ವಚನ ದರ್ಶನ ಮಿಥ್ಯ ವಿರುದ್ಧ ಸತ್ಯ ಗ್ರಂಥ ಬಿಡುಗಡೆ ಸಮಾರಂಭ । ವಚನ ಸಾಹಿತ್ಯ ಎರವಲು ತಂದಿದ್ದಲ್ಲ । ಕನ್ನಡದ ಸ್ವಯಾರ್ಜಿತ ಸ್ವತ್ತು: ಸಾಣೇಹಳ್ಳಿ ಶ್ರೀಗಳು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಚನ ತತ್ತ್ವವನ್ನು ತಿಳಿದುಕೊಳ್ಳುವ ಹಂಬಲ ಇದ್ದರೆ ಸಾಲದು, ಅದನ್ನು ತಿಳಿದುಕೊಳ್ಳುವ ಸರಿಯಾದ ಮಾರ್ಗ ಹಿಡಿಯದ ಹೊರತು ಅದು ಸಾಧ್ಯವಿಲ್ಲ. ತಪ್ಪು ದಾರಿ ಹಿಡಿದು ಬಲು ದೂರ ಬಂದಾಗಿದೆ. ಅದೇ ದಾರಿಯಲ್ಲಿಯೇ ಮುಂದುವರಿಯುತ್ತೇನೆ ಮತ್ತು ವಚನ ಮಾರ್ಗದ ತತ್ವದ ದಾರಿಯನ್ನೇ ಹಿಡಿಯುತ್ತೇನೆ ಎಂದರೆ ಆಗದು. ಸರಿಯಾದುದ್ದನ್ನು ದಕ್ಕಿಸಿಕೊಳ್ಳಬೇಕಾದರೆ ಸರಿಯಿಲ್ಲದ ದಾರಿಯನ್ನು ತ್ಯಜಿಸಿ, ಸರಿಯಾದ ದಾರಿ ಹಿಡಿಯಬೇಕಾದದ್ದು ಅನಿವಾರ್ಯ ಎಂದು ಸಾಹಿತಿ ರವೀಶ್ ಕ್ಯಾತನಬೀಡು ಹೇಳಿದರು.ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ರಾಷ್ಟ್ರೀಯ ಬಸವದಳ, ಬಸವಪರ ಸಂಘಟನೆಗಳು ಹಾಗೂ ಕದಳಿ ಮಹಿಳಾ ವೇದಿಕೆ ಸಂಯುಕ್ತಾಶ್ರಯದಲ್ಲಿ ನಗರದ ನಾಯ್ಡು ಕಲ್ಯಾಣ ಮಂಟಪದಲ್ಲಿ ನಡೆದ ವಚನ ದರ್ಶನ ಮಿಥ್ಯ ವಿರುದ್ಧ ಸತ್ಯ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಕುರಿತು ಮಾತನಾಡಿದರು.
ವಚನ ಧರ್ಮ ಆಳವಾದುದು, ಇದಿರಾಗುವುದು ಸುಲಭವಲ್ಲ, ಅರಿತುಕೊಳ್ಳುವುದೂ ಸುಲಭವಲ್ಲ. ಶಾಂತವಾದದ್ದು, ಉದಾತ್ತ ವಾದದ್ದು, ಸಾಮಾನ್ಯ ತರ್ಕಕ್ಕೆ ಸಿಗಲಾರದ್ದು. ಸೂಕ್ಷ್ಮವಾದದ್ದು ವಿವೇಕಿಗಳಿಗೆ ಮಾತ್ರ ದಕ್ಕುವಂತಹದ್ದು ಇದು ವಚನ ಧರ್ಮದ ಬಗ್ಗೆ ಅನೇಕರು ಹೇಳಿದ ಮಾತು. ಈ ಮಾತನ್ನು ತುಂಬಾ ಎಚ್ಚರಿಕೆಯಿಂದ ಪರಿಭಾವಿಸಬೇಕು ಎಂದರು.ಇತ್ತೀಚೆಗೆ ಅನೇಕರು ವಚನ ಸಾಹಿತ್ಯದ ತಾತ್ವಿಕತೆಯ ದಿಕ್ಕುತಪ್ಪಿಸುವ ಕೆಲಸವನ್ನು ನಿರಂತರವಾಗಿ ನಡೆಸುತ್ತಿರುವುದು ದುರಂತ. ಪರೋಕ್ಷವಾಗಿ ಬ್ರಾಹ್ಮಣ್ಯದ ಏರಿಕೆ ಕ್ರಮ ಜರುಗಿಸುತ್ತಿರುವುದು ವಚನ ದರ್ಶನಕ್ಕೆ ಮಾಡುವ ಅಪಮಾನ. ಶತ ಮಾನದಿಂದಲೂ ಏರಿಕೆ ಕ್ರಮ ವಿರೋಧಿಸಿದ ವಚನಕಾರರು ಪ್ರಮಾಣ ನಿರಾಕರಣೆ ಮಾಡುತ್ತಾ ವೇದ, ಆಗಮಗಳಿಗೆ ಒರೆಯ ಕಟ್ಟುವ ಮೂಲಕ ಪರಿಸರದ ವಿಜ್ಞಾನ, ಧರ್ಮವನ್ನು ನಮ್ಮ ನಡುವೆ ಬಿಟ್ಟು ಹೋಗಿದ್ದಾರೆ. ವಚನ ದರ್ಶನ ಪುಸ್ತಕದ ಹಿಂದೆ ಸ್ಥಾಪಿತ ಆರ್.