ವಿಶ್ವಕ್ಕೆ ಚಂದ್ರನಲ್ಲಿ ನೀರು ತೋರಿಸಿದ್ದು ಭಾರತದ ಹೆಮ್ಮೆ: ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್

KannadaprabhaNewsNetwork |  
Published : Feb 06, 2024, 01:30 AM IST
5ಶಿರಾ1: ತಾಲೂಕಿನ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ವೇದಿಕೆಯಲ್ಲಿ ಸೋಮವಾರ ಶಿಕ್ಷಣ ಇಲಾಖೆ ಆಯೋಜಿಸಿದ್ದ ವಿಜ್ಞಾನ ಮೇಳ ಹಾಗೂ ಶಿಕ್ಷಕರಿಗೆ ಮೌಲ್ಯಯುತ ಶಿಕ್ಷಣ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಉದ್ಘಾಟಿಸಿದರು. ಶ್ರೀ ನಂಜಾವಧೂತ ಸ್ವಾಮೀಜಿ, ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಸೇರಿದಂತೆ ಹಲವರು ಹಾಜರಿದ್ದರು.  | Kannada Prabha

ಸಾರಾಂಶ

ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಪ್ರಶ್ನಿಸುವ ಮನೋಭಾವ, ಕುತೂಹಲ ಉಂಟಾಗುತ್ತದೆ. ಆಗ ಪೋಷಕರು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿದೆ, ತಮ್ಮ ಒತ್ತಡದ ಬದುಕಿಗೆ ಮಕ್ಕಳ ಬಾಲ್ಯದ ಅಮೂಲ್ಯ ಕ್ಷಣಗಳನ್ನು ಚಿವುಟಬಾರದು.

ಕನ್ನಡಪ್ರಭ ವಾರ್ತೆ ಶಿರಾ

ಮಹತ್ವಾಕಾಂಕ್ಷೆಯ ಚಂದ್ರಯಾನ-1 ಯಶಸ್ವಿಯಾಗಿ ಚಂದ್ರನಲ್ಲಿ ನೀರಿದೆ ಎಂದು ಜಗತ್ತಿಗೆ ತೋರಿಸಿದ್ದು ನಮ್ಮ ದೇಶದ ಹೆಮ್ಮೆ. 2040 ರಲ್ಲಿ ಚಂದ್ರನ ಮೇಲೆ ಮಾನವನನ್ನು ಕಳುಹಿಸಲು ಇಸ್ರೋ ತಯಾರಿ ನಡಸಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಹೇಳಿದರು.

ತಾಲೂಕಿನ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ವೇದಿಕೆಯಲ್ಲಿ ಸೋಮವಾರ ಶಿಕ್ಷಣ ಇಲಾಖೆ ಆಯೋಜಿಸಿದ್ದ ವಿಜ್ಞಾನ ಮೇಳ ಹಾಗೂ ಶಿಕ್ಷಕರಿಗೆ ಮೌಲ್ಯಯುತ ಶಿಕ್ಷಣ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಪ್ರಶ್ನಿಸುವ ಮನೋಭಾವ, ಕುತೂಹಲ ಉಂಟಾಗುತ್ತದೆ. ಆಗ ಪೋಷಕರು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿದೆ, ತಮ್ಮ ಒತ್ತಡದ ಬದುಕಿಗೆ ಮಕ್ಕಳ ಬಾಲ್ಯದ ಅಮೂಲ್ಯ ಕ್ಷಣಗಳನ್ನು ಚಿವುಟಬಾರದು ಎಂದು ಕಿವಿಮಾತು ಹೇಳಿದರು.

ಎಷ್ಟೋ ಸಂಶೋಧನೆಗಳ ಹಿಂದೆ ಕುತೂಹಲವೇ ಮೂಲವಾಗಿದೆ, ಇದನ್ನು ತಣಿಸುವ ಸಾಹಸವೇ ಪ್ರಯತ್ನವಾಗಿದ್ದು, ಪ್ರತಿಯೊಬ್ಬರೂ ಹೊಸತನ್ನು ಸಂಶೋಧಿಸುವಲ್ಲಿ ಪ್ರಯತ್ನಿಸುವ ಮನೋಭಾವ ರೂಡಿಸಿಕೊಳ್ಳಬೇಕು ಎಂದರು.

ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ, ವಿಜ್ಞಾನವೆಂದರೆ ಹೊಸತನ ಹುಡುಕುವ ಮೂಲವಾಗಿದೆ. ಮಕ್ಕಳು ಮಾರ್ಗದರ್ಶನ ಪಡೆದು ಪ್ರತಿಭಾನ್ವಿತರಾಗಿ ಹೊರಹೊಮ್ಮಬೇಕಿದೆ ಎಂದರು.

ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಮಾತನಾಡಿ, ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶವು ಬಾಹ್ಯಾಕಾಶ ಸಂಶೋಧನೆಯಲ್ಲಿ ಸಾಕಷ್ಟು ಪ್ರಯೋಗಾರ್ಥ ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ. ಅಲ್ಲದೇ, ಪ್ರಧಾನಿ ಮೋದಿಯವರು ಖುದ್ದಾಗಿ ಇಸ್ರೋ ಸಂಸ್ಥೆಗೆ ಭೇಟಿ ನೀಡಿ ವಿಜ್ಞಾನಿಗಳನ್ನು ಹುರಿದುಂಬಿಸಿ ಪ್ರೋತ್ಸಾಹ ನೀಡಿದ್ದಾರೆ. ಚಂದ್ರಯಾನ, ಮಂಗಳಯಾನ, ಸೂರ್ಯಯಾನದಂತಹ ಯೋಜನೆಗಳು ನಮ್ಮ ದೇಶವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಮೇರುಶಕ್ತಿಯನ್ನಾಗಿ ಹೊರಹೊಮ್ಮಿಸಿವೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಮೌಲ್ಯದ ಶಿಕ್ಷಣ ನೀಡಿ ಉತ್ತಮ ಪ್ರಜೆಗಳಾಗಿ ರೂಪಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ ಎಂದರು.

ಶಿಕ್ಷಣ ಸಮನ್ವಯಾಧಿಕಾರಿ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ಕೃಷ್ಣಪ್ಪ, ಮಧುಗಿರಿ ಡಯಟ್ ಪ್ರಾಂಶುಪಾಲ ಗಂಗಾಧರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗಂಗಾಧರ್, ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಪ್ರಾಂಶುಪಾಲ ತಿಮ್ಮರಾಜು, ಕ್ಷೇತ್ರ ಸಂಪನ್ಮೂಲ ಸಮನ್ವಯ ವ್ಯಕ್ತಿ ಕುಮಾರ್, ಮುಖಂಡರಾದ ಶ್ರೀನಿವಾಸ್ ಮಂಜುನಾಥ್ ಹನುಮಂತರಾಜು, ವಿಜಯಕುಮಾರ್, ಎ.ಆರ್. ಶ್ರೀನಿವಾಸಯ್ಯ, ಸುಹಾಸಿನಿ ಕಿರಣ್ ಕುಮಾರ್ ಸೇರಿ ಹಲವರಿದ್ದರು.

ವಿದ್ಯಾರ್ಥಿನಿಯ ‘ಆಟೋಮ್ಯಾಟಿಕ್ ಪೆಸ್ಟಿಸೈಡ್ ಸ್ಪೇಯರ್’ ಅಂತರಾಷ್ಟ್ರೀಯ ಪ್ರದರ್ಶನಕ್ಕೆ ಸಜ್ಜು

2024ರ ಮೇ ನಲ್ಲಿ ಜಪಾನ್ ದೇಶದಲ್ಲಿ ನಡೆಯುವ ಅಂತಾರಾಷ್ಟ್ರೀಯ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಅಯ್ಕೆಯಾದ ತಾಳಗುಂದ ಸರಕಾರಿ ಶಾಲೆಯ ಶಿಕ್ಷಕಿ ರೂಪರವರ ಮಾರ್ಗದರ್ಶನದಲ್ಲಿ ೯ನೇ ತರಗತಿ ವಿದ್ಯಾರ್ಥಿನಿ ಪ್ರಿಯಾಂಕ ರೂಪಿಸಿದ ‘ಆಟೋಮ್ಯಾಟಿಕ್ ಪೆಸ್ಟಿಸೈಡ್ ಸ್ಪೇಯರ್’ ಸಾಧನವನ್ನು ವೀಕ್ಷಿಸಿದ ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ , ಪ್ರತಿಭಾವಂತ ಪ್ರೌಢಶಾಲಾ ಹಂತದ ಮಕ್ಕಳಿಗಾಗಿ ಇಸ್ರೋದಲ್ಲಿ ಸಂಶೋಧನೆಗೆ ಅವಕಾಶವಿದ್ದು, ಇದರ ಪ್ರಯೋಜನ ಪಡೆಯಲು ಸಲಹೆ ನೀಡಿದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