ಅತಿಥಿ ಉಪನ್ಯಾಸಕರ ವೇತನ ಭರಿಸುವುದು ವಿವಿಗಳಿಗೆ ಅಸಾಧ್ಯ: ಮಧು

KannadaprabhaNewsNetwork |  
Published : Jul 01, 2026, 01:15 AM IST
೩೦ಕೆಎಂಎನ್‌ಡಿ-೬ಮಧು ಜಿ.ಮಾದೇಗೌಡ | Kannada Prabha

ಸಾರಾಂಶ

ಮಂಡ್ಯ ವಿಶ್ವವಿದ್ಯಾಲಯ ಸೇರಿದಂತೆ ಕೆಲವು ವಿಶ್ವವಿದ್ಯಾಲಯಗಳಿಗೆ ೨೦೨೬-೨೭ನೇ ಶೈಕ್ಷಣಿಕ ಸಾಲಿಗೆ ಹೆಚ್ಚುವರಿ ಕಾರ್ಯಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ವಿಶ್ವವಿದ್ಯಾಲಯಗಳೇ ನೇಮಿಸಿಕೊಂಡು ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕದಿಂದಲೇ ವೇತನ ಪಾವತಿಸುವಂತೆ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಒತ್ತಾಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವವಿದ್ಯಾಲಯ ಸೇರಿದಂತೆ ಕೆಲವು ವಿಶ್ವವಿದ್ಯಾಲಯಗಳಿಗೆ ೨೦೨೬-೨೭ನೇ ಶೈಕ್ಷಣಿಕ ಸಾಲಿಗೆ ಹೆಚ್ಚುವರಿ ಕಾರ್ಯಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ವಿಶ್ವವಿದ್ಯಾಲಯಗಳೇ ನೇಮಿಸಿಕೊಂಡು ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕದಿಂದಲೇ ವೇತನ ಪಾವತಿಸುವಂತೆ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ೨೦೨೦-೨೧ನೇ ಸಾಲಿನಿಂದ ೨೦೨೫-೨೬ನೇ ಶೈಕ್ಷಣಿಕ ಸಾಲಿನವರೆಗೂ ಹೆಚ್ಚುವರಿ ಕಾರ್ಯಭಾರಕ್ಕೆ ಅನುಸಾರವಾಗಿ ಅತಿಥಿ ಉಪನ್ಯಾಸಕರನ್ನು ಕಾಲೇಜು ಶಿಕ್ಷಣ ಇಲಾಖೆಯಿಂದಲೇ ನೇಮಿಸಲಾಗುತ್ತಿದ್ದು ಮಾಸಿಕ ವೇತನ ಪಾವತಿಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ವೇತನ ರೂಪದಲ್ಲಿ ೧೦ ತಿಂಗಳಿಗೆ ಅಂದಾಜು ಮೊತ್ತ ೫.೫೦ ಕೋಟಿ ರು. ಭರಿಸಲಾಗುತ್ತಿದೆ. ವಿದ್ಯಾರ್ಥಿಗಳ ಪ್ರವೇಶ ಶುಲ್ಕದಿಂದ ವಾರ್ಷಿಕ ಅಂದಾಜು ೧.೨೦ ಕೋಟಿ ರು. ಮಾತ್ರ ಸಂಗ್ರಹವಾಗುತ್ತಿದೆ. ಹಾಗಾಗಿ, ಸರ್ಕಾರ ನಿಗದಿಪಡಿಸಿರುವ ಗೌರ ವಧನವನ್ನು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಶುಲ್ಕದಿಂದ ಭರಿಸುವುದು ಅಸಾಧ್ಯವಾಗಿದೆ ಎಂದಿದ್ದಾರೆ.

