ನರೇಗಾ ಕೂಲಿ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆ

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ರಾಮನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಕ್ಕಳ ಆರೈಕೆಗೆ ಕೂಸಿನ ಮನೆ ನಿರ್ಮಾಣ ಮಾಡಿ 3 ವರ್ಷದ ಒಳಗಿನ ಮಕ್ಕಳಿಗೂ ಆರೈಕೆ ಸಿಗಲಿದೆ. ಮಕ್ಕಳ ಪೋಷಣೆ ಕೇರ್ ಟೇಕರ್ಸ್ ಗಳ ದೊಡ್ಡ ಜವಾಬ್ದಾರಿ, ಮಕ್ಕಳನ್ನು ಮಾತೃತ್ವ ಭಾವದಿಂದ ನೋಡಿಕೊಳ್ಳಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್ ಹೇಳಿದರು.

ನಗರದ ಸಾಮರ್ಥ್ಯಸೌಧದಲ್ಲಿ ನಡೆದ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತಿಗಳ ಶಿಶುಪಾಲನ ಕೇಂದ್ರದ ಕೇರ್ ಟೇಕರ್ಸ್ ಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕೂಸಿನ ಮನೆ ನಡೆಯುತ್ತಿದ್ದು, ಇದನ್ನು ಅರ್ಥಪೂರ್ಣವಾಗಿ ಮುನ್ನಡೆಸಿಕೊಂಡು ಹೋಗಬೇಕು. ಇದರಲ್ಲಿ ಆರೈಕೆದಾರರ ಪಾತ್ರ ಬಹಳ ದೊಡ್ಡದು, ಅವರೇ ಇದಕ್ಕೆ ಕಾರ್ಯಕರ್ತರು ಇದ್ದಂತೆ. ನರೇಗಾ ಕೂಲಿ ಕಾರ್ಮಿಕರ ಎಲ್ಲಾ ಮಕ್ಕಳನ್ನು ಕೂಸಿನ ಮನೆಗೆ ಬರುವಂತೆ ನೋಡಿಕೊಳ್ಳುವುದು. ಮಕ್ಕಳು ಬಂದಾಗ ಅವರನ್ನು ಉತ್ತಮ ರೀತಿಯಲ್ಲಿ ಕಂಡು ನಲಿ-ಕಲಿ ರೀತಿಯಲ್ಲಿ ಚಟುವಟಿಕೆ ಹಮ್ಮಿಕೊಂಡು ನಿರಂತರ ಕೂಸಿನಮನೆ ನಡೆಸಬೇಕು ಎಂದರು.

ಒಂದರಿಂದ ಮೂರು ವರ್ಷದ ಮಕ್ಕಳು ಇಲ್ಲಿ ಆರೈಕೆ ಪಡೆಯಬಹುದು. ಮಕ್ಕಳ ಆರೈಕೆಗಾಗಿಯೇ ಈ ಕೂಸಿನ ಮನೆ ಮಾಡಿದ್ದು, ಯಾವುದೇ ತಾರತಮ್ಯ ಮಾಡದೇ ಜವಾಬ್ದಾರಿಯಿಂದ ನಿಭಾಯಿಸಬೇಕು. ಕೂಸಿನ ಮನೆಯ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಆರೈಕೆದಾರರು ಹಾಗೂ ಪಾಲಕರ ಪಾತ್ರವೂ ದೊಡ್ಡದು, ಈ ನಿಟ್ಟಿನಲ್ಲಿ ಐದು ದಿನಗಳವರೆಗೆ ಆರೈಕದಾರರಿಗೆ ತರಬೇತಿ ನೀಡುತ್ತಿದ್ದು. ಎಲ್ಲರೂ ಉತ್ತಮ ರೀತಿಯಲ್ಲಿ ತರಬೇತಿ ಪಡೆಯುವಂತೆ ತಿಳಿಸಿದರು.

ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ (ಗ್ರಾ. ಉ) ರೂಪೇಶ್ ಕುಮಾರ್ ಮಾತನಾಡಿ, ಕೂಸಿನ ಮನೆ ನಿರ್ಮಿಸಲು ಆಯ್ಕೆಯಾಗಿರುವ ಗ್ರಾಮದಲ್ಲಿನ ಅರ್ಹ ನರೇಗಾದ ಎಂಟು ಜನ ಕೂಲಿ ಕಾರ್ಮಿಕರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದವರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾಸ್ಟರ್ ಟ್ರೈನರ್ ಸಿಬ್ಬಂದಿ ಹಾಗೂ ಎಲ್ಲಾ ಕೇರ್ ಟೀಚರ್ಸ್ ಗಳು ಭಾಗವಹಿಸಿದ್ದರು.

Share this article