ಅವಕಾಶ ವಂಚಿತ ಸಮುದಾಯ ಮೇಲೆತ್ತುವುದು ಎಲ್ಲರ ಹೊಣೆ

KannadaprabhaNewsNetwork | Published : Dec 17, 2023 1:45 AM

ಸಾರಾಂಶ

ಅವಕಾಶ ವಂಚಿತ ಸಮುದಾಯಗಳನ್ನು ಮೇಲೆತ್ತುವ ಹೊಣೆಗಾರಿಕೆ ಎಲ್ಲರ ಮೇಲೆ ಸಮಾನವಾಗಿ ಇದೆ ಎಂದು ಪ್ರಾಚಾರ‍್ಯ ಡಾ. ಎಸ್.ಜಿ. ವೈದ್ಯ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಅವಕಾಶ ವಂಚಿತ ಸಮುದಾಯಗಳನ್ನು ಮೇಲೆತ್ತುವ ಹೊಣೆಗಾರಿಕೆ ಎಲ್ಲರ ಮೇಲೆ ಸಮಾನವಾಗಿ ಇದೆ ಎಂದು ಪ್ರಾಚಾರ‍್ಯ ಡಾ. ಎಸ್.ಜಿ. ವೈದ್ಯ ಕಳವಳ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ, ನ್ಯಾಯವಾದಿಗಳ ಸಂಘ ಹಾಗೂ ವರ್ತಕರ ಕಲಾ ವಾಣಿಜ್ಯ ಮಹಾ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆ 1989ರನ್ವಯ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅವಕಾಶ ವಂಚಿತ ಸಮುದಾಯಗಳನ್ನು ಮೇಲೆತ್ತುವ ಕೆಲಸ ಕೇವಲ ಸರ್ಕಾರಗಳಿಂದಲೇ ನಡೆಯಬೇಕೆಂದಿಲ್ಲ ಅಥವಾ ನ್ಯಾಯಾಲಯಗಳೇ ರಕ್ಷಣೆ ನೀಡಬೇಕೆಂದಿಲ್ಲ, ಮಾನವೀಯ ಮೌಲ್ಯಗಳನ್ನು ಅರ್ಥೈಸಿಕೊಂಡಿರುವ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸಮಾನ ಹೊಣೆಗಾರಿಕೆ ತೋರಬೇಕಾಗಿದೆ. ಅದರಲ್ಲೂ ಅಭಿವೃದ್ಧಿಶೀಲ ರಾಷ್ಟ್ರ ಭಾರತಕ್ಕೆ ಇದೊಂದು ಸವಾಲಾಗಿ ಪರಿಣಮಿಸಿದೆ ಎಂದರು.

ವಕೀಲೆ ಭಾರತಿ ಕುಲಕರ್ಣಿ ಮಾತನಾಡಿ, ಜಾತಿ ಮತ್ತು ವರ್ಗ ಸಂಘರ್ಷಗಳು ಅತ್ಯಂತ ಅಪಾಯಕಾರಿ. ಯುದ್ಧ ಪರಂಪರೆಯಿಂದ ಸಮಾಜದ ಸುಧಾರಣೆ ಅಥವಾ ಶಾಂತಿಸ್ಥಾಪನೆ ಅಸಾಧ್ಯವೆಂಬುದನ್ನು ಮನಗಂಡ ಬಹುತೇಕ ರಾಜಮಹಾರಾಜರು ಉತ್ತಮ ಸುಸಂಸ್ಕೃತ ಸಮಾಜ ನಿರ್ಮಾಣಕ್ಕಾಗಿ ತಮ್ಮ ವೈಭೋಗದ ಬದುಕನ್ನೇ ತ್ಯಜಿಸಿ ದಾರ್ಶನಿಕರಾದ ಉದಾಹರಣೆಗಳಿವೆ ಎಂದರು.

ದೇಶದ ಸಂವಿಧಾನವೇ ರಚನೆ:

ಉಪನ್ಯಾಸ ನೀಡಿದ ಡಾ. ಪ್ರಭುಲಿಂಗ ದೊಡ್ಮನಿ ಮಾತನಾಡಿ, ಸಮಾಜದ ವಿವಿಧ ಸ್ತರಗಳಲ್ಲಿನ ಅಂತರವನ್ನು ತೊಡೆದು ಹಾಕುವುದು ಸೇರಿದಂತೆ ಕೆಳವರ್ಗದ ಜನರ ಮೇಲಿನ ದೌರ್ಜನ್ಯ ಪರಸ್ಪರ ಸಹಬಾಳ್ವೆಯೊಂದಿಗೆ ಪ್ರತಿಯೊಬ್ಬರೂ ಬದುಕಬೇಕೆನ್ನುವ ಬಸವ, ಬುದ್ಧ, ಕನಕದಾಸ, ಅಂಬೇಡ್ಕರ್ ಸೇರಿದಂತೆ ಬಹುತೇಕ ದಾರ್ಶನಿಕರ ವಿಚಾರಧಾರೆಗಳಾಗಿದ್ದು, ಇಂದು ಸಂವಿಧಾನ ಮತ್ತು ಕಾನೂನುಗಳಾಗಿ ಅಳವಡಿಸಲಾಗಿದೆ. ಜಾತಿ ಮತ್ತು ಧರ್ಮಗಳ ನಡುವಿನ ಸಂಘರ್ಷಗಳಿಗೆ ಅವರು ಪ್ರಯತ್ನ ಇತಿಹಾಸದ ಪುಟವನ್ನು ಸೇರುವಂತೆ ಮಾಡಿತು ಎಂದರು.

ಇದಕ್ಕೂ ಮುನ್ನ ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧೀಕ್ಷಕ ಹನುಮಂತಪ್ಪ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ‍್ಯಕ್ರಮದಲ್ಲಿ ವಕೀಲೆ ಲಕ್ಷ್ಮೀ ಗುಗ್ಗುರಿ, ಎಸ್ಸಿ, ಎಸ್ಟಿ ಕ್ಷೇಮಾಭಿವೃದ್ಧಿ ಸಂಯೋಜಕ ಡಾ. ಎಸ್.ಪಿ. ಪಾಂಗಿ, ಡಾ. ರಶ್ಮಿ, ನಿಂಗರಾಜ ಕುಡುಪಲಿ, ಪ್ರಶಾಂತ್ ಜಂಗಳೇರ ಉಪಸ್ಥಿತರಿದ್ದರು. ಐಶ್ವರ್ಯಾ ಮುಚ್ಚಟ್ಟಿ ಪ್ರಾರ್ಥಿಸಿದರು. ನಿವೇದಿತ ವಾಲಿಶೆಟ್ಟರ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಎನ್.ಎಸ್. ಪ್ರಶಾಂತ್ ವಂದಿಸಿದರು.

Share this article