ಚನ್ನಪಟ್ಟಣ: ತಾಲೂಕಿನಲ್ಲಿ ನಾನು ನಡೆಸುವ ಜನಸಂಪರ್ಕ ಸಭೆಗೆ ಸಂಬಂಧಿಸಿದಂತೆ ಕೆಲವರು ಸಂಸದರು ಇಲ್ಲಿಗೇಕೆ ಬರಬೇಕು ಅವರಿಗೆ ಏನು ಅಧಿಕಾರ ಇದೆ ಎಂದು ಪ್ರಶ್ನಿಸುತ್ತಾರೆ. ನನಗೆ ಅಧಿಕಾರ ನೀಡಿರುವುದು ಜನ, ನೀವು ಕೊಟ್ಟ ಅಧಿಕಾರವನ್ನು ಸಂಪೂರ್ಣವಾಗಿ ನಿಮ್ಮ ಜತೆ ಹಂಚಿಕೊಳ್ಳುವುದು ನನ್ನ ಹಕ್ಕು. ಯಾರಿಗೋ ಹೆದರಿಕೊಂಡು ಸಭೆ ರದ್ದು ಮಾಡುವುದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೆಸರೇಳದೇ ಪರೋಕ್ಷವಾಗಿ ಟಾಂಗ್ ನೀಡಿದರು.
ಕಲಾಪದಲ್ಲಿ ಪ್ರಸ್ತಾಪ:
ಸಂಸದರು ಯಾವ ಯಾವ ಪಂಚಾಯಿತಿಗಳಿಗೆ ಎಷ್ಟು ಬಾರಿ ಹೋಗಿ ಸಭೆ ನಡೆಸಿದ್ದಾರೆ. ಅದಕ್ಕೆ ತಗಲಿರುವ ವೆಚ್ಚವೆಷ್ಟು ಎಂದು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ನಾನೊಬ್ಬ ಜನಪ್ರತಿನಿಧಿಯಾಗಿದ್ದು, ತಮ್ಮ ಸಮಸ್ಯೆಗಳನ್ನು ಪರಿಹರಿಸಲಿ ಎಂದೇ ಜನ ನನ್ನನ್ನು ಚುನಾಯಿಸಿದ್ದಾರೆ. ಪ್ರಶ್ನೆ ಕೇಳುವುದಾದರೆ ಸಾರ್ವಜನಿಕವಾಗಿ ಕೇಳಿ ಮೂರನೇ ವ್ಯಕ್ತಿಯಿಂದ ಕೇಳಿಸುವುದಲ್ಲ ಎಂದು ಕಿಡಿಕಾರಿದರು.ಟಿ.ವಿ.ಯವರ ಮುಂದೆ ಮಾತನಾಡಿದರೆ ಪ್ರಚಾರ ಬರಬಹುದು. ಆದರೆ, ಇಲ್ಲಿ ಬಂದು ಕೇಳಿದಾಗ ಜನರ ಸಂಕಷ್ಟದ ಅರಿವಾಗಲಿದೆ. ಚನ್ನಪಟ್ಟಣದಲ್ಲಿ ಇ-ಖಾತೆ ಆಗುತ್ತಿಲ್ಲ, ಜನರಿಗೆ ತೊಂದರೆಯಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಪ್ರಶ್ನಿಸಬೇಕಿತ್ತು, ಸಾಗುವಳಿ ಚೀಟಿಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಬೇಕಿತ್ತು, ಇದನ್ನು ನಾನು ಸ್ವಾಗತಿಸುತ್ತಿದ್ದೆ ಎಂದರು.
ಕೆಲವರು ನಮ್ಮ ಗ್ಯಾರಂಟಿಗಳ ಕುರಿತು ಲೇವಡಿ ಮಾಡಿದರು. ಹಣ ಎಲ್ಲಿಂದ ಬರುತ್ತದೆ ಎಂದರು. ಆದರೆ, ಇಂದು ನಾವು ನಾಲ್ಕು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ನಿರುದ್ಯೋಗಿ ಪದವೀಧರರಿಗೆ ನೀಡಿರುವ ಐದನೇ ಗ್ಯಾರಂಟಿಯನ್ನು ಶೀಘ್ರದಲ್ಲೇ ಜಾರಿಗೆ ತರಲಿದ್ದೇವೆ. ಅನ್ನಭಾಗ್ಯ ಯೋಜನೆಗೆ ಹಣ ನೀಡುತ್ತೇವೆ ಎಂದರೂ ಕೇಂದ್ರ ಸರ್ಕಾರ ಅಕ್ಕಿ ನೀಡಲಿಲ್ಲ. ಆದರೆ, ಜನರ ಖಾತೆಗೆ ನಾವು ನೇರವಾಗಿ ಹಣ ಪಾವತಿಸುವ ಮೂಲಕ ನಮ್ಮ ಮಾತು ಉಳಿಸಿಕೊಂಡಿದ್ದೇವೆ ಎಂದರು.
ನಾವು ನಿಮ್ಮಂತೆ ಕೈಗಾರಿಕೋದ್ಯಮಿಗಳಿಗೆ ಸಹಕಾರ ನೀಡುತ್ತಿಲ್ಲ. ನಿಮ್ಮ ಪಾಲಸಿಗಳು ಅದಾನಿ, ಅಂಬಾನಿ ಅಂತಹ ಉದ್ಯಮಿಗಳಿಗೆ ಅನುಕೂಲವಾಗಿರುತ್ತದೆ. ಆದರೆ, ನಮ್ಮ ಪಾಲಸಿಗಳು ಬಡವರಿಗೆ ಅನುಕೂಲ ಕಲ್ಪಿಸುವುದಾಗಿದೆ. ನಿಮ್ಮಂತೆ ಉಳ್ಳವರಿಗೆ ಅನುಕೂಲ ಕಲ್ಪಿಸುವ ಕಾರ್ಯಗಳನ್ನು ನಾವು ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರವನ್ನು ತಿವಿದರು.
ಇಂದಿನ ಜನಸಂಪರ್ಕ ಸಭೆಯಲ್ಲಿ ರಸ್ತೆ, ಚರಂಡಿ, ಸೈಟು, ಮನೆ, ಇ-ಖಾತೆಗೆ ಸಂಬಂಧಿಸಿದಂತೆ, ಸಾರ್ವಜನಿಕ ಹಾಗೂ ವೈಯಕ್ತಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜನ ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳು ನ್ಯಾಯಬದ್ಧವಾಗಿ ನಡೆದುಕೊಂಡು ಜನರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ನಿವೇಶನ ರಹಿತರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಎಲ್ಲೆಲ್ಲಿ ಸರ್ಕಾರಿ ಭೂಮಿ ಇದೆಯೋ ಅಲ್ಲಿ ಭೂಮಿ ಗುರುತಿಸಿ ನಿವೇಶನ ನೀಡಲು ಸೂಚಿಸಲಾಗಿದೆ. ಸರ್ವೇ ಕಾರ್ಯ ಸಹ ಆರಂಭಗೊಂಡಿದೆ. ಇಲ್ಲಿ ಯಾವ ಶಾಸಕರು ಇದ್ದಾರೆ ಎನ್ನುವುದನ್ನು ನಾವು ನೋಡುವುದಿಲ್ಲ. ಜನರಿಗೆ ಅನುಕೂಲ ಕಲ್ಪಿಸುತ್ತೇವೆ ಎಂದರು.