ಅಪೂರ್ಣಗೊಂಡ ಕಾಮಗಾರಿ ಪೂರ್ಣಗೊಳಿಸಿ

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ಮಂಗಳವಾರ ಇಲ್ಲಿನ ಪ್ರವಾಸ ಮಂದಿರದಲ್ಲಿ ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ನಡೆಯುತ್ತಿರುವ ಸಿಸಿ ರಸ್ತೆಗಳ ಕಾಮಗಾರಿ ಹಾಗೂ ಒಳಚರಂಡಿ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಎಲ್ ಆ್ಯಂಡ್ ಟಿ ಕಂಪನಿಯವರು ಕಾಮಗಾರಿ ಪೂರ್ಣಗೊಳಿಸದೆ ಕಾಲಹರಣ ಮಾಡುತ್ತಿದ್ದಾರೆ. ಇಲ್ಲಿನ ಅಶೋಕನಗರ ಸೇತುವೆಯಿಂದ ನೃಪತುಂಗ ಬೆಟ್ಟದ ಹತ್ತಿರ ಹಾದು ಹೋಗುವ ರಸ್ತೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

- ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನಗರದಲ್ಲಿ ಕಾಮಗಾರಿಯ ನೆಪದಲ್ಲಿ ಎಲ್ಲೆಂದರಲ್ಲಿ ರಸ್ತೆಗಳ ಅಕ್ಕಪಕ್ಕದಲ್ಲಿ ಗುಂಡಿಗಳನ್ನು ಅಗೆಯಲಾಗಿದೆ. ಇದರಿಂದ ಹೊರಸೂಸುವ ಧೂಳನಿಂದಾಗಿ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ಮಹೇಶ ಟೆಂಗಿನಕಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳವಾರ ಇಲ್ಲಿನ ಪ್ರವಾಸ ಮಂದಿರದಲ್ಲಿ ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ನಡೆಯುತ್ತಿರುವ ಸಿಸಿ ರಸ್ತೆಗಳ ಕಾಮಗಾರಿ ಹಾಗೂ ಒಳಚರಂಡಿ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಎಲ್ ಆ್ಯಂಡ್ ಟಿ ಕಂಪನಿಯವರು ಕಾಮಗಾರಿ ಪೂರ್ಣಗೊಳಿಸದೆ ಕಾಲಹರಣ ಮಾಡುತ್ತಿದ್ದಾರೆ. ಇಲ್ಲಿನ ಅಶೋಕನಗರ ಸೇತುವೆಯಿಂದ ನೃಪತುಂಗ ಬೆಟ್ಟದ ಹತ್ತಿರ ಹಾದು ಹೋಗುವ ರಸ್ತೆ ಇನ್ನೂ ಪೂರ್ಣಗೊಂಡಿಲ್ಲ. ಪ್ರತಿನಿತ್ಯ ಧೂಳಿನಲ್ಲಿ ಬದುಕುವುದೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಏನು ಉತ್ತರ ನೀಡಲಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಿಮ್ಮಲ್ಲಿಯೇ ಸಮನ್ವಯ ಕೊರತೆ ಕಾಣಿಸುತ್ತಿದೆ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಆದಷ್ಟು ಬೇಗನೇ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಸಾಯಿನಗರ ರಸ್ತೆಯಿಂದ ಚರ್ಚ್ ವರೆಗಿನ ರಸ್ತೆಯ ಸಮಸ್ಯೆಯನ್ನು ಬೇಗ ಇತ್ಯರ್ಥಗೊಳಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ಲೈಓವರ್ ಕಾಮಗಾರಿ ದೊಡ್ಡ ಸಮಸ್ಯೆಯಾಗಿದ್ದು, ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕಾಮಗಾರಿ ಬೇಗ ಪೂರ್ಣಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಶಾಸಕರು ಸೂಚಿಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ನಗರದ ಹಲವು ಕಡೆಗಳಲ್ಲಿ ಕೈಗೊಳ್ಳಲಾಗಿದ್ದ ಕಾಮಗಾರಿಗಳು ಈಗಾಗಲೇ ಪೂರ್ಣಗೊಳ್ಳಬೇಕಿತ್ತು. ಆದರೆ, ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಬೊಟ್ಟು ಮಾಡುತ್ತಿರುವುದರಿಂದಾಗಿ ಕಾಮಗಾರಿ ಮತ್ತಷ್ಟು ವಿಳಂಬವಾಗುತ್ತಿವೆ. ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆ ಆಯುಕ್ತ ಡಾ. ಈಶ್ವರಗೌಡ ಉಳ್ಳಾಗಡ್ಡಿ, ಪಾಲಿಕೆ ಸದಸ್ಯ ವೀರಣ್ಣ ಸವಡಿ, ರಾಜಣ್ಣ ಕೊರವಿ, ಸಂತೋಷ ಚವ್ಹಾಣ, ಸೀಮಾ ಮೊಗಲಿಶೆಟ್ಟರ, ಮೀನಾಕ್ಷಿ ವಂಟಮೂರಿ, ಸಿದ್ದು ಮೊಗಲಿಶೆಟ್ಟರ, ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ, ಎಲ್.ಎನ್.ಟಿ. ಅಧಿಕಾರಿಗಳು ಪಾಲ್ಗೊಂಡಿದ್ದರು.

Share this article