ಲಕ್ಷ್ಮೇಶ್ವರ:ಕಲಿತ ಶಾಲೆಯ ಋಣ ತೀರಿಸುವುದು ಅಸಾಧ್ಯ, ಆದರೆ ನಮಗೆ ಸಿಕ್ಕ ಕೆಲ ಅವಕಾಶ ಬಳಸಿಕೊಂಡು ಇತರ ಬಡ ವಿದ್ಯಾರ್ಥಿಗಳಿಗೆ ಕೈಲಾದ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ಶಿರಹಟ್ಟಿ ತಾಲೂಕಿನ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಚ್.ಎಸ್. ರಾಮನಗೌಡರ ಹೇಳಿದರು.
ಮಂಗಳವಾರ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ವಿಶೇಷ ಚೇತನ ವಿದ್ಯಾರ್ಥಿ ವಿನಾಯಕ ಮಡಿವಾಳರ ಹುಟ್ಟುಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಪೆನ್ನು ವಿತರಣೆ ಮಾಡಿ ಅವರು ಮಾತನಾಡಿದರು.ಪಟ್ಟಣದ ವಿನಾಯಕ ಮಡಿವಾಳರ ಎಂಬ ವಿಶೇಷಚೇತನ ಯುವಕ ತನಗೆ ಬಂದ ಮಾಸಾಶನ ಹಣ ಕೂಡಿಟ್ಟು ಪ್ರತಿ ವರ್ಷ ತನ್ನ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಹಾಗೂ ನಲಿ ಕಲಿ ವಿದ್ಯಾರ್ಥಿಗಳಿಗೆ ಬರವಣಿಗೆ ಕಿಟ್ಟನ್ನು ವಿತರಿಸುವ ಮಹಾನ್ ಕಾರ್ಯ ನಿಜವಾಗಿಯ ಶ್ಲಾಘನೀಯ. ನಾವು ಕಲಿತ ಶಾಲೆಗೆ ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದಾಗ ಮಾತ್ರ ಅದರ ಋಣ ತೀರಿಸಲು ಸಾಧ್ಯ ಎಂದು ಹೇಳಿದರು.
ಸಿಆರ್‌ಪಿ ಸಂಪನ್ಮೂಲ ವ್ಯಕ್ತಿ ಸತೀಶ ಭೋಮಲೆ ಮಾತನಾಡಿ, ವಿನಾಯಕ ಮಡಿವಾಳರ ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು ತನಗೆ ಬಂದ ಮಸಾಶನದ ಹಣ ಕೂಡಿಟ್ಟು ಶಾಲಾ ಮಕ್ಕಳಿಗೆ ಪ್ರತಿ ವರ್ಷ ನೋಟ್ ಬುಕ್ ಹಾಗೂ ಬರವಣಿಗೆ ಕಿಟ್ಟನ್ನು ವಿತರಿಸುವುದು ಒಂದು ಮಾದರಿಯ ಕಾರ್ಯವಾಗಿದೆ ಎಂದರು.ಈ ವೇಳೆ ಶಾಲೆಯ ಪ್ರಧಾನ ಶಿಕ್ಷಕ ಬಸವರಾಜ ಕುಂಬಾರ, ವಿಶ್ರಾಂತ ಶಿಕ್ಷಕ ಈರಣ್ಣ ಮಡಿವಾಳರ, ಎಸ್.ವಿ. ಅಂಗಡಿ, ಮಾಜಿ ಸೈನಿಕ ಸಂಜೀವಣ್ಣನವರ, ಸಿಆರ್‌ಪಿ ಉಮೇಶ ನೇಕಾರ, ಶಿಕ್ಷಕಿ ಎಚ್.ಡಿ. ನಿಂಗರೆಡ್ಡಿ, ಆರ್.ಎಂ.ಶಿರಹಟ್ಟಿ, ಆರ್.ಕೆ.ಉಪನಾಳ, ಎಲ್.ಎ. ಬಣಕಾರ, ಅತಿಥಿ ಶಿಕ್ಷಕಿ ನೇತ್ರಾವತಿ ಕುಂಬಾರ, ಗೀತಾ ಗುರಿಕಾರ, ವಿದ್ಯಾರ್ಥಿಗಳು ಇದ್ದರು.