ಧರ್ಮ ಬಿಟ್ಟು ಭಾರತ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ

KannadaprabhaNewsNetwork |  
Published : Nov 12, 2026, 02:00 AM IST
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತಾಳೂರು ಗ್ರಾಮದ ಈಶ್ವರ ದೇವಸ್ಥಾನ ಆವರಣದಲ್ಲಿಅಂಕುರ ಹಾಗೂ ಲೋಹಿಯಾ ಪ್ರಕಾಶನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕ ಚಂದ್ರಕಾಂತವಡ್ಡು ಅವರ 'ಹತ್ತು ಮತ್ತೊಂದು' ಹಾಗೂ ಅನಿಕೇತನ ಸುವ್ವಿ ಅವರ 'ಲೀಗಲ್ ಪರ್ಸನಾಲಿಟೀಸ್ಆಫ್ ಲೈಫ್ ಅಂಡ್ ಲೆಸನ್ಸ್' ಕೃತಿಗಳ ಲೋಕಾರ್ಪಣೆಗೊಳಿಸಲಾಯಿತು. | Kannada Prabha

ಸಾರಾಂಶ

ಮನುಷ್ಯನ ಬದುಕಿನಲ್ಲಿ ಸಿದ್ಧಾಂತ, ನಂಬಿಕೆ ಹಾಗೂ ವಿಚಾರಧಾರೆಗಳು ಮಹತ್ವದ ಪಾತ್ರ ವಹಿಸುತ್ತವೆ

ಬಳ್ಳಾರಿ: ಧರ್ಮ ಬಿಟ್ಟು ಭಾರತ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.ಅತ್ಯಂತ ಸೈದ್ಧಾಂತಿಕ ಚಿಂತನೆ ಹೊಂದಿದ್ದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ಧರ್ಮದ ಮಹತ್ವ ಸಾರಿದ್ದಾರೆ. ಧರ್ಮವನ್ನು ಸಂಪೂರ್ಣವಾಗಿ ಬಿಟ್ಟು ಬದುಕಲು ಸಾಧ್ಯವಿಲ್ಲ ಎಂಬುದಕ್ಕೆ ಕಾರ್ಲ್ ಮಾರ್ಕ್ಸ್ ಉದಾಹರಣೆಯಾಗುವುದಿಲ್ಲ. ಬದಲಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಬದುಕು ಮತ್ತು ಚಿಂತನೆಗಳು ಇದಕ್ಕೆ ಸೂಕ್ತ ಉದಾಹರಣೆಯಾಗುತ್ತವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಚಿಂತಕ ಡಾ.ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.

ಸಂಡೂರು ತಾಲೂಕಿನ ತಾಳೂರು ಗ್ರಾಮದ ನಾರಿಹಳ್ಳದಂಡೆ ಬಳಿಯ ಈಶ್ವರ ದೇವಸ್ಥಾನದ ಆವರಣದಲ್ಲಿ ಅಂಕುರ ಪ್ರಕಾಶನ ಹಾಗೂ ಲೋಹಿಯಾ ಪ್ರಕಾಶನದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲೇಖಕ ಚಂದ್ರಕಾಂತ ವಡ್ಡು ಅವರ ಹತ್ತು ಮತ್ತೊಂದು ಹಾಗೂ ಅನಿಕೇತನ ಸುವ್ವಿ ಅವರ ಲೀಗಲ್ ಪರ್ಸನಾಲಿಟೀಸ್ ಆಫ್ ಲೈಫ್ ಅಂಡ್ ಲೆಸನ್ಸ್ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

ಮನುಷ್ಯನ ಬದುಕಿನಲ್ಲಿ ಸಿದ್ಧಾಂತ, ನಂಬಿಕೆ ಹಾಗೂ ವಿಚಾರಧಾರೆಗಳು ಮಹತ್ವದ ಪಾತ್ರ ವಹಿಸುತ್ತವೆ. ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ನಮ್ಮ ಮೇಲೆ ಪ್ರಭಾವ ಬೀರುವ ಸೈದ್ಧಾಂತಿಕ ಒತ್ತಡ ನಮ್ಮ ಆಲೋಚನೆ, ನಡೆ-ನುಡಿ ಹಾಗೂ ಬದುಕಿನ ದಿಕ್ಕನ್ನೇ ಬದಲಾಯಿಸಬಹುದು. ಆದರೆ, ಮನುಷ್ಯ ಎಷ್ಟೇ ಸೈದ್ಧಾಂತಿಕವಾಗಿ ಪ್ರಭಾವಿತನಾಗಿದ್ದರೂ ತನ್ನ ಮೂಲ ಬೇರುಗಳಿಂದ ಸಂಪೂರ್ಣವಾಗಿ ದೂರವಾಗಲು ಸಾಧ್ಯವಿಲ್ಲ. ಕಾಲದ ಪ್ರಭಾವಕ್ಕೆ ಒಳಗಾಗಿ ಹೊಸ ವಿಚಾರ ಅಳವಡಿಸಿಕೊಂಡರೂ ಆತನ ಬದುಕಿನ ಮೂಲ ನೆಲೆಗಳು, ಸಾಂಸ್ಕೃತಿಕ ಹಿನ್ನೆಲೆ, ಸಾಮಾಜಿಕ ಪರಿಸರ ಹಾಗೂ ಪರಂಪರೆಯ ಪ್ರಭಾವ ಮತ್ತೆ ಮತ್ತೆ ಆತನನ್ನು ಆವರಿಸಿಕೊಳ್ಳುತ್ತವೆ. ಮನುಷ್ಯನ ಬದುಕಿನಲ್ಲಿ ಬದಲಾವಣೆ ಸಹಜವಾದರೂ ಮೂಲ ಬೇರುಗಳೊಂದಿಗಿನ ಸಂಬಂಧ ಅಷ್ಟೇ ಪ್ರಬಲವಾಗಿರುತ್ತದೆ ಎಂದು ವಿಶ್ಲೇಷಿಸಿದರು.