ಈಗಾಗಲೇ ಹೆಚ್ಚಿನ ಶುಲ್ಕ ಪಾವತಿಸುತ್ತಿರುವ ಗ್ರಾಮೀಣ, ರೈತ ಹಾಗೂ ಕಾರ್ಮಿಕ ಕುಟುಂಬಗಳ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇರುತ್ತದೆ. ಇದು ಸಾಮಾಜಿಕ ನ್ಯಾಯ ಹಾಗೂ ಶಿಕ್ಷಣದಲ್ಲಿ ಸಮಾನ ಅವಕಾಶವೆಂಬ ಸರ್ಕಾರದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಸಮರ್ಪಕ ಗೌರವಧನದ ಭರವಸೆ ಇಲ್ಲದ ಅನುಭವಿ ಅತಿಥಿ ಉಪನ್ಯಾಸಕರು ಸೇವೆಯಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ. ಇದರಿಂದ ಪರೀಕ್ಷಾ ಮಂಡಳಿ, ಪಠ್ಯಕ್ರಮ ರಚನಾ ಮಂಡಳಿ ಹಾಗೂ ಸೆಮಿಸ್ಟರ್ ಪದವಿ ಪರೀಕ್ಷಾ ಕಾರ್ಯಗಳಲ್ಲಿ ಅನುಭವಿ ಉಪನ್ಯಾಸಕರ ಕೊರತೆ ಎದುರಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ತರಗತಿಗಳು, ಪರೀಕ್ಷೆಗಳು, ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳು ಹಾಗೂ ಗುಣಮಟ್ಟದ ಮೇಲೆ ನೇರ ಪರಿಣಾಮ ಉಂಟಾಗಲಿದ್ದು ಉನ್ನತ ಶಿಕ್ಷಣದ ಗುಣಮಟ್ಟ ಕುಸಿಯುವುದರ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕೂ ಧಕ್ಕೆಯಾಗಲಿದೆ. ವಿಶ್ವವಿದ್ಯಾಲಯಗಳ ಆರ್ಥಿಕ ಬಲವರ್ಧನೆ, ಆಡಳಿತಾತ್ಮಕ ಸುಧಾರಣೆ ಹಾಗೂ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಈಗಾಗಲೇ ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಿದ್ದು, ಉಪಸಮಿತಿಯ ವರದಿ ಆಧರಿಸಿ ಕ್ರಮವಹಿಸುವ ಮುನ್ನವೇ ವಿಶ್ವವಿದ್ಯಾಲಯಗಳ ಆರ್ಥಿಕ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಇಂತಹ ಮಹತ್ವದ ನಿರ್ಧಾರವನ್ನು ಕೈಗೊಂಡಿರುವುದು ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ.

ವಿಶ್ವವಿದ್ಯಾಲಯಗಳ ಆರ್ಥಿಕ ಸದೃಢತೆ ಮತ್ತು ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಅಗತ್ಯವಿರುವ ಶಾಶ್ವತ ಆರ್ಥಿಕ ಹಾಗೂ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೆ ತರಬೇಕು. ವಿಶ್ವವಿದ್ಯಾಲಯಗಳು ಕಾಯಂ ಬೋಧಕರನ್ನು ನೇಮಿಸಿಕೊಳ್ಳುವವರೆಗೂ ಕಾಲೇಜು ಶಿಕ್ಷಣ ಇಲಾಖೆಯಿಂದಲೇ ಅತಿಥಿ ಉಪನ್ಯಾಸಕರನ್ನು ನೇಮಿಸಿ ವೇತನ ಪಾವತಿಸಬೇಕು ಎಂದು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬದುಕಿನ ಸವಾಲು ಎದುರಿಸಲು ಪುಸ್ತಕ ಓದಿ: ಡಾ.ಮಾನಸ
ಮಂಡ್ಯದ ಸಿದ್ಧಗಂಗಾಶ್ರೀ ಉದ್ಯಾನವನದಲ್ಲಿ ಮಳೆಗಾಗಿ ಪ್ರಾರ್ಥನೆ