಾವಸ್ಥೆ, ಯೌವನಾವಸ್ಥೆ, ವೃದ್ಧಾಪ್ಯ ಇದ್ದವು. ಇವುಗಳಲ್ಲಿ ಈಗ ಯೌವನಾವಸ್ಥೆ ಕಾಣೆಯಾಗಿದೆ.
- - -