ಕನ್ನಡಪ್ರಭ ವಾರ್ತೆ ಹಾಸನ
ನಗರದ ಕುವೆಂಪು ರಸ್ತೆ ಬಳಿ ಇರುವ ಲಯನ್ಸ್ ಕ್ಲಬ್ ಭವನದಲ್ಲಿ ಭಾನುವಾರ ಲಯನ್ಸ್ ಕ್ಲಬ್ ಹಾಸನ ಹಾಗೂ ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರ ಅಂತರ್ ಜಿಲ್ಲಾ ಟ್ವಿನ್ ಕ್ಲಬ್ ಸಭೆ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ವಿಜ್ಞಾನಾಧಾರಿತ ಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಮಾತ್ರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಾಧ್ಯ. ವೈದ್ಯಕೀಯ ಚಿಕಿತ್ಸೆಯ ಬದಲು ಮಂತ್ರ, ತಂತ್ರಗಳ ಹಿಂದೆ ಹೋಗುವುದು ಜೀವಕ್ಕೆ ಅಪಾಯಕಾರಿಯೆಂದು ತಿಳಿಸಿದರು. ಮಕ್ಕಳಲ್ಲಿ ಪ್ರಶ್ನಿಸುವ ಗುಣ, ತರ್ಕಬದ್ಧ ಚಿಂತನೆ ಹಾಗೂ ಸಾಕ್ಷ್ಯಾಧಾರಿತ ನಂಬಿಕೆಗಳು ಸಮಾಜದ ಪ್ರಗತಿಗೆ ದಾರಿ ಮಾಡಿಕೊಡುತ್ತವೆ. ಮೂಢನಂಬಿಕೆಗಳಿಂದ ದೂರವಿದ್ದು, ವಿಜ್ಞಾನವನ್ನು ಜೀವನದ ಭಾಗವಾಗಿಸಿಕೊಂಡಾಗ ಮಾತ್ರ ಆರೋಗ್ಯಕರ, ಸಮಾನತೆಯುಳ್ಳ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲು ‘ನಾನು ವಿಜ್ಞಾನಿ’ ಎಂಬ ಕಾರ್ಯಕ್ರಮ ನಡೆಸುತ್ತಾ ಬಂದಿದ್ದು ಯಶಸ್ವಿಯಾಗಿದೆ ಎಂದರು.
ಬಳಿಕ ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಸಾಧನೆ ಕುರಿತು ಮಾತನಾಡಿದ ಅವರು, ನಮ್ಮ ಲಯನ್ಸ್ ಕ್ಲಬ್ ಕಳೆದ ವರ್ಷ ₹೭೫ ಲಕ್ಷದಲ್ಲಿ ಕಟ್ಟಡ ನಿರ್ಮಾಣಮಾಡಿತ್ತು. ಡಯಾಲಿಸಿಸ್ ಆಸ್ಪತ್ರೆ ಹಾಗೂ ಮಾನಸಿಕ ಆಸ್ಪತ್ರೆ ಬಗ್ಗೆ ಆಪ್ತ ಸಮಾಲೋಚನೆ ನಡೆಸಲಾಗುತ್ತಿದ್ದು, ಈ ವರ್ಷ ದಾನಿಗಳಿಂದ ಹೆಚ್ಚಿನ ಸಿಎಸ್‌ಆರ್ ಫಂಡ್ ಬರುತ್ತಿದ್ದು, ಕಣ್ಣಿನ ಪರೀಕ್ಷೆ ಮತ್ತು ಚಿಕಿತ್ಸೆ ನೀಡಲು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ರಾಜ್ಯದ ೯೩ ಕ್ಲಬ್‌ನ ಸದಸ್ಯರು ಉಚಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ. ಯತ್ರೋಪಕರಣಗಳ ಖರೀದಿಗೆ ₹೧.೫ ಕೋಟಿ ಅಗತ್ಯವಾಗಿದ್ದು ಧರ್ಮಸ್ಥಳದ ವೀರೇಂದ್ರ ಹೆಗ್ಡೆಯವರ ಬಳಿ ಸಹಾಯ ಕೇಳಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಎರಡು ಕ್ಲಬ್‌ಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿ, ಸೇವಾ ಚಟುವಟಿಕೆಗಳು, ಮುಂದಿನ ಕಾರ್ಯಕ್ರಮಗಳ ಯೋಜನೆ ಹಾಗೂ ಸಮಾಜಮುಖಿ ಕಾರ್ಯಗಳ ಬಗ್ಗೆ ಚರ್ಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸನ ಲಯನ್ಸ್ ಕ್ಲಬ್‌ನ ಜಿಲ್ಲಾಧ್ಯಕ್ಷ ಎಚ್. ರಮೇಶ್ ವಹಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ನ ಗೌರವಾಧ್ಯಕ್ಷ ಕಮಲ್‌ಕುಮಾರ್, ರವಿಕುಮಾರ್, ಜಿಲ್ಲಾ ಲಯನ್ಸ್ ದೊಡ್ಡಬಳ್ಳಾಪುರ ಅಧ್ಯಕ್ಷ ನಂಜುಂಡೇಶ್ವರ, ಜಗದೀಶ್, ಹಾಸನದ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಸಿ. ಶಿವಸ್ವಾಮಿ, ಖಜಾಂಚಿ ಎಚ್.ಆರ್. ಚನ್ನೇಗೌಡ, ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಬಿ. ಮದನ್‌ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.