ವಿದ್ಯುತ್ ಅಪಘಾತ ತಡೆ, ಅವುಗಳಿಂದ ರಕ್ಷಣೆ ಕುರಿತ ಪ್ರಬಂಧ, ಭಾಷಣ ಸ್ಪರ್ಧೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸೂರ್ಯಕಲಾ ಚಾಲನೆ
ವಿದ್ಯುತ್ ಉಳಿತಾಯ ಮತ್ತು ವಿದ್ಯುತ್ ಅಪಘಾತಗಳಿಂದ ಜನರ ಪ್ರಾಣ ರಕ್ಷಿಸುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿ ಎಂದು ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸೂರ್ಯಕಲಾ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ಬೆಸ್ಕಾಂ ತುಮಕೂರು ವಿಭಾಗ, ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿದ್ಯುತ್ ಅಪಘಾತ ತಡೆ ಮತ್ತು ಅವುಗಳಿಂದ ರಕ್ಷಣೆ ಕುರಿತ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ, ಬಹುಮಾನ ಪಡೆಯುವುದಕ್ಕಿಂತಲೂ, ವಿಷಯವನ್ನು ಅರಿತು, ಅದನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕೆಂದರು. ವಿದ್ಯಾರ್ಥಿಗಳು ಭಾಷಣ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವೇದಿಕೆಯ ಭಯ(ಸ್ಟೇಜ್ ಫೀಯರ್) ದೂರವಾಗುತ್ತದೆ. ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಲು ಸ್ಥೈರ್ಯ ಬರುತ್ತದೆ. ಭಾಷಣಗಳಿಂದ ಸಮೋಹನ ಕಲೆ ಕರಗತವಾಗಿ, ಒಳ್ಳೆಯ ನಾಯಕರಾಗಿ ಬೆಳೆಯಲು ಸಹಕಾರಿಯಾಗಲಿದೆ. ಹಾಗಾಗಿ ಮಕ್ಕಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿ, ಒಳ್ಳೆಯ ವಿಷಯಗಳನ್ನು ಬರೆದು, ಭಾಷಣ ಮಾಡಿ, ಹೆಸರು ಗಳಿಸುವಂತೆ ಸಲಹೆ ನೀಡಿದರು.
ಮಳೆ, ಗಾಳಿಗೆ ವಿದ್ಯುತ್ ಲೈನ್ ಬಿದ್ದು, ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚು, ಅಲ್ಲದೆ ವದ್ದೆ ಕೈಯಿಂದ ಸುಚ್ ಮುಟ್ಟುವುದು, ಸುಚ್ ಆನ್ ಮಾಡಿ, ಮೊಬೈಲ್ ಮತ್ತು ಐರನ್ ಬಾಕ್ಸ್ ಚಾರ್ಜ್ ಹಾಕುವುದು ಮಾಡಬಾರದು. ಬೀದಿ ದೀಪಗಳನ್ನು ಆನ್ ಮಾಡುವಾಗ ಎಚ್ಚರ ವಹಿಸಬೇಕು. ಇದನ್ನು ನೀವು ತಿಳಿದು ಕೊಳ್ಳುವುದಲ್ಲದೆ, ನಿಮ್ಮ ಪೋಷಕರಿಗೂ ತಿಳಿಸಬೇಕೆಂದು ಸಲಹೆ ನೀಡಿದರು.
ತುಮಕೂರು ತಾಲೂಕಿನ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು, ವಿದ್ಯುತ್ ಸುರಕ್ಷತೆ ಮತ್ತು ಅನುಸರಿಸಬೇಕಾದ ಕ್ರಮಗಳ ಕುರಿತು ಭಾಷಣ ಮತ್ತು ಪ್ರಬಂಧ ಮಂಡಿಸಿದರು. ವೇದಿಕೆಯಲ್ಲಿ ಬೆಸ್ಕಾಂ ಎಇಇಗಳಾದ ಜಲ್ಲೇಶ್ ಬಿ.ಎನ್., ಗುರುರಾಜ್ ಟಿ., ಹರೀಶ್, ನಾಗರಾಜು, ಜಗದೀಶ್ ಜಿ., ನಟರಾಜು, ಜಿ.ಎಚ್.ಆರ್. ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.