ಇದೇ ವೇಳೆ ಚಂದ್ರಕಾಂತ ವಡ್ಡು ಅವರ ಕಥೆಗಳಲ್ಲಿ ಬರುವ ಪಾತ್ರ, ವಿವಿಧ ಸನ್ನಿವೇಶ, ಕಥಾನಾಯಕ ಬಾಲ್ಯಸ್ನೇಹಿತರ ನಿರ್ವಹಿಸುವ ಜವಾಬ್ದಾರಿ, ಕಥೆಗಳಲ್ಲಿ ಬರುವ ಓಸಿ ಮಲ್ಲೇಶಿ, ಅಗಸರ ಎಲ್ಲೋಜಿ, ಬಷೀರ್‌ಸಾಬ್, ನರೆಂದ್ರ, ರಾಮುಡು, ಸದಾಶಿವ ಪಾತ್ರಗಳ ಕುರಿತು ಡಾ.ವೆಂಕಟಗಿರಿ ದಳವಾಯಿ ವಿವರಿಸಿದರಲ್ಲದೆ ಲೇಖಕ ಚಂದ್ರಕಾಂತ ವಡ್ಡು ಅವರ ಕೃತಿಗಳಲ್ಲಿ ಪತ್ರಕರ್ತ ಹಾಗೂ ಲೇಖಕ ಲಂಕೇಶ್, ನವ್ಯ, ದಲಿತ, ಬಂಡಾಯದ ಪ್ರಭಾವ ಕಂಡು ಬರುತ್ತವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಲೋಹಿಯಾ ಪ್ರಕಾಶನದ ಮುಖ್ಯಸ್ಥ ಸಿ. ಚನ್ನಬಸವಣ್ಣ, ಲೇಖಕ ಚಂದ್ರಕಾಂತ ವಡ್ಡು ಅವರು ಕೃತಿ ಲೋಕಾರ್ಪಣೆ ಸಮಾರಂಭವನ್ನು ಬೆಂಗಳೂರು, ಬಳ್ಳಾರಿಯಲ್ಲಿ ಹಮ್ಮಿಕೊಳ್ಳಬಹುದಿತ್ತು. ಆದರೆ, ಊರ ಮೇಲಿನ ಪ್ರೀತಿಯಿಂದ ತಾಳೂರು ಗ್ರಾಮದಲ್ಲಿ ಕೃತಿ ಲೋಕಾರ್ಪಣೆ ಸಮಾರಂಭ ಹಮ್ಮಿಕೊಂಡಿದ್ದಾರೆ. ನಮ್ಮ ಜನರೊಂದಿಗೆ ಇರಬೇಕು ಎಂಬ ಕಾರಣಕ್ಕಾಗಿಯೇ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಒಂದೇ ವೇದಿಕೆಯಲ್ಲಿ ತಂದೆ ಮತ್ತು ಮಗನ ಕೃತಿಗಳು ಜನಾರ್ಪಣೆಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್ ಎನ್.ಅವರು ಎರಡು ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ರಿನಿ ಸಿದ್ಧರಾಮೇಶ್ವರ ಗಟ್ಟಿನ ಅನಿಕೇತನ ಸುವ್ವಿ ಅವರ ಲೀಗಲ್ ಪರ್ಸನಾಲಿಟೀಸ್ ಆಫ್ ಲೈಫ್ ಅಂಡ್ ಲೆಸನ್ಸ್ ಕೃತಿ ಮಾತನಾಡಿದರು. ಪ್ರಾಸ್ತಾವಿಕ ಮಾತನಾಡಿದ ಲೇಖಕ ಚಂದ್ರಕಾಂತ ವಡ್ಡು, 32 ವರ್ಷಗಳ ಹಿಂದೆ ನಾರಿಹಳ್ಳದ ದಂಡೆಯಲ್ಲಿ ಹೆಸರಿನಲ್ಲಿ ಕಥಾ ಸಂಕಲನ ಪ್ರಕಟವಾಗಿತ್ತು. ಲೋಹಿಯಾ ಪ್ರಕಾಶನದ ಚನ್ನಬಸವಣ್ಣನವರು ಪ್ರಕಟಿಸಿದ್ದರು. ಹುಬ್ಬಳ್ಳಿಯಲ್ಲಿ ಜರುಗಿದ ನನ್ನ ಸರಳ ಮದುವೆ ಸಮಾರಂಭದಲ್ಲಿ ನಾರಿಹಳ್ಳ ದಂಡೆಯಲ್ಲಿ ಕೃತಿ ನನ್ನ ಪತ್ನಿಯೇ ಬಿಡುಗಡೆಗೊಳಿಸಿದ್ದರು. ಈ ಕೃತಿಗೆ ಮತ್ತೊಂದು ಕಥೆ ಸೇರಿ ಪರಿಷ್ಕೃತ ಮುದ್ರಣದೊಂದಿಗೆ ಹತ್ತು ಮತ್ತೊಂದು ಹೆಸರಿನಲ್ಲಿ ಪುಸ್ತಕ ಸಿದ್ಧವಾಗಿತ್ತು. ಅದನ್ನು ನಾರಿಹಳ್ಳಿಯ ದಂಡೆಯಲ್ಲಿಯೇ ಕೃತಿ ಲೋಕಾರ್ಪಣೆಗೊಳಿಸಬೇಕು ಎಂಬುದು ನನ್ನ ಕನಸಾಗಿತ್ತು. ನನ್ನ ಕನಸು ಇಂದು ನನಸಾಗಿರುವುದು ಖುಷಿ ತಂದಿದೆ. ಕಥಾ ಸಂಕಲನದ ಕಥೆಯ ಸನ್ನಿವೇಶ, ಪಾತ್ರಗಳು,ಸಂಭಾಷಣೆ ಎಲ್ಲ ನಡೆದದ್ದು ವಡ್ಡು, ತಾಳೂರು, ಬಸಾಪುರ ಸುತ್ತಲಿನ ಗ್ರಾಮಗಳಲ್ಲಿ ಎಂಬುದು ವಿಶೇಷ ಎಂದರು.

