ಕೆ.ಎಂ. ಮಂಜುನಾಥ್
ಸುಧಾರಿತ ಬಾಂಬ್ (ಐಇಡಿ) ಬಳಸಿ ದೇಶದ ವಿವಿಧೆಡೆ ಸ್ಫೋಟಕ ಸಂಚು ರೂಪಿಸುತ್ತಿದ್ದ ತಂಡವನ್ನು ಸೋಮವಾರ ಪತ್ತೆ ಹಚ್ಚಿದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಬಳ್ಳಾರಿ, ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿ, ಒಟ್ಟು ಎಂಟು ಜನರನ್ನು ಬಂಧಿಸಿದ್ದಾರೆ. ಈ ಪೈಕಿ ಬಳ್ಳಾರಿಯಲ್ಲಿ ಇಬ್ಬರ ಬಂಧನವಾಗಿತ್ತು. ಬೆಂಗಳೂರು ಮತ್ತಿತರ ಕಡೆಗಳಲ್ಲಿ ಬಂಧನಕ್ಕೊಳಗಾದವರ ಪೈಕಿ ಇನ್ನಿಬ್ಬರು ಸಹ ಬಳ್ಳಾರಿ ನಿವಾಸಿಗಳು ಎಂಬುದು ಗೊತ್ತಾಗಿದೆ.
ಬಂಧಿತರು ವಿದ್ಯಾರ್ಥಿಗಳು:ಬಳ್ಳಾರಿಯಲ್ಲಿ ಬಂಧಿತರಾದ ಸೈಯದ್ ಸಮೀರ್ ನಗರದ ಕಾಲೇಜೊಂದರಲ್ಲಿ ಬಿಸಿಎ ಮೂರನೇ ಸೆಮಿಸ್ಟರ್ ವಿದ್ಯಾರ್ಥಿ, ಜಾಗೃತಿನಗರ ನಿವಾಸಿ. ಇತ್ತೀಚೆಗೆ ತಾನು ಓದುತ್ತಿದ್ದ ಕಾಲೇಜಿನಲ್ಲಿ ಉಪನ್ಯಾಸಕರ ವಿರುದ್ಧ ತಿರುಗಿ ಬಿದ್ದಿದ್ದನಲ್ಲದೆ, ಉಪನ್ಯಾಸಕ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಪಾಠ ಮಾಡಿದ್ದಾರೆ ಎಂದು ಆರೋಪಿಸಿದ್ದ. ಬಳಿಕ ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮೌಖಿಕ ದೂರು ಸಹ ನೀಡಿದ್ದ. ಸೈಯದ್ ಸಮೀರ್‌ನ ತಂದೆ ಬೀದಿಬದಿಯ ವ್ಯಾಪಾರಿಯಾಗಿದ್ದು, ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಬಂಧಿತನಾಗಿರುವ ಸೈಯದ್ ಸಮೀವುಲ್ಲಾ ಬಳ್ಳಾರಿ ನಿವಾಸಿ. ಬೆಂಗಳೂರಿನ ಕಾಲೇಜೊಂದರಲ್ಲಿ ಕಾನೂನು ವಿದ್ಯಾರ್ಥಿ. ಬೇರೆಡೆ ಬಂಧಿತನಾಗಿರುವ ಮತ್ತೋರ್ವ ಸಹ ಬಳ್ಳಾರಿಯ ಕೌಲ್ ಬಜಾರ್ ಪ್ರದೇಶ ನಿವಾಸಿ ಎಂದು ತಿಳಿದುಬಂದಿದೆ. ಈತನ ಕುಟುಂಬದ ಬಗ್ಗೆ ಹೆಚ್ಚು ಮಾಹಿತಿಗಳು ಲಭ್ಯವಾಗಿಲ್ಲ. ಬಂಧಿತರಲ್ಲದೆ ಇನ್ನು ನಾಲ್ವರಿಗೆ ಎನ್‌ಐಎ ಅಧಿಕಾರಿಗಳು ನೊಟೀಸ್ ಜಾರಿ ಮಾಡಿದ್ದು, ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಸಂಶಯಾಸ್ಪದರ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ.
ವರ್ಷದಲ್ಲಿ 3ನೇ ಬಾರಿ ದಾಳಿ:ಈ ಹಿಂದೆ ಅಕ್ರಮ ಗಣಿಗಾರಿಕೆ ಮೂಲಕ ಕುಖ್ಯಾತಿಗೆ ಒಳಗಾಗಿದ್ದ ಬಳ್ಳಾರಿಯೀಗ ವಿಧ್ವಂಸಕ ಕೃತ್ಯ ಎಸಗುವವರ ಕೇಂದ್ರ ಸ್ಥಾನವಾಗುತ್ತಿರುವುದು ಜನರಲ್ಲಿ ಅಭದ್ರತೆಯ ಭೀತಿ ಕಾಡಿದೆ.