ಎಸ್.ಎಸ್. ಇತರೆ ಸಂಘಟನೆಗಳು ಕೆಲಸ ಮಾಡುವಂತೆ ಕಾಣುತ್ತದೆ. ವಚನ ಸಾಹಿತ್ಯದ ನಡೆಕಾರರು ಈ ಎಚ್ಚರವನ್ನು ಗಮನಿಸಬೇಕಾಗಿದೆ. ಅವರು ಹೇಳುವ ಮಿಥ್ಯವನ್ನು ಕಳೆದು ವಚನ ಸತ್ಯ ಹೇಳಬೇಕಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಸಾಣೇಹಳ್ಳಿ ಪಂಡಿತರಾಧ್ಯ ಶ್ರೀಗಳು ನಮ್ಮ ಹೊರಗಿನ ಶತ್ರುಗಳನ್ನು ಅರಗಿಸಿಕೊಳ್ಳಬಹುದು ಆದರೆ ಒಳಗಿನ ಶತ್ರುಗಳು ಅಪಾಯಕಾರಿ ಎನ್ನುತ್ತಲೇ ವೇದ, ಆಗಮಗಳಲ್ಲಿ ಇರಬಹುದಾದ ಮನುಷ್ಯ ಶೋಷಿತ ನಡುವಳಿಕೆಗಳ ವಿರುದ್ಧ ಕಾಯಕ ಧರ್ಮ, ದಾಸೋಹ ಧರ್ಮ, ಪ್ರಸಾದ ಧರ್ಮ, ಸ್ತ್ರೀ ಸಮಾನತೆ, ಮೇಲು ಕೀಳಿಲ್ಲದ ಶರಣ ಸಮಾಜ ಕಟ್ಟಿದವರು ಬಸವಾದಿ ಶರಣರು ಎಂದು ನುಡಿದರು.ಹಿರಿಯ ಸಾಹಿತಿ ಎಂ.ಆರ್. ಶ್ರೀನಿವಾಸಮೂರ್ತಿ ಹೇಳುವಂತೆ ವಚನ ಸಾಹಿತ್ಯ ಎರವಲು ತಂದಿದ್ದಲ್ಲ, ಕನ್ನಡದ ಸ್ವಯಾರ್ಜಿತ ಸ್ವತ್ತು, ವಚನಕಾರರು ಸಂಸ್ಕೃತದ ಆಚಾರ್ಯರಲ್ಲ; ಅವರು ಅಚ್ಚ ಕನ್ನಡದ ಬೇಸಾಯಗಾರರು ಎನ್ನುವ ಮಾತಿನಂತೆ ವಚನ ದರ್ಶನ ಕನ್ನಡದ ಮೊಟ್ಟ ಮೊದಲ ಧರ್ಮ ಎಂದರು.ಪುಸ್ತಕ ಬಿಡುಗಡೆಗೊಳಿಸಿ ಶಾಸಕ ತಮ್ಮಯ್ಯ ಮಾತನಾಡಿ, ವಚನಗಳು ನಮ್ಮ ಬದುಕಿನ ದೀವಿಗೆಗಳು, ಆ ಬೆಳಕಿನಲ್ಲಿ ಈ ಸಮಾಜವನ್ನು ಕರೆದುಕೊಂಡು ಹೋಗಬೇಕಾಗಿದೆ. ಸಮ ಸಮಾಜದ ನಿರ್ಮಾಣವನ್ನು ಮಾಡಿದವರು ವಚನಕಾರರು ಎಂದು ಹೇಳಿದರು.ಅಕ್ಕನ ಬಳಗ ಹಾಗೂ ಬೇರೆ ಬೇರೆ ಸಂಘಟನೆಗಳು ವಚನ ಗಾಯನ ನಡೆಸಿಕೊಟ್ಟರು. ಪಾಂಡುಮಟ್ಟಿಯ ಗುರುಬಸವ ಸ್ವಾಮೀಜಿ ಹಾಗೂ ಬಸವ ಮಂದಿರದ ಡಾ. ಬಸವ ಮರುಳಸಿದ್ಧ ಶ್ರೀಗಳು ಮತ್ತು ಯಳ ನಾಡು ಮಠದ ಜ್ಞಾನಪ್ರಭು ಸಿದ್ಧರಾಮ ಶ್ರೀಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾ ಸಭಾದ ರಾಜ್ಯ ವಿಭಾಗೀಯ ಮುಖ್ಯಸ್ಥ ಮಹಾದೇವಪ್ಪ, ನಿವೃತ್ತ ನ್ಯಾಯಾಧೀಶ ಕೆಂಪಣ್ಣ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಗಂಗಾಧರ ಶಿವಪುರ, ಕಡೂರು ವಿರೂಪಾಕ್ಷ ಇದ್ದರು.
26 ಕೆಸಿಕೆಎಂ 2ಚಿಕ್ಕಮಗಳೂರಿನ ನಾಯ್ಡು ಕಲ್ಯಾಣ ಮಂಟಪದಲ್ಲಿ ನಡೆದ ವಚನ ದರ್ಶನ ಮಿಥ್ಯ ವಿರುದ್ಧ ಸತ್ಯ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು ಆಶೀರ್ವಚನ ನೀಡಿದರು.