ನಾರಿಹಳ್ಳದ ದಂಡೆಯ ಕೃತಿಯ ಜತೆಗೆ ನನ್ನ ಮಗ ಅನಿಕೇತನ ಸುವ್ವಿ ಅವರ ಕೃತಿ ಸಹ ಬಿಡುಗಡೆಯಾಗುತ್ತಿದೆ. ಅಪ್ಪ-ಮಗನ ಪುಸ್ತಕಗಳು ಒಂದೇ ವೇದಿಕೆಯಲ್ಲಿ ಇಂದು ಬಿಡುಗಡೆಯಾಗುತ್ತಿವೆ. ಊರಿನ ನೆನಪು, ಒಡನಾಟದ ಮುಖಗಳು ಸದಾ ನೆನಪಿನಲ್ಲುಳಿದಿವೆ ಎಂದು ಸ್ಮರಿಸಿದರು. ಪರಿಸರ ವಾದಿ ಮೂಲೆಮನಿ ಈರಣ್ಣನವರು ತಮ್ಮ ಪರಿಸರ ಪ್ರೇಮ ಕುರಿತು ವಿವರಿಸಿದರು.

ಲೇಖಕ ಚಂದ್ರಕಾಂತ ವಡ್ಡು ತಮ್ಮ ಕೃತಿ ಪರಿಸರವಾದಿ ಮೂಲೆಮನಿ ಈರಣ್ಣನವರಿಗೆ ಸಮರ್ಪಿಸಿ, ಗೌರವ ಸಮರ್ಪಣೆ ಮಾಡಿದರು. ಹಿರಿಯ ಬಯಲಾಟ ಕಲಾವಿದ ಬಂಡ್ರಿ ಲಿಂಗಪ್ಪ, ಶ್ರೀಶೈಲ ಆಲ್ದಳ್ಳಿ, ಹೊಸಗೇರಪ್ಪ, ಕವಯತ್ರಿ ಅಂಕಲಿ ಬಸಮ್ಮ, ಲೇಖಕ ಅಬ್ದುಲ್ ಹೈ ತೋರಣಗಲ್ಲು, ಕುಡಿತಿನಿ ಗೌರಣ್ಣ, ಸಾಹಿತಿ ಮಲ್ಲಿಕಾರ್ಜುನ, ಬಯಲಾಟ ಕಲಾವಿದ ಹಾಲಪ್ಪ, ಶಿಕ್ಷಕ ವೀರೇಶಯ್ಯ, ಲೇಖಕ ವೀರೇಂದ್ರ ರಾವಿಹಾಳು, ಹಿರಿಯ ವಕೀಲ ಅಂಕಲಯ್ಯಸ್ವಾಮಿ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಗುರುಸ್ವಾಮಿ ಇತರರಿದ್ದರು. ಸಹನಾ ಲಿಂಗಶೆಟ್ಟಿ, ಬಂಡ್ರಿ ಯಂಕಪ್ಪ ಹಾಗೂ ದುರಗಪ್ಪ ಪೂಜಾರ್ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